ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎನ್ ಭಗವತಿ ನಿಧನ !

Kannada News

16-06-2017

ನವದೆಹಲಿ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಏಷ್ಟು ಪರಿಣಾಮಕಾರಿಯಾಗಿದೆ ಎಂದು ಎಲ್ಲರಿಗೂ ತಿಳಿದೇ ಇದೆ. ದೇಶದ ಯಾವುದೇ ಪ್ರದೇಶದಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು, ಮತ್ತು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಪ್ರಮುಖವಾದ ಅಸ್ತ್ರವಾಗಿರುವುದೇ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಆದರೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎನ್ ಭಗವತಿ ನಿಧನರಾಗಿದ್ದಾರೆ. ಸುಧೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ಪಿ.ಎನ್ ಭಗವತಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಪತ್ನಿ ಪ್ರಭಾವತಿ ಭಗವತಿ ಮತ್ತು ತಮ್ಮ ಮಕ್ಕಳನ್ನು ಅಗಲಿದ್ದು, ನಾಳೆ ಭಗವತಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಭಗವತಿ ಅವರು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ 1986ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವ್ಯವಸ್ಥೆಯನ್ನು ಪರಿಚಯಿಸಿದ್ದರು. 1921ರಲ್ಲಿ ಗುಜರಾತಿನಲ್ಲಿ ಜನಿಸಿದ ಅವರು 1973ರಲ್ಲೇ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡು, 1985ರ ಜುಲೈ 12ರಿಂದ 1986ರ ಡಿಸೆಂಬರ್ 20ರವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿದ್ದ ವೇಳೆ ಸಾಮಾನ್ಯ ನಾಗರಿಕರು ಕೂಡಾ ತಾನು ನೇರವಾಗಿ ಸಂಬಂಧ ಹೊಂದಿಲ್ಲದ ವಿಷಯವನ್ನು ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೆಸರಲ್ಲಿ ಸಲ್ಲಿಸಿ ನ್ಯಾಯ ಪಡೆಯುವ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ