ಸಚಿವ ರಮಾನಾಥ್ ರೈ ಗೆ ಬೆದರಿಕೆ ಕರೆ !

Kannada News

19-06-2017

ಬೆಂಗಳೂರು: ಆರ್‍.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ ಬೆನ್ನಲ್ಲೇ ಅರಣ್ಯ ಸಚಿವ ರಮಾನಾಥ್ ರೈಗೆ ಕೊಲೆ ಬೆದರಿಕೆಯ ಕರೆ ಬಂದಿದೆ. ಬೆಳಗ್ಗೆ ರಮಾನಾಥ್ ರೈ ಅವರ ಮೊಬೈಲ್‍ಗೆ ಅನಾಮಧೇಯ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಸುಳ್ಳು ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾನೆ. ಪ್ರಭಾಕರ್ ಭಟ್ ಹಿಂದು ಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅಂತಹ ವ್ಯಕ್ತಿ ಧರ್ಮ ಉಳಿಸಲು ಪ್ರಾಣವನ್ನು ಲೆಕ್ಕಿಸದೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಮ್ಮೆ ಅವರ ಬಗ್ಗೆ ಸುಳ್ಳು ಆರೋಪ ಮಾಡಿದರೆ ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ದೂರವಾಣಿ ಕರೆಯನ್ನು ಕಡಿತ ಮಾಡಿದ್ದಾನೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕಳ್ಳ ಎಂದು ಕರೆಯಬೇಡಿ. ಅವರಿಗಾಗಿ ಇಡೀ ಹಿಂದೂ ಸಮಾಜ ಒಂದಾಗಲು ಸಜ್ಜಾಗಿದೆ. ಯಾರು, ಯಾವಾಗ ಜೈಲಿಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಿ. ಹಿಂದೂ ಧರ್ಮವನ್ನು ಅವಮಾನಿಸಿ ಮುಸ್ಲೀಮರ ವೋಟು ಪಡೆಯಬೇಕೆಂಬ ಒಂದೇ ಕಾರಣಕ್ಕಾಗಿ ಇಂತಹ ಹೇಳಿಕೆ ಕೊಟ್ಟಿದ್ದೀರಿ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತೀರಿ ನೋಡಿ ಎಂದು ಸವಾಲು ಹಾಕಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ನಡೆಯಲು ಯಾರ ಕುಮ್ಮಕ್ಕು ಇದೆ ಎಂಬುದು ನಿಮಗೆ ಗೊತ್ತು. ಆದರೂ ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಈ ರೀತಿ ಆರೋಪ ಮಾಡುವುದಾಗಲಿ ಇಲ್ಲವೆ, ಸಂಘಟನೆಯ ಮುಖಂಡರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ಪದೇ ಪದೆ ಈ ರೀತಿ ಸುಳ್ಳು ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಈ ಅನಾಮಧೇಯ ವ್ಯಕ್ತಿ ಎಚ್ಚರಿಸಿದ್ದಾನೆ. ತಮಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿರುವುದನ್ನು ಖಚಿತಪಡಿಸಿರುವ ರಮಾನಾಥರೈ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ರೈ ಅವರ ಮೊಬೈಲ್‍ಗೆ ಯಾವ ಸಂಖ್ಯೆಯಿಂದ, ಎಲ್ಲಿಂದ, ಯಾವ ಸಮಯದಲ್ಲಿ ಕರೆ ಬಂದಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ