ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಸಂವಿಧಾನದ ಮೌಲ್ಯಗಳಿಗೆ ಪೂರಕವಾಗಿಲ್ಲ !

Kannada News

16-06-2017

ಬೆಂಗಳೂರು:  ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ "ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2017"ನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶುಕ್ರವಾರ ಖಾಸಗಿ ವೈದ್ಯರು ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿ,ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಸಂಘದ ನೇತೃತ್ವದಲ್ಲಿ ಸೇರಿದ ವೈದ್ಯರುಗಳು ಅಲ್ಲಿಂದ ಫ್ರೀಡಂ ಪಾರ್ಕ್‍ವರೆಗೆ ಬೃಹತ್ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಮುಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಖಾಸಗಿ ವೈದ್ಯರ ಮುಷ್ಕರದಿಂದಾಗಿ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ತುರ್ತು ನಿಗಾ ಘಟಕ ಹೊರತುಪಡಿಸಿ ಉಳಿದೆಲ್ಲಾ ಒಳ ರೋಗಿ ಹಾಗೂ ಹೊರ ರೋಗಿಗಳ ವಿಭಾಗದಲ್ಲಿ ವೈದ್ಯರು ಇಲ್ಲದ್ದರಿಂದ ರೋಗಿಗಳು ಧಿಕ್ಕು ತೋಚದಂತಾಗಿ ಕುಳಿತಿದ್ದ ದೃಶ್ಯ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಕಂಡುಬಂತು. ಇನ್ನು ಕೆಲವು ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದರು. ಇದರಿಂದ ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವುದು ಕಂಡುಬಂದಿತು,

ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಬೃಹತ್ ಜಾಥಾ ಮೆರವಣಿಗೆ ನಡೆಸಿ ಸಮಾವೇಶಗೊಂಡ ವೈದ್ಯರನ್ನ ಉದ್ದೇಶಿಸಿ ಮಾತನಾಡಿದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾನೂನು ಸಂವಿಧಾನದ ಮೌಲ್ಯಗಳಿಗೆ ಪೂರಕವಾಗಿಲ್ಲ. ಖಾಸಗಿ ಆರೋಗ್ಯ ವ್ಯವಸ್ಥೆ ಚೆನ್ನಾಗಿದೆ. ಅದನ್ನು ಹಾಳು ಮಾಡಬಾರದು. ಎಷ್ಟು ಸಚಿವರು, ಶಾಸಕರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಐ.ಎಂ.ಎ ಅಧ್ಯಕ್ಷ ಡಾ. ರವೀಂದ್ರ ಮಾತನಾಡಿ, ಸಚಿವ ರಮೇಶ್ ಕುಮಾರ್ ಅವರು ಖಾಸಗಿ ವೈದ್ಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ನಮ್ಮನ್ನು ಲಜ್ಜೆಗೇಡಿ, ಲೂಟಿಕೋರರು ಎಂದು ಕರೆಯುತ್ತಾರೆ. ನಾವು ಕೂಡ ಸಂಸ್ಕಾರಯುತ ಕುಟುಂಬಗಳಿಂದ ಬಂದಿದ್ದೇವೆ. ನಿಮಗೆ ಯಾವುದಾದರೂ ವೈದ್ಯರಿಂದ ವೈಯಕ್ತಿಕವಾಗಿ ಅನ್ಯಾಯವಾಗಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಿ, ಅದಕ್ಕೆ ಈ ವಿಧೇಯಕ ಜಾರಿಗೆ ತರಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ಚಿಕಿತ್ಸೆಗೆ ಇಷ್ಟು ಹಣ ಎಂದು ನಿಗದಿಮಾಡಲು ಇದು ಗಾರೆ, ಸಿಮೆಂಟ್ ಕೆಲಸ ಅಲ್ಲ. ವೈದ್ಯರು ಮಾಡುತ್ತಿರುವ ಕೆಲಸ ಸೇವೆಯಾಗಿದ್ದು, ಅದನ್ನು ವ್ಯಾಪಾರದ ರೀತಿ ಕಾಣಬಾರದು. ಗನ್ ಪಾಯಿಂಟ್ ಇಟ್ಟು ಕೆಲಸ ಮಾಡಿಸಬೇಡಿ. ಮಾನವೀಯತೆ ಪಾಠ ನಿಮ್ಮಿಂದ ಕಲಿಯುವ ಅಗತ್ಯವಿಲ್ಲ ಎಂದು ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು.

ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾಯ್ದೆ ಕರಾಳ ಕಾಯ್ದೆಯಾಗಿದೆ. ವೈದ್ಯರಲ್ಲದವರು ಇದರ ಕರಡನ್ನು ತಯಾರಿಸಿದ್ದಾರೆ. ಅವೈಜ್ಞಾನಿಕವಾಗಿರುವ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ನ್ಯಾ.ವಿಕ್ರಂಜಿತ್ ಸೇನ್ ಅವರ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಬೇಕಿದ್ದರೆ ಉಚಿತ ಚಿಕಿತ್ಸೆ ನೀಡಲಿ ಅದನ್ನು ಬಿಟ್ಟು ಖಾಸಗಿ ಆಸ್ಪತ್ರೆಗಳು ಹೆಚ್ಚು ಶುಲ್ಕ ಪಡೆದರೆ ಜೈಲಿಗೆ ಹಾಕುತ್ತೇವೆಂದು ಸರ್ಕಾರ ಹೇಳಿರುವುದು ಖಂಡನೀಯ. ನಾವು ಜೈಲಿಗೆ ಹೋಗಲು ಎಂಬಿಬಿಎಸ್ ಮಾಡಿದ್ದೇವಾ ? ಸರ್ಕಾರ ತಂದಿರುವ ವಿಧೇಯಕದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಉಲ್ಲೇಖಿಸಿರುವುದು ಅತ್ಯಂತ ಖಂಡನಾರ್ಹ. ಸರ್ಕಾರದ ಈ ಕ್ರಮವನ್ನು ಇಡೀ ಖಾಸಗಿ ಆಸ್ಪತ್ರೆಗಳ ಸಮೂಹ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ, ಕ್ಲೌಡ್ ನೈನ್ ಆಸ್ಪತ್ರೆಯ ನಿರ್ದೇಶಕ ಡಾ.ಕಿಶೋರ್ ಕುಮಾರ್, ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್ ಸೇರಿದಂತೆ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾಗಿಯಾಗಿದ್ದರು

ಇದೇ ವೇಳೆ ಮಾತನಾಡಿದ ಐ.ಎಂ.ಎ ಅಧ್ಯಕ್ಷ ಡಾ. ರವೀಂದ್ರ ಅವರು, ಸಚಿವ ರಮೇಶ್ ಕುಮಾರ್ ಮತ್ತು ಕೈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀವು ನಮ್ಮನ್ನು ಲಜ್ಜೆಗೇಡಿ, ಲೂಟಿಕೋರರು ಅಂತ ಕರೆಯಲು ನಾವು ಹೆಂಗೆಂಗೋ ಹುಟ್ಟಿಬಂದಿಲ್ಲ. ನಮಗೂ ಸಂಸ್ಕಾರ ಇದೆ. ನಿಮಗೆ ಯಾವುದಾದರೂ ವೈದ್ಯರಿಂದ ವೈಯಕ್ತಿಕವಾಗಿ ಅನ್ಯಾಯವಾಗಿರಬಹುದು  ಅದಕ್ಕೆ ಈ ವಿಧೇಯಕ ಜಾರಿಗೆ ತರಲು ಹೊರಟ್ಟಿದ್ದೀರಾ ಅನಿಸುತ್ತದೆ ಎಂದು ಆರೋಪಿಸಿದರು.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಎಲ್ಲಾ ವೈದ್ಯರು ವೃತ್ತಿ ಬಿಟ್ಟು ಬಿಟ್ಟರೆ ನೀವೇನು ಮಾಡುತ್ತೀರಾ ಚಿಕಿತ್ಸೆಗೆ ಇಷ್ಟು ಬೇಕು ಎಂದು ನಿಗಧಿಪಡಿಸಲು ಇದು ಗಾರೆ ಸಿಮೆಂಟ್ ಕೆಲಸ ಅಲ್ಲ. ಮೊದಲು ವೈದ್ಯರ ಸೇವೆನಾ ಅಥವಾ ಟ್ರೇಡ್ ಬ್ಯುಸಿನೆಸ್ ಎಂದು ಸ್ಪಷ್ಟತೆ ಕೊಡಿ. ಸೇವೆ ಅಂಥ ಹೇಳೋದಾದರೆ ಮಠ ಮಾನ್ಯ, ಎನ್.ಜಿ.ಓ.ಗಳಿಗೆ ಕೊಡುವ ಸವಲತ್ತು ನೀಡಿ. ಟ್ರೇಡ್ ಬ್ಯುಸಿನೆಸ್ ಅಂದರೆ ನಮ್ಮ ತಂಟೆಗೆ ಬರಬೇಡಿ. ಗನ್ ಪಾಯಿಂಟ್ ಇಟ್ಟು ಕೆಲ್ಸ ಮಾಡಿಸಬೇಡಿ. ಮಾನವೀಯತೆ ಪಾಠ ನಿಮ್ಮಿಂದ ಕಲಿಯಬೇಕಿಲ್ಲ. ಮಾನವೀಯತೆಯಿಂದ ಈ ವೃತ್ತಿಗೆ ಬಂದಿದ್ದೇವೆ ಎಂದರು.

ನಾರಾಯಣ ಹೃದಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ದೇವಿ ಶೆಟ್ಟಿ ಮಾತನಾಡಿ, ಸರ್ಕಾರಿ ಆಸ್ಪತ್ರೆ ಸರಿಯಿದ್ದರೆ ಜನ ಯಾಕೆ ಖಾಸಗಿಗೆ ಬರ್ತಾರೆ. ನೀವು ಸರ್ಕಾರಿ ಆಸ್ಪತ್ರೆಯನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಸರ್ಕಾರದ ಈ ವಿಧೇಯಕದಿಂದ ಖಾಸಗಿ ಆಸ್ಪತ್ರೆಗೆ ತೊಂದರೆಯಾಗಲಿದೆ. ಈ ವಿಧೇಯಕದ ಬಗ್ಗೆ ಚರ್ಚೆ ನಡೆಸಿ ವಾಪಾಸು ಪಡೆದುಕೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಇಲ್ಲದೇ ಇದ್ದರೆ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ