ತಲೆ ರಕ್ಷಣೆಯ ಮಹತ್ವ !

Kannada News

17-06-2017

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಕೈಕಾಲು ಮುರಿದುಕೊಂಡು ಸಾಯುವವರಿಗಿಂತಲೂ, ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪುವವರ ಸಂಖ್ಯೆಯೇ ಹೆಚ್ಚು. ದ್ವಿಚಕ್ರವಾಹನಗಳ ಒಟ್ಟಾರೆ ಅಪಘಾತ ಪ್ರಕರಣಗಳಲ್ಲಿ, ಮುಕ್ಕಾಲುಪಟ್ಟು ಜನರು, ತಲೆಗೆ ಬೀಳುವ ಪೆಟ್ಟಿನಿಂದಲೇ ಸಾಯುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಇಡೀ ಭಾರತ ದೇಶದಲ್ಲಿ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಬೈಕ್ ಅಥವ ಸ್ಕೂಟರ್ ಓಡಿಸುವವರ ಜೊತೆಗೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕು ಎಂಬ ಪ್ರಸ್ತಾಪ, ಸರ್ಕಾರ ಅಥವ ಕೋರ್ಟುಗಳು ಮಾಡಿದ್ದಲ್ಲ. ಇದು ಸಂಚಾರ ತಜ್ಞರು ಮತ್ತು ನಿಮ್ಹಾನ್ಸ್ ನಂಥ ವೈದ್ಯಕೀಯ ಸಂಸ್ಥೆಯ ಮೆದುಳು ತಜ್ಞರು ಸಾಕಷ್ಟು ಚಿಂತನೆ, ಸಂಶೋಧನೆಗಳನ್ನು ನಡೆಸಿ ಶಿಫಾರಸ್ಸು ಮಾಡಿದ್ದರಿಂದ ಜಾರಿಗೆ ಬಂದ ನಿಯಮ.

ಹೀಗಿದ್ದರೂ ಕೂಡ, ದ್ವಿಚಕ್ರವಾಹನ ಸವಾರರಲ್ಲಿ ಹೆಚ್ಚಿನವರು ಹೆಲ್ಮೆಟ್ ಧರಿಸಲು ಭಾರಿ ಚೌಕಾಸಿ ಮಾಡುತ್ತಿದ್ದಾರೆ. ಕೆಲವರು ಹೆಲ್ಮೆಟ್ ಅನ್ನು ಬೈಕಿನ ಹ್ಯಾಂಡಲ್‌ಗೆ ತಗುಲು ಹಾಕುವುದು, ಮೊಣಕೈಗೆ ಹಾಕಿಕೊಂಡು ತಿರುಗಾಡುವುದು ಕಾಣಿಸುತ್ತದೆ. ಇಂಥವರು ಪೊಲೀಸರು ಕಾಣುತ್ತಿದ್ದ ಹಾಗೆ ತಲೆಗೆ ಹೆಲ್ಮೆಟ್ ತುರುಕಿಕೊಳ್ಳುತ್ತಾರೆ, ಆ ಗಡಿಬಿಡಿಯಲ್ಲೇ ಅಪಘಾತ ಆಗುವ ಸಾಧ್ಯತೆ ಇರುತ್ತದೆ.

ಇನ್ನೂ ಕೆಲವರು, ನಗರ ದಾಟಿ, ಹೆದ್ದಾರಿ ಸಿಗುತ್ತಿದ್ದಂತೆ ತಲೆ ಮೇಲಿನ ಹೆಲ್ಮೆಟ್ ಅನ್ನು ಕೈಗೆ ವರ್ಗಾಯಿಸುತ್ತಾರೆ, ಇದು ಭಾರಿ ಅಪಾಯಕರ. ಇನ್ನು ಸ್ಕೂಟರ್ ಓಡಿಸುವ ಹೆಂಗಸರಲ್ಲಿ ಬಹುತೇಕರು ಹೆಲ್ಮೆಟ್ ಹಾಕುವುದೇ ಇಲ್ಲ. ಇವರೇನು ತಮ್ಮ ತಲೆ, ಗಂಡಸರ ತಲೆಗಿಂತ ಗಟ್ಟಿ ಅಂದುಕೊಂಡಿದ್ದಾರೋ, ಅಥವಾ ಇವರಿಗೇನಾದರೂ ವಿಶೇಷ ರಿಯಾಯಿತಿ ಇದೆಯೋ ಗೊತ್ತಾಗ್ತಿಲ್ಲ.

ಜಗತ್ತಿನ ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದ್ದರೂ ಕೂಡ, ಮಾನವನ ತಲೆ ಮತ್ತು ಮೆದುಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಮನುಷ್ಯನ ತಲೆ ಬುರುಡೆ ಎಷ್ಟರ ಮಟ್ಟಿಗಿನ ಆಘಾತ ತಡೆದುಕೊಳ್ಳಬಲ್ಲದು ಅನ್ನುವುದಕ್ಕೂ ಒಂದು ಮಿತಿಯಿದೆ.

ಭಾರತದ ರಸ್ತೆಗಳಲ್ಲಿ ಸಂಚರಿಸುವ ಒಟ್ಟಾರೆ ವಾಹನಗಳಲ್ಲಿ, ದ್ವಿಚಕ್ರ ವಾಹನಗಳ ಪಾಲು ಸುಮಾರು ಶೇಕಡ 70 ರಷ್ಟು. ಶೇಕಡ 75ರಿಂದ ಶೇಕಡ88ರಷ್ಟು ರಸ್ತೆ ಅಪಘಾತಗಳಲ್ಲಿ, ತಲೆಗೆ ಪೆಟ್ಟು ಬಿದ್ದ ಕಾರಣದಿಂದಲೇ ಸಾವು ಸಂಭವಿಸುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತವೆ. 

ಒಬ್ಬ ಬೈಕ್ ಸವಾರ ಅಪಘಾತದಲ್ಲಿ ಸಾಯುವ ಸಾಧ್ಯತೆಗಳು, ಒಬ್ಬ ಕಾರು ಚಾಲಕ ಅಪಘಾತದಲ್ಲಿ ಸಾವನ್ನಪ್ಪುವ ಸಾಧ್ಯತೆಗಳಿಗಿಂತ ಮೂವತ್ತು ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ. ತಲೆಗೆ ಆಗುವ ಗಾಯಗಳ ಚಿಕಿತ್ಸಾ ವೆಚ್ಚ ತುಂಬಾ ದುಬಾರಿ ಮತ್ತು ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ, ತಲೆಗೆ ಸಂಬಂಧಿಸಿದ ಚಿಕಿತ್ಸೆಗಳು ದೊರೆಯುತ್ತವೆ.

ತಲೆ ಪೆಟ್ಟುಗಳ ಚಿಕಿತ್ಸೆಗೆ ಕನಿಷ್ಟ 7 ರಿಂದ 15 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಆದರೆ, ಅಷ್ಟು ಖರ್ಚು ಮಾಡಿದರೂ ಕೂಡ, ತಲೆಗೆ ಆಗುವ ಗಾಯ ಮತ್ತು ಸಮಸ್ಯೆಗಳು, ಶಸ್ತ್ರಚಿಕಿತ್ಸೆ ಸೇರಿದಂತೆ ಯಾವುದೇ ರೀತಿ ಟ್ರೀಟ್‌ಮೆಂಟ್‌ನಿಂದಲೂ ಸರಿಹೋಗುವುದು ಕಷ್ಟ. ತಲೆಗೆ ಪೆಟ್ಟುಮಾಡಿಕೊಂಡು ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿದ್ದು, ವರ್ಷಗಟ್ಟಲೆ ಮತ್ತೆ ಮತ್ತೆ ಆಸ್ಪತ್ರೆಗೆ ಹೋಗುತ್ತಲೇ ಇರುವವರನ್ನು ನೋಡಿದರೆ ಭಯವಾಗುತ್ತದೆ.

ಮನುಷ್ಯನ ತಲೆ ಬುರುಡೆ ಎಷ್ಟರ ಮಟ್ಟಿಗಿನ ಆಘಾತ ತಡೆದುಕೊಳ್ಳಬಲ್ಲದು ಅನ್ನುವುದಕ್ಕೆ ಒಂದು ಮಿತಿಯಿದೆ. ದೇಹದ ಇತರ ಕಡೆಗಳ ಗಾಯಗಳನ್ನು ಹೇಗೋ ವಾಸಿ ಮಾಡಿಕೊಳ್ಳಬಹುದು ಆದರೆ, ತಲೆಗೆ ಪೆಟ್ಟಾದರೆ ತಕ್ಷಣವೇ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಒಮ್ಮೊಮ್ಮೆ ತಲೆಗೆ ಪೆಟ್ಟು ಬಿದ್ದಾಗ, ಮೇಲುನೋಟಕ್ಕೆ ಏನೂ ಆಗದಂತೆ ಕಂಡರೂ ಕೂಡ, ಆನಂತರದ ದಿನಗಳಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.

ಒಂದು ವೇಳೆ ನಡೆಯುವಾಗ ಅಥವ ಓಡುವಾಗ ಜಾರಿ ಬಿದ್ದರೆ, ಸ್ವಲ್ಪ ಮಟ್ಟಿಗೆ ಅದನ್ನು ತಡೆದುಕೊಳ್ಳಬಹುದಾದ ಸಾಮರ್ಥ್ಯ ಮಾತ್ರ ನಮ್ಮ ಶರೀರಕ್ಕೆ ಇದೆ. ನಾವು ತುಂಬಾ ನಿಧಾನವಾಗಿ ವಾಹನ ಚಾಲನೆ ಮಾಡುತ್ತೇವೆ ಎಂದು ಹೇಳಿ ಹೆಲ್ಮೆಟ್ ಹಾಕದೇ ಇರುವುದು ಶುದ್ಧ ಮೂರ್ಖತನ. ತೀರಾ ಕಡಿಮೆ ವೇಗದಲ್ಲಿ ಚಲಿಸುವಾಗ ಬಿದ್ದರೂ ಕೂಡ, ತಲೆಗೆ ದೊಡ್ಡ ಪೆಟ್ಟುಗಳು ಬೀಳುವ ಸಾಧ್ಯತೆಗಳೇ ಹೆಚ್ಚು.

ನೀವು ಸುಮಾರು 55 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸುತ್ತಿದ್ದೀರಿ ಎಂದು ಅಂದುಕೊಳ್ಳಿ, ಆ ಸಂದರ್ಭದಲ್ಲಿ ನಿಮ್ಮ ಬೈಕ್ ಪ್ರತಿ ಸೆಕೆಂಡಿಗೆ 49 ಅಡಿಗಳಷ್ಟು ದೂರವನ್ನು ಕ್ರಮಿಸುತ್ತಿರುತ್ತದೆ, ಒಂದು ವೇಳೆ ಇಂಥ ಸಂದರ್ಭದಲ್ಲೇನಾದರೂ ನೀವು ಕೆಳಗೆ ಬಿದ್ದರೆ, ಅದು ನಾಲ್ಕನೇ ಮಹಡಿಯ ಕಟ್ಟಡದಿಂದ ಕೆಳಗೆ ಬಿದ್ದಂತಾಗುತ್ತದೆ ಅನ್ನುವುದು ನಿಮಗೆ ಅರ್ಥವಾಗಬೇಕು.

ನಿಮ್ಮ ತಲೆಬುರುಡೆ ಹೇಗೆ ಮೆದುಳನ್ನು ಸುರಕ್ಷಿತವಾಗಿ ಇಡುತ್ತದೆಯೋ ಹಾಗೆ, ಈ ಹೆಲ್ಮೆಟ್ ಅನ್ನುವುದು ನಿಮ್ಮ ತಲೆ ರಕ್ಷಿಸಿಕೊಳ್ಳಲು ನೆರವಾಗುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ವಿನ್ಯಾಸಗಳ ಹೆಲ್ಮೆಟ್‌ಗಳು ಸಿಗುತ್ತವಾದರೂ ಕೂಡ, ಎಲ್ಲ ಹೆಲ್ಮೆಟ್ಗಳ ಮೂಲ ರಚನಾ ಕ್ರಮ ಒಂದೇ. ಸಾಮಾನ್ಯವಾಗಿ, ಒಂದು ಹೆಲ್ಮೆಟ್ ಮೂರು ಪದರ ಹೊಂದಿರುತ್ತದೆ. ಹೆಲ್ಮೆಟ್ಟಿನ ಹೊರಪದರ ಥರ್ಮೋಪ್ಲಾಸ್ಟಿಕ್ ಫೈಬರ್ ಗಾಜಿನಿಂದ ರೂಪುಗೊಂಡಿರುತ್ತದೆ. ಮಧ್ಯದ ಪದರವನ್ನು ಹಿಗ್ಗಬಲ್ಲ ಪಾಲಿಸ್ಟಿರೀನ್‌ (polystyrene) ನಿಂದ ಮಾಡಲಾಗಿರುತ್ತದೆ, ಇದು ಪೆಟ್ಟನ್ನು ತಾಳಿಕೊಳ್ಳುವ ಗುಣ ಹೊಂದಿರುತ್ತದೆ. ಹೆಲ್ಮೆಟ್ಟಿನ ಒಳಪದರ ಸ್ಪಂಜಿನಿಂದ ಕೂಡಿದ್ದು, ತಲೆಗೆ ಆರಾಮದಾಯಕ ಅನುಭವ ನೀಡುತ್ತದೆ. ಅಪಘಾತದ ಸಂದರ್ಭದಲ್ಲಿ ಬೀಳುವ ಪೆಟ್ಟಿನಿಂದ ಹೆಲ್ಮೆಟ್ನ ಹೊರ ಕವಚ ಒಡೆದುಹೋಗಬಹುದು, ಆದರೆ ಅದು, ತಲೆ ಬುರುಡೆಗೆ ಆಗುವ ಆಘಾತದ ತೀವ್ರತೆ ತಪ್ಪಿಸಿರುತ್ತದೆ.

ನಾವು ಧರಿಸುವ ಹೆಲ್ಮೆಟ್ ನಮ್ಮ ತಲೆಗೆ ಸರಿಯಾಗಿ ಹಿಡಿಸುವಂಥದ್ದಾಗಿರಬೇಕು, ತುಂಬಾ ಬಿಗಿ ಅಥವ ಸಡಿಲವಾಗಿರಬಾರದು. ಹೆಲ್ಮೆಟ್ಟಿನ ಪಟ್ಟಿಯನ್ನು ಸರಿಯಾಗಿ ಕಟ್ಟಿಕೊಳ್ಳಬೇಕು, ಇಲ್ಲವಾದರೆ, ಅಪಘಾತದ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸುವ ಮುಂಚೆಯೇ ಹೆಲ್ಮೆಟ್ ನಮ್ಮ ತಲೆಯಿಂದ ಬಿದ್ದು ಹೋಗಬಹುದು.

ಅಪಘಾತಗಳ ಸಂದರ್ಭದಲ್ಲಿ  ಬೈಕ್ ಚಾಲಕನಿಗಿಂತಲೂ ಹೆಚ್ಚಾಗಿ ಹಿಂಬದಿ ಚಾಲಕ ಕೆಳಗೆ ಬಿದ್ದು ಹೋಗುವ ಮತ್ತು ಹಿಂದಿನಿಂದ ಬರುತ್ತಿರುವ ವಾಹನಗಳ ದಾರಿಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು, ಹೀಗಾಗಿ ಅವರೂ ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.

ಕೇವಲ ಒಂದು  ಸಾವಿರ ರೂಪಾಯಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಸಿಗುತ್ತದೆ, ಆದರೆ, ಅಪಘಾತದಿಂದ ತಲೆಗೆ ಪೆಟ್ಟಾದರೆ, ಅದನ್ನು ಸರಿಮಾಡಿಕೊಳ್ಳಲು, ಮೂರು ತಲೆ ಮಾರುಗಳಿಂದ ಮಾಡಿಟ್ಟಿರುವ ಆಸ್ತಿ ಪಾಸ್ತಿ ಮಾರಿದರೂ ಸಾಕಾಗುವುದಿಲ್ಲ.

ಹೆಲ್ಮೆಟ್ ಧರಿಸುವುದರಿಂದ ನಿಮ್ಮ ಪ್ರಾಣ ಉಳಿಸುವುದಷ್ಟೇ ಅಲ್ಲದೆ, ಇತರೆ ಬಹಳಷ್ಟು ಅನುಕೂಲತೆಗಳೂ ಇವೆ. ನೀವು ಬೈಕ್, ಸ್ಕೂಟರ್ ಓಡಿಸುವಾಗ ಹಾರುತ್ತಾ ಅಡ್ಡಬರುವ ಹುಳು ಹುಪ್ಪಟೆಗಳು ನಿಮ್ಮ ಕಣ್ಣಿಗೆ ಡಿಕ್ಕಿ ಹೊಡೆದು ತೊಂದರೆ ಅನುಭವಿಸುವುದು ತಪ್ಪುತ್ತದೆ.

ನೀವು ಸಸ್ಯಾಹಾರಿಯಾಗಿದ್ದಲ್ಲಿ ಈ ಹುಳುಗಳು, ನಿಮ್ಮ ಮೂಗು ಬಾಯಿ ಮೂಲಕ ಒಳಸೇರಿ, ನಿಮ್ಮನ್ನು ಮಾಂಸಾಹಾರಿಯಾಗಿಸುವ ಸಾಧ್ಯತೆಗಳನ್ನೂ ಈ ಹೆಲ್ಮೆಟ್ ತಪ್ಪಿಸುತ್ತದೆ. ಭರ್ರನೆ ನುಗ್ಗುವ ಗಾಳಿ, ಧೂಳು ಹಾಗೂ ಹೊಗೆಯಿಂದಲೂ ಹೆಲ್ಮೆಟ್‌ ನಿಮಗೆ ರಕ್ಷಣೆ ನೀಡುತ್ತದೆ. ಸುಡುವ ಬಿಸಿಲಿನಲ್ಲಿ ನಿಮಗೆ ಸನ್ ಬರ್ನ್ ಆಗುವುದನ್ನೂ ಹೆಲ್ಮೆಟ್ ತಪ್ಪಿಸುತ್ತದೆ. ಅದೇ ರೀತಿ, ಮಳೆಯಲ್ಲೂ ತಲೆ ನೆನೆಯದಂತೆ ಕಾಪಾಡಿ, ನೆಗಡಿಯ ಬಾಧೆ ತಪ್ಪಿಸುತ್ತದೆ.

ನಾನೊಬ್ಬ ಭಾರಿ ಎಕ್ಸ್‌ಪರ್ಟ್ ಚಾಲಕ, ಅತ್ಯಂತ ಸುರಕ್ಷಿತವಾಗಿ ಬೈಕ್ ಓಡಿಸುತ್ತೇನೆ, ಹೀಗಾಗಿ ನನಗೇನೂ ಆಗುವುದಿಲ್ಲ, ನನಗೆ ಹೆಲ್ಮೆಟ್ ಬೇಕಿಲ್ಲ ಅನ್ನುವುದು, ಇಲ್ಲೇ ಮನೆ ಹತ್ತಿರವೇ ಹೋಗಿ ಬರುತ್ತೇನೆ, ಅಷ್ಟಕ್ಕೆ ಹೆಲ್ಮೆಟ್ ಏಕೆ ಅನ್ನುವುದು, ಈ ಬಿಸಿಲಿನಲ್ಲಿ ಹೇಗಪ್ಪಾ ಹೆಲ್ಮೆಟ್ ಹಾಕುವುದು ಅನ್ನುವುದು, ಯಾರಪ್ಪಾ ಈ ಹೆಲ್ಮೆಟ್ ತೆಗೆದುಕೊಂಡು ಹೋಗುವವರು ಅನ್ನುವ ಸೋಮಾರಿತನ ತೋರಿಸುವುದು ಸ್ವಲ್ಪವೂ ಸರಿಯಲ್ಲ.

ಕೆಲವರು ಹೆಲ್ಮೆಟ್ ಬಳಕೆಯಿಂದ ನಮ್ಮ ತಲೆಗೂದಲು ಉದುರುತ್ತವೆ ಅನ್ನುತ್ತಾರೆ, ನಮಗೆ ವಾಹನಗಳ ಸದ್ದೇ ಸರಿಯಾಗಿ ಕೇಳಿಸದಂತಾಗುತ್ತದೆ ಅನ್ನುತ್ತಾರೆ. ಇನ್ನೂ ಕೆಲವರು ಹೆಲ್ಮೆಟ್ ಧರಿಸಿದರೆ ನಮಗೆ ತಲೆ ನೋವು ಬರುತ್ತೆ, ಕುತ್ತಿಗೆ ನೋವು ಬರುತ್ತೆ ಅನ್ನುತ್ತಾರೆ. ಇನ್ನೂ ಕೆಲವರು ಈ ಹೆಲ್ಮೆಟ್‌ ನಿಂದ ರಸ್ತೆಯೇ ಸರಿಯಾಗಿ ಕಾಣಿಸಲ್ಲ, ಇತ್ಯಾದಿ ಕಾರಣಗಳನ್ನೂ ನೀಡುತ್ತಾರೆ. ಆದರೆ, ಇವೆಲ್ಲಾ ನೆಪಗಳೂ ಕೂಡ ನಮ್ಮ ಪ್ರಾಣರಕ್ಷಣೆ ಮಾಡುವುದಿಲ್ಲ ಅನ್ನುವ ಸತ್ಯವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಕೇವಲ ಒಂದು  ಸಾವಿರ ರೂಪಾಯಿಗೆ ಉತ್ತಮವಾದ ಹೆಲ್ಮೆಟ್ ಸಿಗುತ್ತೆ, ಆದರೆ, ತಲೆಗೆ ಪೆಟ್ಟಾದರೆ, ಅದನ್ನು ಸರಿಮಾಡಿಕೊಳ್ಳಲು, ಮೂರು ತಲೆ ಮಾರುಗಳಿಂದ ಮಾಡಿಟ್ಟಿರುವ ಆಸ್ತಿ ಪಾಸ್ತಿ ಮಾರಿದರೂ ಸಾಕಾಗುವುದಿಲ್ಲ.

ಇನ್ನು ಯಾವ ರೀತಿ ಹೆಲ್ಮೆಟ್ ಖರೀದಿಸಬೇಕು ಎಂದು ನೋಡುವುದಾದರೆ, ಫುಲ್ ಫೇಸ್ ಹೆಲ್ಮೆಟ್ ಅಂದರೆ, ಸಂಪೂರ್ಣವಾಗಿ ತಲೆ ಮತ್ತು ಮುಖಕ್ಕೆ ರಕ್ಷಣೆ ನೀಡುವ ಹೆಲ್ಮೆಟ್‌ ಧರಿಸುವುದೇ ಸೂಕ್ತ. ಆದರೆ, ಹೆಲ್ಮೆಟ್‌ ಗಳನ್ನು ಅಧಿಕೃತ ಅಂಗಡಿಗಳಿಂದ ಖರೀದಿಸಬೇಕೇಹೊರತು ರಸ್ತೆ ಬದಿಯಲ್ಲಿ ಗುಡ್ಡೆ ಹಾಕಿಕೊಂಡು ಕುಳಿತವರಿಂದ ಅಲ್ಲ.

ಆ ರೀತಿಯ ಕಳಪೆ ಗುಣಟಮಟ್ಟದ ಹೆಲ್ಮೆಟ್‌ಗಳನ್ನು ಧರಿಸಿದರೆ ನಿಮ್ಮ ತಲೆಗೆ ಯಾವುದೇ ರೀತಿ ರಕ್ಷಣೆ ಸಿಗುವುದಿಲ್ಲ. ಭಾರತದಲ್ಲಿ ನೂರೈವತ್ತಕ್ಕೂ ಹೆಚ್ಚು ನೋಂದಾಯಿತ ಹೆಲ್ಮೆಟ್ ತಯಾರಕ ಕಂಪನಿಗಳಿವೆ. ನಿಮ್ಮ ಅಗತ್ಯ ಮತ್ತು ಆಯ್ಕೆಗೆ ಅನುಗುಣವಾಗಿ, ಸುಮಾರು ಏಳುನೂರ ಐವತ್ತು ರೂಪಾಯಿಗಳಿಂದ ಹಿಡಿದು, ಲಕ್ಷ ರೂಪಾಯಿ ಬೆಲೆಯ ಹೆಲ್ಮೆಟ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಇಷ್ಟಾದ ಮೇಲೂ, ಇಲ್ಲಿ ಹೆಲ್ಮೆಟ್‌ಗಳ ಬಳಕೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದಂಥ ಇನ್ನೂ ಒಂದೆರಡು ಪ್ರಮುಖ ವಿಚಾರಗಳಿವೆ. ಯಾವುದೇ ಹೆಲ್ಮೆಟ್ ಅನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಬಳಸುವುದು ಸೂಕ್ತವಲ್ಲ, ಅದರ ಜೊತೆಗೆ ಸದಾಕಾಲ ಒಂದೇ ಹೆಲ್ಮೆಟ್‌ ಬಳಸುವುದೂ ಸರಿಯಲ್ಲ. ಒಂದು ಬಾರಿ ಅಪಘಾತದಲ್ಲಿ ನಿಮ್ಮನ್ನು ರಕ್ಷಿಸಿದ ಹೆಲ್ಮೆಟ್, ಹೊರನೋಟಕ್ಕೆ ಚೆನ್ನಾಗೇ ಕಂಡುಬಂದರೂ, ಆಂತರಿಕವಾಗಿ ಪೆಟ್ಟು ತಿಂದಿರುತ್ತದೆ. ಹೀಗಾಗಿ ಇಂತಹ ಹೆಲ್ಮೆಟ್‌ ಅನ್ನು ಇನ್ನೂ ಚೆನ್ನಾಗಿದೆ ಎಂದು ಹೇಳಿಕೊಂಡು ಮತ್ತೆ ಬಳಸುವುದು ಸರಿಯಲ್ಲ.

ಇದೆಲ್ಲಾ ಆದ ಮೇಲೆ, ನಾವುಗಳು ಹೆಲ್ಮೆಟ್ ಅನ್ನುವ ಪದವನ್ನು ಶಿರಸ್ತ್ರಾಣ ಎಂದೆಲ್ಲಾ ಬರೆದು ಕರೆದು, ಅದೊಂದು ವಿಚಿತ್ರ ಅನ್ನಿಸುವಂತೆ ಮಾಡುವುದರ ಅಗತ್ಯವಿಲ್ಲ. ಬಸ್ಸು, ರೈಲು ಎಂಬ ಪದಗಳು ಹೇಗೆ ಕನ್ನಡದೊಳಗೆ ಸೇರಿಕೊಂಡಿವೆಯೋ ಹಾಗೆಯೇ ಹೆಲ್ಮೆಟ್ ಪದವೂ ಕೂಡ. ಹೀಗಿದ್ದರೂ ಕೂಡ ಅದನ್ನು ಶಿರಸ್ತ್ರಾಣ ಅನ್ನುವ ಬದಲು ತಲೆಗವಚ ಅಥವ ತಲೆರಕ್ಷಕ ಎಂದು ಕರೆದರೆ ಜನರಿಗೆ ಮತ್ತು ಅವರ ತಲೆಗೆ ಹೆಚ್ಚು ಹಿಡಿಸಬಹುದು.  

ಇತ್ತೀಚೆಗೆ, ಹೆಲ್ಮೆಟ್ ಅನ್ನುವುದು ಫ್ಯಾಷನ್ ಸ್ಟೇಟ್‌ಮೆಂಟ್ ಕೂಡ ಆಗಿದೆ. ವಿವಿಧ ವಿನ್ಯಾಸ ಮತ್ತು ಆಕರ್ಷಕ ಬಣ್ಣಗಳಲ್ಲಿ ಹೆಲ್ಮೆಟ್‌ ಗಳು ಸಿಗುತ್ತಿವೆ. ಹೀಗಾಗಿ, ಫ್ಯಾಷನ್ ಹೆಸರಿನಲ್ಲಾದರೂ ಹೆಲ್ಮೆಟ್ ಹಾಕಿಕೊಳ್ಳಿ ತಪ್ಪೇನಿಲ್ಲ. ಒಟ್ಟಿನಲ್ಲಿ ಅಮೂಲ್ಯವಾದ ಜೀವ ರಕ್ಷಣೆ ಆಗಬೇಕು ಅಷ್ಟೇ. ನೆನಪಿಡಿ ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಅನ್ನುವ  ದಾಸವರೇಣ್ಯರ ಮಾತು ಇಲ್ಲೂ ಅನ್ವಯವಾಗುತ್ತದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ