ಯುವತಿಯ ಮೇಲೆ ಹಲ್ಲಿ ಎಸೆದು ಲೈಂಗಿಕ ಕಿರುಕುಳ !

Kannada News

16-06-2017

ಬೆಂಗಳೂರು: ಮಹಿಳೆಯರ ರಕ್ಷಣೆಗೆ ಮತ್ತು ಸಾಮಾಜಿಕ ಜೀವನದಲ್ಲಿ ಅವರ ವಿರುದ್ಧ ಎಸಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ, ಪೊಲೀಸರು, ಸ್ವಯಂ ಸೇವಾ ಸಂಘಗಳು ಎಷ್ಟೇ ಬಲವಾಗಿ ಕಾನೂನು ಮತ್ತು ತಂತ್ರಜ್ಞಾನವನ್ನು ಬಲಪಡಿಸಿದರೂ ಮಹಿಳೆಯರ ವಿರುದ್ಧ ದೌರ್ಜನ್ಯಗಳು ಹೊಸ ಹೊಸ ರೂಪದಲ್ಲಿ  ವ್ಯಕ್ತವಾಗುತ್ತಿವೆ ಇದಕ್ಕೆ ನಿದರ್ಶನ ವೆಂಬಂತೆ ಯುವತಿಯರ ಮೇಲೆ ದೌರ್ಜನ್ಯವೆಸಗಲು ಯುವಕರು ಹೊಸ ತಂತ್ರ ಬಳಸುತ್ತಿದ್ದಾರೆ. ಚಪಲ ತೀರಿಸಿಕೊಳ್ಳಲು ಯುವಕರು ಯುವತಿಯರ ಮೇಲೆ ಹಲ್ಲಿಯನ್ನು ಎಸೆಯುತ್ತಾರೆ. ಬಳಿಕ ಅದನ್ನು ತೆಗೆಯುವ ನೆಪದಲ್ಲಿ ಬಂದು ಅಂಗಾಂಗ ಮುಟ್ಟಿ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಹಾರ ಮೂಲದ ಯುವತಿಯೊಬ್ಬರು ನಗರಕ್ಕೆ  15 ದಿನಗಳ ಹಿಂದೆ ತರಬೇತಿಗೆಂದು ಆಗಮಿಸಿದ್ದಾಳೆ. ಎರಡು ದಿನಗಳ ಹಿಂದೆ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಯುವತಿ ತರಬೇತಿ ಮುಗಿಸಿ ತಾನು ವಾಸವಿದ್ದ ಕಡೆ ಹೊರಟಿದ್ದಾಳೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಟೀ ಶಾಪ್ ಬಳಿ ಬಂದಾಗ ಕಾಮುಕರ ಗುಂಪು ಯುವತಿಯ ಮೇಲೆ ಹಲ್ಲಿಯನ್ನು ಎಸೆದಿದ್ದಾರೆ. ಬಳಿಕ ಅದೇ ಹಲ್ಲಿಯನ್ನು ತೆಗೆಯುವ ನೆಪದಲ್ಲಿ ಈ ಗುಂಪು ಯುವತಿಯ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ. ಘಟನೆ ನಡೆದ ಬಳಿಕ ಯುವತಿ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರು ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ವೀಡಿಯೋ ವಶಪಡಿಸಿಕೊಂಡಿದ್ದು ಇದರ ನೆರವಿನಿಂದ ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ