ದೇಶದಲ್ಲಿ ಸಾಲ ನೀತಿ ಎಂಬುದೇನಾದರೂ ಇದೆಯೇ..?

Kannada News

16-06-2017

ಬೆಂಗಳೂರು: ದೊಡ್ಡ ದೊಡ್ಡ ಉದ್ಯಮಿಗಳ ಅಪಾರ ಪ್ರಮಾಣದ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ದೇಶ ಮುಳುಗಿ ಹೋಗುತ್ತದೆ ಎಂದು ಭಾವಿಸುತ್ತದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರವೇ ಹೀಗೆ ಭಾವಿಸುವಾಗ ನಮಗಿರುವ ಮಿತಿಯಲ್ಲಿ ಸಾಲ ಮನ್ನಾ ಮಾಡಿದರೆ ರಾಜ್ಯ ಮುಳುಗಿ ಹೋಗುತ್ತದೆ ಎಂದು ನಾವು ಕೂಡ ಭಾವಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ವಿತ್ತೀಯ ಕಾರ್ಯಕಲಾಪಗಳ ಮೇಲೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ  ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಕುರಿತು ನಾವು ಬಹಳ ಮಾತನಾಡುತ್ತಿದ್ದೇವೆ. ಆದರೆ ಈ ದೇಶದಲ್ಲಿ ಸಾಲ ನೀತಿ ಎಂಬುದೇನಾದರೂ ಇದೆಯೇ? ಎಂದು ಪ್ರಶ್ನೆ ಮಾಡಿದರು. ಇವತ್ತು ರಾಜ್ಯದ ಸಹಕಾರ ಸಂಘಗಳಿಂದ ರೈತರು ಪಡೆದಿರುವ ಕೃಷಿ ಸಾಲದ ಪ್ರಮಾಣ ಒಟ್ಟಾರೆ ಶೇಕಡಾ 20 ರಷ್ಟಿದ್ದರೆ, ವಾಣಿಜ್ಯ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲದ ಪ್ರಮಾಣ ಶೇಕಡಾ 80 ರಷ್ಟಿದೆ. ಹೀಗೆ ವಾಣಿಜ್ಯ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಿದರೆ ದೇಶ ಮುಳುಗುತ್ತದೆ ಎಂದು ಕೇಂದ್ರ ಸರ್ಕಾರ ಭಾವಿಸುವುದಾದರೆ ನಮಗಿರುವ ಮಿತಿಯಲ್ಲಿ ನಾವು ರೈತರ ಸಾಲ ಮನ್ನಾ ಮಾಡಿದರೆ ರಾಜ್ಯ ಮುಳುಗುತ್ತದೆ ಎಂದು ಭಾವಿಸುವುದರಲ್ಲಿ ತಪ್ಪೇನಿದೆ?ಎಂದು ಕೇಳಿದರು. ಒಂದು ಹಂತದಲ್ಲಿ ಉದ್ಯಮಿಗಳ ವಿರುದ್ಧ ಗರಂ ಆದ ಅವರು, ಈ ದೇಶವನ್ನು ಬ್ರಿಟಿಷರು ಬಿಟ್ಟು ಹೋದರು. ಆದರೆ ಬ್ರಿಟಿಷರು ಬಿಟ್ಟು ಹೋದ ಜಾಗದಲ್ಲಿ ಅವರ ಅಪ್ಪಂದಿರು ಬಂದು ಕುಳಿತಿದ್ದಾರೆ. ಇವರೇ ಈ ದೇಶದ ಪ್ರಧಾನಿ ಯಾರಾಗಬೇಕು? ಎಂದು ನಿರ್ಧರಿಸುತ್ತಾರೆ. ಇವರೇ ಪತ್ರಿಕೆಗಳನ್ನು, ಟಿವಿಗಳನ್ನು ನಡೆಸುತ್ತಾರೆ? ಯಾರದು ಸರಿ? ಯಾರದು ತಪ್ಪು? ಎಂದು ಜನ ತೀರ್ಪು ನೀಡುತ್ತಾರೆ. ಪ್ರತಿ ವಿಷಯಕ್ಕೂ ಸಂಬಂಧಿಸಿದಂತೆ ಇವರೇ ನೀತಿ ನಿರೂಪಕರು. ಇಂತವರ ಪೈಕಿ ಬಹುತೇಕರು ದೊಡ್ಡ ಮಟ್ಟದ ಸಾಲ ಮಾಡಿದರೂ ಬಚಾವಾಗುತ್ತಾರೆ. ಕೇಂದ್ರ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಆದರೆ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಆತನ ಆಸ್ತಿಯನ್ನು ಜಪ್ತಿ ಮಾಡುವ ಕೆಲಸವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದಾಗಿ ಯೋಚಿಸೋಣ. ಸಾಲ ಮನ್ನಾ ಎಂದರೆ ಒಟ್ಟಾರೆಯಾಗಿ ಯಾವ ರೈತರೂ ಸಾಲ ಮರುಪಾವತಿ ಮಾಡಬಾರದು ಎಂದು ಕರೆ ಕೊಡೋಣ ಎಂದು ಅವರು ಹೇಳಿದಾಗ ಸದನ ಮೌನವಾಗಿತ್ತು. ಸಹಕಾರ ಸಂಘಗಳಿಂದ ರೈತರು ಪಡೆದ ಕೃಷಿ ಸಾಲ ಮಾತ್ರವಲ್ಲ, ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಕೃಷಿ ಸಾಲವೂ ಮನ್ನಾ ಆಗಬೇಕಲ್ಲ? ಇವತ್ತು ನಾವು ಮಾತ್ರ ಸಾಲ ಮನ್ನಾ ಮಾಡಿದರೆ ಮುಂದಿನ ವರ್ಷದಿಂದ ಸಹಕಾರ ಸಂಘಗಳು ಸಾಲ ನೀಡುವುದು ಹೇಗೆ? ಎಂದು ಪ್ರಶ್ನಿಸಿದರು. ಹೀಗಾಗಿ ನಾವೆಲ್ಲ ಪಕ್ಷ ಭೇಧ ಮರೆತು ಒಟ್ಟಾಗಿ ಕುಳಿತು ಚರ್ಚಿಸೋಣ. ರೈತರ ಇಪ್ಪತ್ತೈದು ಸಾವಿರ ರೂ ತನಕ ಸಾಲ ಮನ್ನಾ ಮಾಡಬೇಕಾ? ಐವತ್ತು ಸಾವಿರ ತನಕ ಸಾಲ ಮನ್ನಾ ಮಾಡಬೇಕಾ?ಎಪ್ಪತ್ತೈದು ಸಾವಿರ ರೂ ತನಕ ಸಾಲ ಮನ್ನಾ ಮಾಡಬೇಕಾ? ಎಂಬ ಕುರಿತು ಪರಿಶೀಲಿಸೋಣ. ಇವತ್ತು ರೈತರು ತಮ್ಮ ಜಮೀನಿನಲ್ಲಿ ಒಂದು ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲು ಆರು ಕೋಟಿ ಬೇಕು. ಅವರ ಜಮೀನಿನ ಆಧಾರದ ಮೇಲೆ ಅವರಿಗೆ ಸಾಲ ಸಿಗುವುದಿಲ್ಲ. ನಗರ ಕೇಂದ್ರೀತ ಪ್ರದೇಶಗಳವರಿಗೆ ಸಾಲ ಸಿಗುತ್ತದೆ. ಇದೇ ರೀತಿ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಟೊಮೆಟೋಗೆ ಮೊನ್ನೆ ಕ್ವಿಂಟಾಲ್‍ಗೆ ಎಂಭತ್ತು ರೂಪಾಯಿ ಬೆಲೆ ಇತ್ತು. ಈವತ್ತು ಅದು ಇನ್ನೂರಾ ಎಂಭತ್ತು ರೂಪಾಯಿಗಳಿಗೇರಿದೆ. ಹೀಗೆ ದರದಲ್ಲಿ ಇಳಿಕೆ, ಏರಿಕೆ ಮಾಡುವುದು ಯಾರು? ಬೆಲೆ ನಿಯಂತ್ರಣವೇ ನಮ್ಮ ಕೈಯ್ಯಲ್ಲಿಲ್ಲ. ಕಾಣದ ಕೈಗಳು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದಂತೆ ಮಾಡುತ್ತೇವೆ ಎಂದರು. ಯಾವ ಕಾಲಕ್ಕೆ, ಯಾವ ಬೆಳೆ ಬೆಳೆಯಬೇಕು ಎಂಬ ಕುರಿತು ರೈತರಿಗೆ ಸ್ಪಷ್ಟವಾಗಿ ಹೇಳಲು ಒಂದು ಬೆಳೆ ನೀತಿ ಎಂಬುದು ಇಲ್ಲ. ಪರಿಸ್ಥಿತಿ ಹೀಗೆಲ್ಲ ಇರುವಾಗ ನಾವು ಕೇವಲ ರೈತರ ಸಾಲ ಮನ್ನಾದಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸಿದರೆ ಸರಿಯಲ್ಲ ಎಂದರುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ