ಧರ್ಮಸ್ಥಳದ ಹೆಗ್ಗಡೆಗೆ ಅನಗತ್ಯ ಮುಜುಗರ !

Kannada News

19-06-2017 170

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ಹೆಚ್ಚಾದ ಬೆನ್ನಲ್ಲೇ, ಧರ್ಮ ಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ರಾಷ್ಟ್ರಪತಿ ಚುನಾವಣೆಗೆ ಪ್ರಸ್ತಾಪಿಸಲಾಗಿದೆ, ಎಂಬುದು ಮಾಧ್ಯಮ ವಲಯದಲ್ಲಿ ಬಿರುಸಿನಿಂದ ಹರಿದಾಡುತ್ತಾ ಹಾಗೆಯೇ ಪ್ರಸಾರವೂ ಆಗಿ ಬಿಟ್ಟಿತ್ತು. ಧಾರ್ಮಿಕ ಹಿನ್ನೆಲೆ ಇರುವ ಹೆಗ್ಗಡೆಯರು ಅಲ್ಪ ಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದೂ, ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ ಎಂದು ಚರ್ಚಿಸಲ್ಪಟ್ಟಿತು. ಅದರೊಂದಿಗೆ ಅನೇಕ ಮಂದಿ ಈ ವಿಚಾರವನ್ನು ಸ್ವಾಗತಿಸಲು ಆರಂಭಿಸುತ್ತಿದ್ದಂತೆಯೇ ಬಹಳಷ್ಟು ಮಂದಿ ಟೀಕಿಸಲು ಆರಂಭಿಸಿಬಿಟ್ಟರು. ಈಗಾಗಲೇ ಸೌಜನ್ಯ ಪ್ರಕರಣ ,ಬಡ್ಡಿಗೆ ಹಣ ಮುಂತಾದ ವಿಷಯಗಳಲ್ಲಿ ಮುಜುಗರವನ್ನೂ ಅನುಭವಿಸುತ್ತಿರುವ ವೀರೇಂದ್ರ ಹೆಗ್ಗಡೆ ಕುಟುಂಬ ಈ ಪರ ಮತ್ತು ವಿರೋಧಗಳ ಚರ್ಚೆಯ ನಡುವೆ ಪ್ರತಿಕ್ರಿಯಿಸಲು ಆಗದಂತೆ ಇಕ್ಕಟ್ಟಿಗೆ ಸಿಲುಕಿಕೊಂಡಿತು. ವೀರೇಂದ್ರ ಹೆಗ್ಗಡೆಯವರ ಹೆಸರು ಯಾವ ಪಕ್ಷಗಳ ಚಿಂತನೆಯಲ್ಲೂ ಇರಲಿಲ್ಲ ಮಾತ್ರವಲ್ಲದೇ ಅನೌಪಚಾರಿಕವಾಗಿಯೂ ಸೂಚಿಸಲ್ಪಟ್ಟಿರಲಿಲ್ಲ, ಆದರೂ ಈ ಕುಚೋದ್ಯದ ವರದಿಯ ಕಾರಣದಿಂದಾಗಿ ಹೆಗ್ಗಡೆ ಮತ್ತು ಅವರ ಕುಟುಂಬದವರು ಅನಗತ್ಯ ಒತ್ತಡದಲ್ಲಿ ಸಿಲುಕಿಕೊಳ್ಳಬೇಕಾಯಿತು ಎನ್ನಲಾಗಿದೆ. ಹೆಸರು ಹೇಳಲು ಇಚ್ಛಿಸದ ಕುಟುಂಬ ಸದಸ್ಯರೊಬ್ಬರು, ಈ ಸುದ್ದಿಯ ಹಿಂದೆ ವೀರೇಂದ್ರ ಹೆಗ್ಗಡೆಯವರ ವಿರೋಧಿಗಳ ಕೈವಾಡವಿದೆ ಮತ್ತು ಹೆಗ್ಗಡೆಯವರ ವ್ಯಕ್ತಿತ್ವವನ್ನು ಸಾಮಾಜಿಕ ವಲಯದಲ್ಲಿ ಚರ್ಚೆಗೆ ತರಲಾಗಿದ್ದು, ಕುತಂತ್ರವೂ ಇತ್ತು ಎಂದು ಹೇಳುತ್ತಿದ್ದಾರೆ. ಈ ಸುದ್ದಿಗೆ ತೆರೆ ಬಿದ್ದಿದ್ದರೂ ಒಂದಷ್ಟು ದಿನ ಹೆಗ್ಗಡೆಯವರ ಹೆಸರಿನಲ್ಲಿ  ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಗಳ ಗುದ್ದಾಟ ನಡೆದಿದ್ದಂತೂ ಸತ್ಯ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ