ಪಾರಂಪರಿಕ ವೈದ್ಯರು ನಕಲಿ ಅಲ್ಲ !

Kannada News

19-06-2017

ಬೆಂಗಳೂರು: ರಾಜ್ಯದಲ್ಲಿರುವ ಪಾರಂಪರಿಕ ವೈದ್ಯರು ನಕಲಿ ಅಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್. ರಮೇಶಕುಮಾರ್ ಮೇಲ್ಮನೆಗಿಂದು ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಎಸ್.ವಿ. ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾರಂಪರಿಕ ವೈದ್ಯರನ್ನ ಒಂದು ಪ್ರತ್ಯೇಕ ಗುಂಪನ್ನಾಗಿ ಗುರುತಿಸಿ ಅವರ ಸೇವೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಪಾರಂಪರಿಕ ವೈದ್ಯರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಉನ್ನತ ಸಮಿತಿ ರಚಿಸಲಾಗಿದ್ದು ಆ ಸಮಿತಿ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸಲಿದೆ. ಆ ವರದಿ ಆಧಾರದ ಮೇಲೆ ಸರಕಾರ ಪಾರಂಪರಿಕ ವೈದ್ಯರಿಗೆ ಯಾವೆಲ್ಲ ಸೌಲಭ್ಯ ಕೊಡಬೇಕು ಹಾಗೂ ನಕಲಿ ವೈದ್ಯರ ವಿರುದ್ಧ ಯಾವ ಕ್ರಮ ಜರುಗಿಸಬೇಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ಸದಸ್ಯರಿಗೆ, ನಿಮ್ಮಷ್ಟು ಕಾಳಜಿ ತಮಗೂ ಇದೆ. ಪಾರಂಪರಿಕ ವೈದ್ಯರು ಯಾವ ಶಿಕ್ಷಣವೂ ಇಲ್ಲದೆ ತಮ್ಮ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಯುನಾನಿ, ಆಯುರ್ವೇದ ಮತ್ತು ನಾಟಿ ವೈದ್ಯರು ಸೇರಿದ್ದಾರೆ. ಆದರೆ ಹೆಚ್ಚಿನ ರೋಗ ನಿರೋಧಕ ಮತ್ತು ಸ್ಟಿರಾಯಡ್ ಚುಚ್ಚುಮದ್ದುಗಳನ್ನು ಯಾರು ಹೆಚ್ಚು ಕೊಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಬಿಜೆಪಿ ಸದಸ್ಯ ಬಾನುಪ್ರಕಾಶ, ಶಿವಮೊಗ್ಗ ಕ್ಷೇತ್ರದಲ್ಲೇ ಅತಿ ಹೆಚ್ಚು ನಕಲಿ ವೈದ್ಯರು ಕಂಡು ಬಂದಿದ್ದಾರೆ. ಇದರ ಸಂಬಂಧ ಅಲ್ಲಿರುವ ಹಿರಿಯ ವೈದ್ಯಾಧಿಕಾರಿಗಳಿಗೆ ದೂರು ನೀಡಿದರು ಆ ನಕಲಿ ವೈದ್ಯರು ತಮ್ಮ ನಾಮಫಲಕ ತೆಗೆದು ಹಾಕಿ ನಂತರ ತಮ್ಮ ವೃತ್ತಿ ಮುಂದುವರಿಸುತ್ತಿದ್ದಾರೆ ಎಂದು ದೂರಿದರು. ಈ ವೇಳೆ ಪ್ರತಿಕ್ರಿಯೆಸಿದ ಸಂಕನೂರು, ತಜ್ಞರ ಸಮಿತಿ ರಚಿಸಿ ಪಾರಂಪರಿಕ ವೈದ್ಯರಿಗೆ ಅಧಿಕೃತವಾಗಿ ನೋಂದಾಯಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ಸಚಿವರು, ಸರಕಾರ ಈಗಾಗಲೇ ಪಾರಂಪರಿಕ ವೈದ್ಯರಿಗೆ ವಿಶೇಷ ಸ್ಥಾನ ನೀಡಿ ಅವರನ್ನು ಕಾಪಾಡಲು ಕ್ರಮ ಕೈಗೊಳ್ಳುತ್ತಿದೆ. ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ತಿಳಿಸಿದರು.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ