ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಮಾಲೀಕರಲ್ಲ !

Kannada News

17-06-2017

ಮಡಿಕೇರಿ: ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಇದೆ ಎಂದು ಹೇಳುವ ಮೂಲಕ ಮಾಜಿ ಸಂಸದ ಹಾಗೂ ಹಿರಿಯ ಮುಖಂಡ ಎಚ್. ವಿಶ್ವನಾಥ್ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ತಮ್ಮನ್ನು ಪಕ್ಷ ಕಡೆಗಣಿಸುತ್ತಿದೆ, ತಮಗೆ ಹಾಗೂ ತಮ್ಮ ಸಲಹೆಗಳಿಗೆ ಸರ್ಕಾರ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಇದೆ. ಇದನ್ನು ಬಗೆಹರಿಸುವಂತೆ ಈ ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ದಿಗ್ವಿಜಯ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದೆ. ಆದರೆ ಅವರು ಸೂಟ್‌ ಕೇಸ್ ಪರಿಶೀಲಿಸಿದರೆ ಹೊರತು ಸಮಸ್ಯೆಯನ್ನಲ್ಲ ಎಂದು ವ್ಯಂಗ್ಯವಾಡಿದರು. ಈಚೆಗೆ ರಾಜ್ಯದ ನೂತನ ಉಸ್ತುವಾರಿ ವೇಣುಗೋಪಾಲ್ ಅವರಲ್ಲೂ ಮನವಿ ಮಾಡಿದ್ದೆ. ಸಮಸ್ಯೆ ಬಗೆಹರಿಸಲು ಒಂದು ತಿಂಗಳ ಕಾಲಾವಕಾಶ ಕೂಡ ನೀಡಿದ್ದೆ. ಆದರೆ ಅವರಿಗೂ ಸಮಯವಿಲ್ಲದಂತಾಗಿದೆ. ತಮ್ಮನ್ನು ಕಾಂಗ್ರೆಸ್ ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಿದೆ. ಉಪಚುನಾವಣೆ ಸಂದರ್ಭದಲ್ಲಿ ತಮ್ಮ ಹೆಸರು ತೆಗೆದು ಮುಖ್ಯಮಂತ್ರಿ ಪುತ್ರನ ಹೆಸರು ಸೇರಿಸಲಾಯಿತು. ತಮ್ಮನ್ನು ಬಿಟ್ಟು ಎಐಸಿಸಿ ಸಭೆ ನಡೆಸಲಾಯಿತು. ತಮ್ಮ ಮಕ್ಕಳು ಯಾವುದೇ ಮರಳುದಂಧೆ, ವರ್ಗಾವಣೆ ದಂಧೆ ನಡೆಸಿಲ್ಲ, ಆದರೂ ತಮ್ಮನ್ನು ಕಡೆಗಣಿಸುತ್ತಿರುವುದೇಕೆ ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ನನ್ನ ತಾಯಿಯಂತೆ. ಪಕ್ಷವನ್ನು ಯಾವುದೇ ಕಾರಣಕ್ಕೂ ದೂರುವುದಿಲ್ಲ. ಜನರೇ ಪಕ್ಷದ ಮಾಲೀಕರೇ ಹೊರತು, ಬೇರಾರೂ ಅಲ್ಲ. ಪಕ್ಷ ಬಿಡುತ್ತೇನೆ ಎಂದಾಗ ಇಲ್ಲಿಯವರೆಗೂ ತಮ್ಮನ್ನು ಯಾರೂ ಭೇಟಿ ಮಾಡಿ ಪಕ್ಷ ಬಿಡುವ ಕಾರಣ ಕೇಳಿಲ್ಲ. ಇಷ್ಟೆಲ್ಲ ಅವಮಾನಗಳನ್ನು ನಾನಿನ್ನೂ ಸಹಿಸುತ್ತಾ ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು. ಪಕ್ಷದಲ್ಲೀಗ ಪ್ರಶ್ನಿಸುವವರನ್ನು ಮೂಲೆಗೆ ತಳ್ಳುತ್ತಾರೆ ಎಂದ ಅವರು, ಇಂತಹ ಪಕ್ಷದಲ್ಲಿ ಇನ್ನೂ ಇರಬೇಕಾ ಎಂದು ಪ್ರಶ್ನಿಸಿದರು. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಮಾಲೀಕರು ಏನಲ್ಲ. ಜನರೇ ಪಕ್ಷದ ಪ್ರಭುಗಳು. ಕಾಂಗ್ರೆಸ್ ಯಾರ ವೈಯಕ್ತಿಕ ಸ್ವತ್ತು ಅಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷವು ನನ್ನ ತಾಯಿಯಾಗಿದ್ದು, ನಾನು ಎಂದಿಗೂ ಕಾಂಗ್ರೆಸ್‌ಗೆ ದ್ರೋಹ ಬಗೆಯುವುದಿಲ್ಲ. ನಾನು ಪಕ್ಷ ಬಿಡುತ್ತೇನೆ ಎಂದು ಯಾರೊಂದಿಗೂ ಹೇಳಿಲ್ಲ. ಪಕ್ಷ ಬಿಡುತ್ತೀರಾ ಎಂದು ಯಾರು ನನ್ನನ್ನು ಕೇಳಿಯೂ ಇಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ