ಸಿಮೆಂಟ್ ಇಟ್ಟಿಗೆಯಿಂದ ಮಹಿಳೆ ಕೊಲೆ !

Kannada News

16-06-2017

ಬೆಂಗಳೂರು: ಆಡುಗೋಡಿಯ ಕನಕ ನಗರದಲ್ಲಿ ಗುರುವಾರ ಮಧ್ಯರಾತ್ರಿ ಗುಜರಿ ಅಂಗಡಿಯಲ್ಲಿ ಮಲಗಿದ್ದ ಒಂಟಿ ಮಹಿಳೆಯೊಬ್ಬರ ತಲೆಮೇಲೆ ಸಿಮೆಂಟ್ ಇಟ್ಟಿಗೆ (ಹಾಲೊಬ್ಲಾಕ್) ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದವರನ್ನು ಕನಕನಗರದ ಶೆಡ್‍ವೊಂದರಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದ ಗಜಲಕ್ಷ್ಮಿ (60) ಎಂದು ಗುರುತಿಸಲಾಗಿದೆ. ಶೆಡ್‍ನಲ್ಲಿ ಮಲಗಿದ್ದ ಗಜಲಕ್ಷ್ಮಿ ಅವರ ತಲೆ ಮೇಲೆ ರಾತ್ರಿ 12ರ ನಂತರ ದುಷ್ಕರ್ಮಿಗಳು ಹಾಲೋಬ್ಲಾಕ್ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ನೀಲಸಂದ್ರದಲ್ಲಿ ಮೊದಲು ವಾಸಿಸುತ್ತಿದ್ದ ಗಜಲಕ್ಷ್ಮಿ ಅವರ ಪತಿ ಹಾಗೂ ಮಗ ಮೃತಪಟ್ಟಿದ್ದು, ಸೊಸೆ, ಮೊಮ್ಮಕ್ಕಳು ಅಲ್ಲೇ ವಾಸಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಗಜಲಕ್ಷ್ಮಿ ಜೀವನೋಪಾಯಕ್ಕಾಗಿ ಕನಕನಗರದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲೇ ವಾಸಿಸುತ್ತಿದ್ದ ಅವರಿಗೆ ಸೊಸೆ, ಮೊಮ್ಮಕ್ಕಳು ಊಟ ತಂದುಕೊಡುತ್ತಿದ್ದರು. ರಾತ್ರಿ ಊಟ ಮಾಡಿದ ನಂತರ ಅಲ್ಲೇ ಗಜಲಕ್ಷ್ಮಿ ಮಲಗಿದ್ದು, ಅವರ ಬಳಿ ಇದ್ದ ಹಣ ದೋಚಲು ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿರುವ ಆಡುಗೋಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ