ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕದಿಂದ ಹಿಂದೆ ಸರಿಯದಿರಲು ಸರ್ಕಾರ ನಿರ್ಧಾರ !  

Kannada News

16-06-2017

ಬೆಂಗಳೂರು: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ತಿದ್ದುಪಡಿ ವಿಧೇಯಕಕ್ಕೆ ವೈದ್ಯರು ವಿರೋಧ ವ್ಯಕ್ತಪಡಿಸಿ, ತೀವ್ರ ಪ್ರತಿಭಟನೆ ಆರಂಭಿಸಿದ್ದು, ಒಂದೇ ದಿನಕ್ಕೆ ರಾಜ್ಯದ ಹಲವಾರು ಕಡೆ ರೋಗಿಗಳು ತೀವ್ರ ಪರದಾಡುವಂತಾಗಿದೆ. ಆದರೆ ಸರ್ಕಾರ ಹೊಸ ಕಾನೂನು ತರುವ ವಿಚಾರದಲ್ಲಿ ಹಿಂದೆ ಸರಿಯದಿರಲು ತೀರ್ಮಾನಿಸಿದೆ. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ತಿದ್ದುಪಡಿ ಕಾಯ್ದೆಯನ್ನು ಎರಡು ದಿನಗಳ ಹಿಂದೆ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಿಸಬಹುದು ಎನ್ನುವ ನಿಲುವಿನಲ್ಲಿ ಸರ್ಕಾರವಿದೆ. ಅದರ ಬೆನ್ನಲ್ಲೇ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ಆರಂಭಿಸಿದ್ದು, ಅವರ ಪ್ರತಿಭಟನೆಯಲ್ಲಿ ಅರ್ಥವೇ ಇಲ್ಲ ಎಂದಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ, ಈ ಕುರಿತು ವಿವರವಾಗಿ ಚರ್ಚೆಯಾಗಲಿ ಎಂದು ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಈ ಕುರಿತು ಚರ್ಚೆ ನಡೆದ ನಂತರ ಮುಂದಿನ ತೀರ್ಮಾನದ ಬಗ್ಗೆ ಯೋಚನೆ ಮಾಡೋಣ. ಜನಪ್ರತಿನಿಧಿಗಳ ಅಭಿಪ್ರಾಯವನ್ನು ಕೇಳದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಅವರ ಅಭಿಪ್ರಾಯವನ್ನು ಕೇಳುವ ಮೊದಲೇ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ಮಾತನಾಡಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಮಂಡಿಸಿದೆ. ಇದನ್ನು ಮಾಡುವ ಬದಲು ಮೊದಲು ಅದು ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಜನರಿಗೆ ಅತ್ಯುತ್ತಮ ಸವಲತ್ತು ನೀಡಲು ಮುಂದಾಗಬೇಕು ಎಂದರು. ಸರ್ಕಾರಿ ಆಸ್ಪತ್ರೆಗಳು ನೆಟ್ಟಗಿದ್ದರೆ ಜನ ಯಾಕೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ? ಹೀಗಾಗಿ ಸರ್ಕಾರ ಮೊದಲು ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಿ. ಆ ಕೆಲಸ ಮಾಡುವುದನ್ನು ಬಿಟ್ಟು ಖಾಸಗಿಯವರನ್ನು ನಿಯಂತ್ರಿಸುತ್ತೇವೆ ಎಂದು ಹೊರಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ದೊರೆಯುತ್ತದೆ ಎಂದರೆ ಜನ ಯಾಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ? ಹೀಗಾಗಿ ಸರ್ಕಾರ ಮೊದಲು ಈ ಕಡೆ ಗಮನ ಹರಿಸಲಿ.ಅದನ್ನು ಬಿಟ್ಟು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ತುಘಲಕ್ ತರ ದರ್ಬಾರು ನಡೆಸಿದರೆ ನಾವು ಸರ್ಕಾರವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದರು. ಈ ಮಧ್ಯೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ