ಉಗ್ರಪ್ಪ ವಿರುದ್ಧ ಶಿಸ್ತು ಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ !

Kannada News

17-06-2017

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಿ ವಿಫಲವಾಗಿ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತಂದ ಸದಸ್ಯ ವಿ.ಎಸ್.ಉಗ್ರಪ್ಪ ಸೇರಿದಂತೆ ಮತ್ತಿತರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿ ಕಾಂಗ್ರೆಸ್‍ನ ಕೆಲ ಶಾಸಕರು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಶಾಸಕರಾದ ಕೆ.ಎನ್.ರಾಜಣ್ಣ, ಡಿ.ಜಿ.ಶಾಂತನಗೌಡ, ಎಸ್.ಟಿ.ಸೋಮ ಶೇಖರ್, ಮುನಿರತ್ನ ನಾಯ್ಡು , ಶಿವಮೂರ್ತಿ ನಾಯಕ್, ಷಡಕ್ಷರಿ, ವಡ್ನಾಳ್ ರಾಜಣ್ಣ, ರಘುಮೂರ್ತಿ ಸೇರಿದಂತೆ ಒಟ್ಟು 12 ಮಂದಿ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ಗೆ ಪತ್ರ ಬರೆದಿದ್ದು, ವಿಧಾನಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ , ಎಚ್.ಎಂ.ರೇವಣ್ಣ , ಮುಖ್ಯ ಸಚೇತಕ ಐವಾನ್ ಡಿಸೋಜ ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆದಿದ್ದಾರೆ. ಯಾರ ಜೊತೆಯೂ ಚರ್ಚಿಸದೆ ಉಗ್ರಪ್ಪ ಮತ್ತಿತರರು ಏಕಾಏಕಿ ಶಂಕರಮೂರ್ತಿ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಿದರು. ಕನಿಷ್ಠ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ಸೇರಿದಂತೆ ಯಾರ ಬಳಿಯೂ ಚರ್ಚಿಸದೆ ಏಕಪಕ್ಷೀಯವಾಗಿ ಪದಚ್ಯುತಿ ನಿರ್ಣಯ ಮಂಡಿಸಿದರು.

ತದನಂತರ ಯಾವ ರೀತಿ ಇದನ್ನು ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆಯೂ ತಂತ್ರ ರೂಪಿಸಲಿಲ್ಲ. ಪರಿಣಾಮ ನಮಗೆ ವಿಧಾನಪರಿಷತ್‍ನಲ್ಲಿ ಸೋಲುಂಟಾಗಿ ಪಕ್ಷ ಹಾಗೂ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯ ಉಸ್ತುವಾರಿ ವೇಣುಗೋಪಾಲ್‍ಗೂ ಪತ್ರ ಬರೆಯಲು ತೀರ್ಮಾನಿಸಿರುವ ಈ ಶಾಸಕರು ಇನ್ನು ಮುಂದೆ ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ಪಕ್ಷದ ಮುಖಂಡರ ಜೊತೆ ಚರ್ಚಿಸದೆ ಇಂಥ ಅಚಾತುರ್ಯ ತೀರ್ಮಾನ ಕೈಗೊಳ್ಳದಂತೆ ಕಡಿವಾಣ ಹಾಕಲು ಮನವಿ ಮಾಡಿಕೊಳ್ಳಲಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ