ರಾಜ್ಯದ ಹಲವೆಡೆ ಎಸಿಬಿ ದಾಳಿ ಪ್ರಮುಖ ದಾಖಲೆಗಳ ವಶ !

Kannada News

16-06-2017

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಎಡೆಮುರಿ ಕಟ್ಟಲು ಎಸಿಬಿ( ಭ್ರಷ್ಟಚಾರ ನಿಗ್ರಹ ದಳ)ಅಧಿಕಾರಿಗಳು ಇಂದು ರಾಜ್ಯದ ವಿವಿಧೆಡೆ ದಾಳಿ ನಡೆಸಿ ಹಲವು ಮಹತ್ವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದ ಚಿಕ್ಕಬಳ್ಳಾಪುರ, ಬೀದರ್, ಕೋಲಾರ, ಹಾವೇರಿ, ರಾಯಚೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೆಸಂದ್ರ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿರುವ ವೆಂಕಟರಮಣಪ್ಪ ಅವರ ಎರಡು ನಿವಾಸಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.  ವೆಂಕಟರಮಣ್ಣಪ್ಪನವರಿಗೆ ಸೇರಿದ ಚಾಮರಾಜಪೇಟೆ, ಪ್ರಶಾಂತ್‍ನಗರ ಮನೆಗಳ ಮೇಲೂ  ದಾಳಿ ಮಾಡಿದ್ದು , ಹಣ, ಒಡವೆ ಹಾಗೂ ಹಲವು ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರದ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕುಮಾರಗೌಡ ಅವರ ನಿವಾಸ ಹಾಗೂ ಆತನ ಅಪ್ತ ಸ್ನೇಹಿತ ಮನೆ ಮೇಲೂ ಇಂದು ಮುಂಜಾನೆ 5.30ರಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸಿಬಿ ಡಿವೈ.ಎಸ್.ಪಿ ಮೋಹನ್ ನೇತೃತ್ವದ 10 ಮಂದಿ ಸಿಬ್ಬಂದಿಯೊಂದಿಗೆ ಮುಳಬಾಗಿಲಿನ ಮುತ್ಯಾಲಪೇಟೆಯಲ್ಲಿ ನಿವಾಸ ಹಾಗೂ ಆತನ ಸಾಯಿ ನಿಹಾರಿಕಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು, ಕುಮಾರ್‍ ಗೌಡ ಆಪ್ತ ಸ್ನೇಹಿತನ ಮನೆಯನ್ನು ರೇಡ್ ಮಾಡಲಾಗಿದೆ.

ಎಸಿಬಿ ಡಿವೈ.ಎಸ್.ಪಿ ಪ್ರಕಾಶ್ ಗೌಡ ಪಾಟೀಲ್ ನೇತೃತ್ವದ ತಂಡ ಬೆಂಗಳೂರಿನ ಕೇಂದ್ರ ವಲಯದ ಸಾರಿಗೆ ಉಪ ಆಯುಕ್ತ ಕೆ.ಟಿ.ಹಾಲಸ್ವಾಮಿ ಅವರ ಗೃಹ, ತೋಟ ಕಚೇರಿಗಳು, ದಾವಣಗೆರೆಗೆ ಚನ್ನಗಿರಿ ತಾಲ್ಲೂಕಿನ ಗಾಣದಕಟ್ಟೆಯಲ್ಲಿರುವ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದ್ದಾರೆ.

ಬೀದರ್‍ ನಲ್ಲಿ ಕಲಬುರಗಿ ಜೆಸ್ಕಾಂ ಎಇಇ ಮಾನಕೆರೆ ಮಾಧವರಾವ್ ಅವರ ಕೆಇಬಿ ರಸ್ತೆಯಲ್ಲಿರುವ ಮನೆ ಮೇಲೆ ಎಸಿಬಿ ಅನಿತಾ ಹದ್ದಣ್ಣ ನೇತೃತ್ವದಲ್ಲಿ ದಾಳಿ ನಡೆದಿದೆ.

ಹಾವೇರಿ ಜಿಲ್ಲಾ ಸಿಂಗ್ಗಾವಿ ತಾಲ್ಲೂಕಿನ ಬಸವೇಶ್ವರ ನಗರದಲ್ಲಿರುವ ಆರ್‍ ಐ ವಿಜಯಕುಮಾರ್ ಅವರ ನಿವಾಸಗಳ ಮೇಲೆ ದಾಳಿ ಮಾಡಿದ್ದು ಹಲವಾರು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಎಸಿಬಿಗೆ ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ