ಚೆಟ್ಟಳ್ಳಿ ಗ್ರಾಮ ಆನೆಯದ್ದೋ, ಅಥವಾ, ಮಾನವರದ್ದೋ ದಯವಿಟ್ಟು ತಿಳಿಸಿ .

Kannada News

17-06-2017

ಚೆಟ್ಟಳ್ಳಿ : ಈ ಮೇಲಿನ ಸಾಲುಗಳು ಚೆಟ್ಟಳ್ಳಿ ಹಾಗು ಚೆಟ್ಟಳ್ಳಿಯ ಸುತ್ತ ಮುತ್ತಲಿನ ನಾಗರಿಕರ ಬಾಯಲ್ಲಿ ಪ್ರಶ್ನೆಯಾಗಿ ಕೇಳಿಬರುತ್ತಿದೆ. ಹಲವು ದಶಕಗಳ ಹಿಂದೆ ಕೊಡಗಿನಲ್ಲಿ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಅಲ್ಲೋ ಇಲ್ಲೋ ಅಪರೂಪದಲ್ಲಿ  ಕಾಡಾನೆ  ಕಂಡರೆ ಪತ್ರಿಕೆಗಳಲ್ಲಿ  ದೊಡ್ಡ ಸುದ್ದಿಯಾಗುವ ಕಾಲ ಒಂದಿತ್ತು . ಆದರೆ ಚೆಟ್ಟಳ್ಳಿಯ ಜನತೆ ಆ ಸುದ್ದಿಯನ್ನು ಓದಿ  ಮುಗುಳುನಗುತ್ತಿದ್ದರು. ಯಾಕೆಂದರೆ  ಚೆಟ್ಟಳ್ಳಿಯ ಭಾಗದ ಜನತೆಗೆ ಅದು ಒಂದು ಸುದ್ದಿಯಾಗುತ್ತಿರಲ್ಲಿಲ. ಅವರಿಗೆ ಕಾಲದ ಮುನ್ನೂರ ಅರವತೈದು ದಿವಸಗಳು ತಮ್ಮ ಗ್ರಾಮದಲ್ಲಿ  ಕಾಡಾನೆಯ ಸುದ್ದಿ, ಅಥವಾ ಕಾಡಾನೆಯನ್ನು ಪ್ರತ್ಯಕ್ಷ ಕಾಣಬಹುದಿತ್ತು . ಅಂದಿನ ಕಾಲದಲ್ಲಿ ಚೆಟ್ಟಳ್ಳಿಯ ಭಾಗದ ಜನತೆಗೆ, ತಮ್ಮ ಮಕ್ಕಳಿಗೆ ಮದುವೆ ಸಂಬಂಧ ಹುಡುಕಿ ಮದುವೆ ಏರ್ಪಟ್ಟಿದ್ದರು, ಅದು ಈ ಆನೆಯಿಂದಾಗಿ ಮುರಿದು ಬಿದ್ದ ಅನೇಕ ಪ್ರಸಂಗಗಳನ್ನು ನಮ್ಮ ಹಿರಿಯರು ನೆನಪಿಸುತ್ತಾರೆ. ಅಂದಿನ ಕಾಲದಲ್ಲಿ ವಾಹನದ ಕೊರತೆಯಿಂದ ಕಾಲ್ನಡಿಗೆಯಲ್ಲಿ ತೆರಳಬೇಕಾದ ಪರಿಸ್ಥಿತಿ ಇತ್ತು . ಇಲ್ಲಿನ ಜನರ ಮನೆಗಳಿಗೆ ನೆಂಟರಿಷ್ಟರು ಬರುವುದಕ್ಕೆ ಅಂಜಿಕೊಳ್ಳುತ್ತಿದ್ದರು, ಬಂದರು ಅವರನ್ನು ರಸ್ತೆಯಿಂದ ಬಸ್ಸಿನಿಂದ ಇಳಿಸಿ ತಾವುಗಳೆ  ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಇತ್ತು.  ಆದರೂ ಇಷ್ಟೊಂದು ಸಾವು ನೋವುಗಳು ಆನೆಯಿಂದ ಆಗುತ್ತಿರಲಿಲ್ಲ ಎಂದು ಅವರುಗಳು ಹೇಳುತ್ತಾರೆ. ತಾವುಗಳು ತಮ್ಮ ಗದ್ದೆಯನ್ನು ಉತ್ತು ನಾಟಿ ಮಾಡಿ ಹುಲುಸಾಗಿ ಬೆಳೆದು ಕೊಯ್ಲಿನ ಸಮಯದಲ್ಲಿ ಅದರಲ್ಲಿ ಒಂದು ಭಾಗವನ್ನು ಆನೆಗಳಿಗೆ ಆಹುತಿ ಕೊಟ್ಟು. ಬಾಕಿ ಇರುವುದರಲ್ಲಿ  ತಮ್ಮ ಹೊಟ್ಟೆಯನ್ನು ಹಾಗು ತಮ್ಮ ಸಂಸಾರದ ಹೊಟ್ಟೆಯನ್ನು ಹೊರೆದುಕೊಳ್ಳುತಿದ್ದೆವು ಎನ್ನುತ್ತಾರೆ. ಆದರೆ ಈಗ ಅವರ  ಮಕ್ಕಳ ಕಾಲದಲ್ಲಿ ಸಂಪೂರ್ಣ ಬದಲಾಗಿದೆ ಗ್ರಾಮದ ಹಿರಿಯರು ಕಷ್ಟಪಟ್ಟು ಉತ್ತು ಬೆಳೆಸಿದ ಗದ್ದೆಗಳು ಕಾಡುಪಾಲಾಗಿವೆ. ಬೆಳೆ ಬೆಳೆಸಿದರೆ ಅದು ನಾಟಿ ಮಾಡಿ ಪೈರುಕಟ್ಟುವಾಗಲೇ ಸಂಪೂರ್ಣ ಆನೆಯ ಪಾಲಾಗುತ್ತಿವೆ. ಅದು ಅಲ್ಲದೇ ಆನೆಯು ಗದ್ದೆಯ ಸಸಿ ಮಿಡಿಗಳನ್ನು ಬಿಡುವುದಿಲ್ಲ . ಹೋಗಲಿ ಗದ್ದೆಯನ್ನು ಬಿಟ್ಟು ತೋಟದಲ್ಲಿ ಕೃಷಿ ಮಾಡುವ ಎಂದರೆ, ಇವತ್ತಿನ ಪರಿಸ್ಥಿತಿಯಲ್ಲಿ ಆನೆಗಳು ತೆಂಗು ,ಬಾಳೆ, ಮಾವು, ಹಲಸು,ಅಡಿಕೆ ,ಎಲ್ಲವನ್ನು ತಿಂದು ಮುಗಿಸಿವೆ. ಸ್ವಲ್ಪ ನಿಟ್ಟುಸಿರು ಬಿಟ್ಟು ಕಾಫಿ ಬೆಳೆಯಲ್ಲಿ  ಜೀವನ  ಕಂಡುಕೊಂಡ  ಸಣ್ಣ ಬೆಳೆಗಾರರಿಗೆ ಈಗ, ಆನೆಯು ಹಣ್ಣು ಕಾಫಿಯನ್ನು ತಿಂದು ಗಿಡಗಳ ರೆಕ್ಕೆಯನ್ನು ಮುರಿದು ನಾಶ ಮಾಡುತ್ತಿರುವುದನ್ನು ಕಂಡು ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಇನ್ನು ಶಾಲಾ ಮಕ್ಕಳ ಪರಿಸ್ಥಿತಿಯಂತೂ ಹೇಳತೀರದು. ಗ್ರಾಮದಿಂದ ನಗರದ ಶಾಲೆಗಳಿಗೆ ಬರುವ ಮಕ್ಕಳಿಗೆ ನಗರದ ಪಿ.ಜಿ. ಗಳು  ಅಥವಾ ಹಾಸ್ಟೇಲ್ ಗಳೇ  ಗತಿ. ಯಾಕೆಂದರೆ ದಿನ ರಾತ್ರಿ  ಆನೆಗಳು ಅರಣ್ಯದಿಂದ ತೋಟಕ್ಕೆ ತೆರಳಿ ಅದರಲ್ಲಿ ಕೆಲವು ಆನೆಗಳು ಅಲ್ಲೇ ಉಳಿದುಕೊಂಡು ಒಂದೋ ಎರಡೂ, ಬೆಳಿಗ್ಗಿನ ಸಮಯದ, ಹಾಗು ಮಾನವರ ಪರಿವೆ ಇಲ್ಲದೆ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿರುತ್ತವೆ. ಇತ್ತೀಚೆಗಂತೂ ಎಲ್ಲಕಡೆ ದೊಡ್ಡ ದೊಡ್ಡ ಎಸ್ಟೇಟಿನವರು ವಿದ್ಯುತ್ ಬೇಲಿ ಅಳವಡಿಸಿದ ಕಾರಣ ಆನೆಗಳು ರಸ್ತೆಯಲ್ಲಿ ಓಡಾಡಿ ಬಡವರ ತೋಟಗಳಿಗೆ  ನುಗ್ಗಿ ಫಸಲುಗಳನ್ನು ನಾಶ ಮಾಡಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಂಡು ಸಣ್ಣ ಬೆಳೆಗಾರರ ಹಾಗು ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಹೊದಿಸಿದೆ .

ನಿನ್ನೆಯ ದಿನ ಚೆಟ್ಟಳ್ಳಿಯ ಕಂಡಾಕೆರೆಯ ಸಲಾಂ ಎನ್ನುವ ವ್ಯಕ್ತಿಯು ಬೆಳಗಿನ ಏಳು ಗಂಟೆಯ ಸಮಯದಲ್ಲಿ ಕೆಲಸಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಕಂಡಾಕೆರೆಯ ಮುಖ್ಯ ರಸ್ತೆಯಲ್ಲಿ  ಏಕಾಏಕಿ ಎರಗಿದ ಒಂಟಿಸಲಗವೊಂದು ಅವರನ್ನು ತುಳಿಯಲು ಪ್ರಯತ್ನಿಸಿದಾಗ ಜನರು ಕಿರುಚಿಕೊಂಡ ಪರಿಣಾಮ ಅವರು ತಪ್ಪಿಸಿಕೊಂಡರು. ಆದರೂ ಅವರ ದ್ವಿಚಕ್ರ ವಾಹನವನ್ನು ಜಖಂಗೊಳಿಸಿತ್ತು.

ಇನ್ನು ತೋಟ ಕಾರ್ಮಿಕರದ್ದು ಹೇಳತೀರದ ಬವಣೆ. ಹಾಗೂ ಹೀಗೋ ವಾಹನವೇರಿ ಕೆಲಸಕ್ಕೆ ಹೋದರೆ ತೋಟದಲ್ಲಿ ಆನೆಗಳ ಭಯ . ತೋಟ ಮಾಲೀಕರಿಗಂತೂ ಇನ್ನೊಂದು ತಲೆನೋವು . ಅಷ್ಟೋ ಇಷ್ಟೋ ತೋಟದಲ್ಲಿ ಆನೆಗಳಿಂದ ಪಾರುಮಾಡಿ ಉಳಿಸಿದ ಗಳಿಕೆಯಲ್ಲಿ, ತೋಟಗಳಿಗೆ ದುಬಾರಿ ಬೆಲೆಗೊಬ್ಬರ ಹಾಗು ಕಾರ್ಮಿಕರ ವೇತನವನ್ನು ಬರಿಸುವುದಲ್ಲದೆ ಕಾರ್ಮಿಕರ ಜೀವದ  ರಕ್ಷಣೆಯ ಜವಾಬ್ದಾರಿಯು ಈಗ ಹೊರೆಯಾಗಿದೆ . ಅದರಿಂದ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳನ್ನು ವ್ಯಯಿಸಿ  ಒಬ್ಬ ಗನ್ ಮ್ಯಾನ್ ನನ್ನು ತಂದು ನಿಲ್ಲಿಸುವ ಪರಿಸ್ಥಿತಿ ಇಲ್ಲದಿದ್ದಲ್ಲಿ ತಾವೇ ಬಂದೂಕುದಾರಿಗಳಾಗಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಅದರಿಂದ ಚೆಟ್ಟಳ್ಳಿಯ ಗ್ರಾಮದ ಜನತೆ ತುಂಬಾ ಬಾರಿ ಅರಣ್ಯ ಇಲಾಖೆಗೆ ದೂರಿತ್ತರು ಅವರು ಬಂದು ಜನರ ಕಣ್ಣು ಕಟ್ಟುವುದಕೋಸ್ಕರ ಆನೆಯನ್ನು ಕಾಡಿಗೆ ಅಟ್ಟುವಕೆಲಸವನ್ನು ಮಾಡಿ ಅವರು ಆಕಡೆ ಹೋದಾಗ ಆನೆಗಳು ನಗುಮುಖದೊಂದಿಗೆ ತೋಟಕ್ಕೆ  ನುಗ್ಗುವುದನ್ನು ಕಾಣಬಹುದು .

ಅದರಿಂದ ಇದರ ಹೊಣೆಯನ್ನು ಹೊತ್ತ ಉದಯೋನ್ಮುಖ ಸಹಾಯಕ ಅರಣ್ಯ ಅಧಿಕಾರಿಗಳಾದ ಮೀನು ಕೊಲ್ಲಿ ಅರಣ್ಯಾಧಿಕಾರಿ ಬಾಣಂದ ದೇವಿಪ್ರಸಾದ್ ಮತ್ತು ಅನೇಕಾಡಿನ ಸಹಾಯಕ ಅಧಿಕಾರಿಯಾದ ಕನ್ನಂಡ ರಂಜನ್ ಹಾಗು ಅವರ ಸಿಬ್ಬಂದಿ ವರ್ಗದವರ ಸಾಹಸ ಮೆಚ್ಚುವಂತದ್ದೇ. ಅವರ ಅವಧಿಯಲ್ಲಿ ಅವರಿಗೆ ಅವರ ಹಿರಿಯ ಅಧಿಕಾರಿಗಳು ಹಾಗು ಸರಕಾರದಿಂದ ಅವರಿಗೆ ಸರಿಯಾದ ಸವಲತ್ತನ್ನು ಒದಗಿಸಿಕೊಟ್ಟರೆ ಚೆಟ್ಟಳ್ಳಿಗ್ರಾಮದ ಹಲವು ದಶಕಗಳ ಆನೆಯ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂದೇಹವಿಲ್ಲ .

 ಪುತ್ತರಿರ ಪಪ್ಪು ತಿಮ್ಮಯ


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ