ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿದ ಯುವತಿ ಬಂಧನ !

Kannada News

17-06-2017 259

ಬೆಂಗಳೂರು: ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭದ್ರತೆ ಹಿನ್ನಲೆಯಲ್ಲಿ ಸ್ಕೂಟರ್ ತಡೆದಿದ್ದಕ್ಕೆ ಆಕ್ರೋಶಗೊಂಡು ಕರ್ತವ್ಯ ನಿರತ ಪೊಲೀಸ್ ಪೇದೆ ವೆಂಕಟೇಶ್ ಅವರ ಕೆನ್ನೆಗೆ ಬಾರಿಸಿ ಕಪಾಳಮೋಕ್ಷ ಮಾಡಿದ ಯುವತಿಯನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಫ್ರೇಜರ್ ಟೌನ್‍ನ ಸಾರಿಕಾ (21) ಬಂಧಿತ ಆರೋಪಿ. ಕಳೆದ ಜೂನ್ 12 ರಂದು ಮಧ್ಯಾಹ್ನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಕೆಜಿಹಳ್ಳಿ ಸಂಚಾರ ಪೊಲೀಸ್ ಪೇದೆ ವೆಂಕಟೇಶ್ ಅವರು ಕನ್ನಿಂಗ್ ಹ್ಯಾಂ ರಸ್ತೆಯ ಜಂಕ್ಷನ್ ನಲ್ಲಿ ಸ್ಕೂಟರ್ನಲ್ಲಿ ಬರುತ್ತಿದ್ದ ಸಾರಿಕಾಳನ್ನು ತಡೆದಿದ್ದರು. ಇದರಿಂದ ಆಕ್ರೋಶಗೊಂಡ ಆಕೆ ವೆಂಕಟೇಶ್ ಅವರ ಕೆನ್ನೆಗೆ ಬಾರಿಸಿ ಜಗಳ ತೆಗೆದಿದ್ದಳು. ಈ ಸಂಬಂಧ ವೆಂಕಟೇಶ್ ಅವರು ಹೈಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪಪೊಲೀಸರು ಸಾರಿಕಾಳನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಆಕೆ ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದು, ಕೋಪದ ಬರದಲ್ಲಿ ವೆಂಕಟೇಶ್ ಅವರಿಗೆ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ