ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನಗೆ ಸರ್ಕಾರ ಸಿದ್ಧತೆ !

Kannada News

15-06-2017

ಬೆಂಗಳೂರು: ರಾಜ್ಯಾದ್ಯಂತ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯನ್ನು ಜಾರಿಗೆ ತರುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಕೆ.ಗೋಪಾಲಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವ್ಯವಸ್ಥೆಯಲ್ಲಿರುವ ಬಲಿಷ್ಟರ ಬಗ್ಗೆ ನಾವು ಚಿಂತಿಸಬೇಕಿಲ್ಲ. ಆದರೆ ಅಸಂಖ್ಯಾತ ಬಡವರಿದ್ದಾರಲ್ಲ? ಅವರ ಕಡೆ ನೋಡಬೇಕು. ರಿಕ್ಷಾ ಓಡಿಸುವವರು, ಹಮಾಲಿ ಮಾಡುವವರು, ಬೀದಿ ಬದಿ ಅನಾಥರಾಗಿರುವವರು, ಅಸಂಘಟಿತ ಕಾರ್ಮಿಕರು ಸೇರಿದಂತೆ  ಸಾಕಷ್ಟು ಮಂದಿ ಇದ್ದಾರೆ. ಯಶಸ್ವಿನಿಯಂತಹ ಯೋಜನೆಗಳು ಇವರಿಗೆ ನೆರವಿಗೆ ಬರುವುದಿಲ್ಲ. ಸಹಕಾರ ಸಂಘಗಳಲ್ಲಿ ಸದಸ್ಯರಾದವರಿಗೆ ಎರಡು ಲಕ್ಷ ರೂ ವ್ಯಾಪ್ತಿಗೊಳಪಟ್ಟು ಸೇವೆ ನೀಡಲಾಗುತ್ತದೆ. ಆದರೆ ಇವರೆಲ್ಲ ಸಹಕಾರ ಸಂಘಗಳ ಸದಸ್ಯರಾಗುವುದು ಯಾವಾಗ? ಹೀಗಾಗಿ ಯಶಸ್ವಿನಿ ಯೋಜನೆಯ ಬಗ್ಗೆ ಪ್ರಚಾರಕ್ಕಿಂತ ಅಪಪ್ರಚಾರವೇ ಹೆಚ್ಚಿದೆ. ಇದನ್ನು ನಿವಾರಿಸಲು ನಾವು ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದರು. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ವಿಧೇಯಕವನ್ನು ನಾವು ವಿಧಾನಸಭೆಯಲ್ಲಿ ಮಂಡಿಸಿದ್ದೇವೆ. ಅದಕ್ಕೆ ಪೂರಕವಾಗಿಯೇ ಈ ಯೋಜನೆಯನ್ನೂ ಜಾರಿಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನುಡಿದರು. ರಾಜ್ಯದಲ್ಲಿರುವ ಎಲ್ಲರ ಆರೋಗ್ಯವನ್ನು ಸರ್ಕಾರ ಕಾಪಾಡಬೇಕು. ಹಾಗೆ ಕಾಪಾಡಲು ಸಾಧ್ಯವಾ? ಎಂದು ನೀವು ಕೇಳಿದರೆ ಧೈರ್ಯದಿಂದ ಉತ್ತರಿಸುವ ಸ್ಥಿತಿಯಲ್ಲಿ ನಾನಿಲ್ಲ ಎಂದು ವಿವರಿಸಿದರು. ಆದರೂ ಯೂನಿವರ್ಸಲ್ ಹೆಲ್ತ್ ಕವರೇಜ್ ಕಾರ್ಯಕ್ರಮದ ಮೂಲಕ ಬಡವರಿಗೆ ದೊಡ್ಡ ಮಟ್ಟದಲ್ಲಿ ಆರೋಗ್ಯ ಸೇವೆಯ ಅನುಕೂಲ ದಕ್ಕುವಂತೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ತಿಳಿಸಿದರು. ರಾಜ್ಯದಲ್ಲಿ ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಬೇರೆ ಮಾತು. ಅದೇ ರೀತಿ ಅವರ ಹೊಡೆತವನ್ನು ತಡೆದುಕೊಳ್ಳಲು ಕ್ರಮ ಕೈಗೊಳ್ಳುವುದೂ ಬೇರೆ ಮಾತು. ಆ ದಿಸೆಯಲ್ಲಿ ನಾವು ಕಾಯ್ದೆಗೆ ತಿದ್ದುಪಡಿ ತಂದು ವಿಧೇಯಕ ಮಂಡಿಸಿದ್ದೇವೆ. ಆದರೆ ಕಡು ಬಡತನದಲ್ಲಿರುವ ಸಮೂಹವನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಾವು ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯನ್ನು ಜಾರಿಗೊಳಿಸುವ ಕುರಿತು ನಿರ್ದಿಷ್ಟ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ