ಐಟಿ ವಲಯದಲ್ಲಿ ಅಲ್ಲೋಲ ಕಲ್ಲೋಲ...

Kannada News

15-06-2017 828

ಕೆಲವೇ ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಥವ ಐಟಿ ಕ್ಷೇತ್ರದ ಉದ್ಯೋಗಿಗಳು, ಯಾವುದೇ ರಾಜ್ಯ ಅಥವ ಸಂಸ್ಥಾನ ಇಲ್ಲದಿದ್ದರೂ ಒಂದು ರೀತಿಯಲ್ಲಿ ರಾಜರನ್ನು ನೆನಪಿಸುವ ಠೀವಿಯಲ್ಲಿ ಮೆರೆಯುತ್ತಿದ್ದರು. ದೊಡ್ಡ ದೊಡ್ಡ ಮೊತ್ತದ ವೇತನ ಪಡೆಯುತ್ತಿದ್ದ ಐಟಿ ಕ್ಷೇತ್ರದ ಉದ್ಯೋಗಿಗಳು, ಇತರೆ ವಲಯದ ಉದ್ಯೋಗಿಗಳಲ್ಲಿ ಆಶ್ಚರ್ಯದ ಜೊತೆಗೆ ಅಸೂಯೆಯನ್ನೂ ಹುಟ್ಟಿಸುತ್ತಿದ್ದರು. ಐಎಎಸ್ , ಐಪಿಎಸ್ ಅಧಿಕಾರಿಗಳೂ ಕೂಡ, ಐಟಿ ವಲಯದ ಉದ್ಯೋಗಿಗಳ ಸಂಬಳಕ್ಕೆ, ತಮ್ಮ ಸಂಬಳವನ್ನು ಹೋಲಿಕೆ ಮಾಡಿ ಬೇಸರಪಟ್ಟುಕೊಳ್ಳುವ ಹಾಗಿತ್ತು ಐಟಿ ಕ್ಷೇತ್ರ.

ಆದರೆ, ‘ಮೇಲಕ್ಕೇರಿದ್ದು ಇಳಿಯಲೇ ಬೇಕು’ ಎಂಬ ಮಾತಿನಂತೆಯೋ ಏನೋ ಕಳೆದ ಎರಡು ಮೂರು ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಐಟಿ ವಲಯದ ದೊಡ್ಡ ಕಂಪನಿಗಳು, ಪ್ರತಿ ತಿಂಗಳೂ ಸಾವಿರಗಟ್ಟಲೆ ಉದ್ಯೋಗಗಳನ್ನು ಕಡಿತಗೊಳಿಸುತ್ತಿವೆ. ದೊಡ್ಡ ಸಂಬಳ ಪಡೆಯುತ್ತಿದ್ದ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತಿದೆ. ಈ ರೀತಿಯ ಕ್ರಮಗಳು, ದೇಶದ ಐಟಿ ವಲಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತಿವೆ. ಉದ್ಯೋಗಿಗಳನ್ನು ದಿಢೀರ್ ಎಂದು ಮನೆಗೆ ಕಳಿಸುವ ಕಂಪನಿಗಳ ಕ್ರಮದ ವಿರುದ್ಧ ಅಲ್ಲಲ್ಲಿ ಧ್ವನಿಗಳೂ ಏಳುತ್ತಿವೆ.

ಈವರೆಗೆ, ತಮ್ಮದೇ ಆದ ಲೋಕದಲ್ಲಿದ್ದ ಐಟಿ ಉದ್ಯೋಗಿಗಳು, ಇದೀಗ ನಾವೂ ಕೂಡ ಭೂಲೋಕವಾಸಿಗಳೇ, ಇತರೆ ಎಲ್ಲ ಕಾರ್ಮಿಕ ವರ್ಗಕ್ಕೆ ಸೇರಿದ ಜನಗಳೇ ಎಂದು ಘೋಷಿಸಿಕೊಳ್ಳುವ ಮಟ್ಟಿಗೆ ಬದಲಾಗುತ್ತಿದ್ದಾರೆ. ಸಮಾಜದಲ್ಲಿ ಸಮಾನತೆ ಮೂಡಿಸುವ ದೃಷ್ಟಿಯಿಂದ ಇದು ಒಂದು ಉತ್ತಮ ಬೆಳವಣಿಗೆಯೇ ಸರಿ. ಆದರೆ, ಭಾರಿ ಬುದ್ಧಿವಂತರಾಗಿರುವ ಟೆಕಿಗಳಿಗೆ, ಇಂಥದ್ದೊಂದು ಸತ್ಯ ಅರ್ಥಮಾಡಿಕೊಳ್ಳಲು, ಇಷ್ಟು ದಿನ ಮತ್ತು ಇಂಥ ಪರಿಸ್ಥಿತಿ ಬರಬೇಕಾಗಿದ್ದು ಮಾತ್ರ ವಿಪರ್ಯಾಸ. ಈವರೆಗೆ ತಮ್ಮದೇ ಆದ ಗುಂಗಿನಲ್ಲಿದ್ದ ಐಟಿ ಉದ್ಯೋಗಿಗಳಿಗೆ, ಇತ್ತೀಚಿನ ಬೆಳವಣಿಗೆಗಳು ಬಲವಾದ ಪೆಟ್ಟನ್ನೇ ನೀಡಿವೆ. ಹೀಗಾಗಿ, ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹಿಂದೆಂದೂ ಬಲವಾಗಿ ಕೇಳಿಬರದಿದ್ದ ಕಾರ್ಮಿಕ ಕಾನೂನುಗಳು ಮತ್ತು ಉದ್ಯೋಗಿಗಳ ಸಂಘಟನೆ ಕಟ್ಟುವ ಮಾತುಗಳು ಇದೀಗ ಹೆಚ್ಚಾಗಿ ಕೇಳಿಬರುತ್ತಿವೆ. ಭಾರತದ ಕಾರ್ಮಿಕ ರಂಗದಲ್ಲಿ ಬಲ ಮತ್ತು ಎಡಪಂಥೀಯರ ಬೆಂಬಲ ಹೊಂದಿರುವ ಸಾಕಷ್ಟು ಸಂಘಟನೆಗಳಿವೆ. ಆದರೆ, ಐಟಿ ಕ್ಷೇತ್ರದಲ್ಲಿ ಕಾರ್ಮಿಕ ಸಂಘಟನೆ ಕಟ್ಟುವ ಗಂಭೀರ ಪ್ರಯತ್ನಗಳು ಈವರೆಗೆ ನಡೆದಿರಲಿಲ್ಲ.

ಐಟಿ ಉದ್ಯೋಗಿಗಳನ್ನು ರಾತ್ರೋರಾತ್ರಿ ಮನೆಗೆ ಕಳಿಸುವ ಸಾಫ್ಟ್‌ವೇರ್ ಕಂಪನಿಗಳ ವರ್ತನೆಯೇ, ಈ ಕ್ಷೇತ್ರದ ಉದ್ಯೋಗಿಗಳು ಸಂಘಟಿತರಾಗಿ ಹೋರಾಡುವ ಅನಿವಾರ್ಯತೆ ತಂದೊಡ್ಡಿದೆ. ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಗಳ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. F I T E ಅಂದರೆ, ‘ಫೋರಂ ಫಾರ್‌ ಐಟಿ ಎಂಪ್ಲಾಯೀಸ್’’ ಎಂಬ ಹೆಸರಿನ ಸಂಘಟನೆ, ತಮಿಳುನಾಡಿನ ಚೆನ್ನೈನಲ್ಲಿ ಆರಂಭವಾಗಿದೆ. ಒಂದಷ್ಟು ಟೆಕಿಗಳು ಈ ಸಂಸ್ಥೆಯ ಸದಸ್ಯರೂ ಆಗಿದ್ದಾರೆ. ಕಾರ್ಮಿಕ ಕಾನೂನುಗಳ ಬಗ್ಗೆ ಐಟಿ ಉದ್ಯೋಗಿಗಳಲ್ಲಿ ಅರಿವು ಮೂಡಿಸುವುದು, ಉದ್ಯೋಗ ಕಳೆದುಕೊಂಡವರ ನೆರವಿಗೆ ಬರುವುದು, ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರ ರಕ್ಷಣೆ ಇತ್ಯಾದಿ ವಿಚಾರಗಳಿಗೆ ನಾವು ಆದ್ಯತೆ ನೀಡುತ್ತೇವೆ ಎಂದು ಈ ಸಂಘಟನೆ ಹೇಳಿಕೊಂಡಿದೆ.

ಆದರೆ, ತಮಿಳುನಾಡಿನಲ್ಲಿ ಸುಮಾರು ಐದು 5 ಲಕ್ಷ ಜನ ಐಟಿ ಉದ್ಯೋಗಿಗಳಿದ್ದರೂ ಈ ಸಂಘಟನೆ ಸೇರಲು ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ, ಈ ರೀತಿ ಸಂಘಟನೆಗಳ ಸದಸ್ಯರಾಗುವವರನ್ನು ‘ತೊಂದರೆ ನೀಡುವಂಥವರು' ಎಂದು ಅವರಿಗೆ ಉದ್ಯೋಗ ನೀಡಿರುವ ಕಂಪನಿಗಳು ಪರಿಗಣಿಸುತ್ತವಂತೆ. ಹೀಗಾಗಿ, ತಮಗೆ ಕೆಲಸ ನೀಡಿರುವ ಕಂಪನಿಯ ಕೆಂಗಣ್ಣಿಗೆ ಗುರಿಯಾಗುವುದರ ಬದಲು, ಈ ರೀತಿಯ ಸಂಘಟನೆಗಳಿಂದ ದೂರ ಇರುವುದೇ ಒಳ್ಳೆಯದು ಎಂದು ಅವರೆಲ್ಲ ಹೆದರುತ್ತಿದ್ದಾರಂತೆ.  ಕಳೆದ ವರ್ಷ, ತಮಿಳುನಾಡು ಸರ್ಕಾರ, ಐಟಿ ಉದ್ಯೋಗಿಗಳ ಸಂಘದ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಸೇವಾ ಉದ್ಯಮಗಳು, ಕೈಗಾರಿಕಾ ವ್ಯಾಜ್ಯ ಕಾಯ್ದೆ 1947ರ ಅಡಿಯಲ್ಲಿ ಬರುತ್ತವೆ ಎಂದು ಸ್ಪಷ್ಟೀಕರಣವನ್ನೂ ನೀಡಿತ್ತು. ಐಟಿ ವಲಯದ ಕಾರ್ಮಿಕರು ಸಂಘಟಿತರಾಗಬೇಕು ಎಂಬ ಕೂಗು ಕೇಳಿ ಬಂದಾಗಲೆಲ್ಲಾ, ಇದಕ್ಕೆ ಅವಕಾಶ ಕೊಟ್ಟರೆ, ಐಟಿ ಕ್ಷೇತ್ರ ಸ್ಪರ್ಧಾತ್ಮಕತೆ ಕಳೆದುಕೊಳ್ಳುತ್ತದೆ, ಉದ್ಯೋಗದ ಪ್ರಮಾಣ ಕುಸಿಯುತ್ತದೆ ಎಂಬೆಲ್ಲಾ ಮಾತುಗಳೂ ಕೇಳಿಬರುತ್ತವೆ. ಇನ್‌ಫೋಸಿಸ್, ವಿಪ್ರೋ, ಟಿಸಿಎಸ್ ಇತ್ಯಾದಿ ನೂರಾರು ಸಾಫ್ಟ್‌ವೇರ್ ಕಂಪನಿಗಳನ್ನು ಹೊಂದಿರುವ ಕರ್ನಾಟದಲ್ಲಿ ಈಗಲೂ ಐಟಿ ಉದ್ಯೋಗಿಗಳ ಸಂಘ ಇಲ್ಲ ಮತ್ತು ಆ ರೀತಿಯ ಸಂಘ ಸ್ಥಾಪನೆಗೆ ಅನುಮತಿಯೂ ಇಲ್ಲ ಎನ್ನಲಾಗಿದೆ.

ನಾಸ್ಕಾಂ ಅಂದರೆ, ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಒಕ್ಕೂಟ ಹೇಳುವಂತೆ, ಐಟಿ ವಲಯಕ್ಕೆ ಕಾರ್ಮಿಕ ಸಂಘಟನೆಗಳೇ ಅಪ್ರಸ್ತುತವಂತೆ. ಐಟಿ ಉದ್ಯಮದಲ್ಲಿ ಉದ್ಯೋಗಿಗಳು ಮತ್ತು ಕಂಪನಿಗಳು ಇಬ್ಬರಿಗೂ ಲಾಭದಾಯಕವಾಗುವ ಒಪ್ಪಂದ ಆಗಿರುತ್ತದೆ, ಇದರಿಂದ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಮತ್ತು ಸೌಲಭ್ಯಗಳು ದೊರೆಯುತ್ತವೆ.

ಬಹುತೇಕ ಸಾಫ್ಟ್‌ವೇರ್ ಕಂಪನಿಗಳ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೆಲಸದ ವಾತಾವರಣ ಇರುತ್ತದೆ. ಈ ಕಂಪನಿಗಳಲ್ಲಿ, ಮುಕ್ತ ಸಭೆಗಳನ್ನು ನಡೆಸುವ ಮೂಲಕ ಸಮಸ್ಯೆ ಮತ್ತು ದೂರುಗಳ ಪರಿಹಾರಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಇಲ್ಲಿ ಎಲ್ಲರಿಗೂ ಪ್ರತಿಭೆ ಆಧಾರಿತ ಬಡ್ತಿ ಅವಕಾಶ ಇರುತ್ತದೆ. ಹೀಗಾಗಿ, ಇಲ್ಲಿ ಕಾರ್ಮಿಕ ಕಾನೂನುಗಳು ಮೂಗು ತೂರಿಸುವುದರಿಂದ ಇಡೀ ಐಟಿ ಕ್ಷೇತ್ರವೇ ಸೊರಗುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ. ಕಾರ್ಮಿಕ ಕಾನೂನುಗಳ ಮೂಲಕ ಐಟಿ ಕಂಪನಿಗಳಿಗೆ ನಿರ್ಬಂಧ ಹೇರಿದರೆ, ಅದು ಬಂಡವಾಳ ಹೂಡಿಕೆ ಮೇಲೂ ಪ್ರಭಾವ ಬೀರುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ನಮಗೆ ಕಾರ್ಮಿಕ ಕಾನೂನುಗಳೇ ಅಪ್ರಸ್ತುತ ಎಂದು ಹೇಳುವ ಬಹುತೇಕ ಸಾಫ್ಟ್‌ವೇರ್ ಕಂಪನಿಗಳು, ಇವೆಲ್ಲ ಕಡಿಮೆ ಸಂಬಳದ ವೃತ್ತಿಗಳಿಗೆ ಮಾತ್ರ ಸೂಕ್ತ ಎಂಬ ಅಭಿಪ್ರಾಯ ಹೊಂದಿರುವಂತಿದೆ. ಹೀಗಾಗಿ, ಐಟಿ ವಲಯದಲ್ಲಿ ಕಾರ್ಮಿಕ ಕಾನೂನುಗಳು ಮತ್ತು  ಸಂಘಟನೆಗಳ ಬಗ್ಗೆ ಒಂದು ರೀತಿಯ ತಾತ್ಸಾರದ ಮನೋಭಾವ ಇರುವುದಂತೂ ನಿಜ.

ಭಾರತದ ಐಟಿ ಕ್ಷೇತ್ರ, ಅಮೆರಿಕದ ಮಾದರಿಯಲ್ಲಿ ರೂಪಿತಗೊಂಡಿದೆ.

ಉದ್ಯೋಗ ಮೀಸಲಾತಿ ಸೇರಿದಂತೆ, ಯಾವುದೇ ರೀತಿ ಕಾರ್ಮಿಕ ಕಾನೂನುಗಳು ಅನ್ವಯಿಸದೇ ಇರುವುದರಿಂದಲೇ ಭಾರತದಲ್ಲಿ ಐಟಿ ಉದ್ಯಮ ಈ ಮಟ್ಟಿಗೆ ಬೆಳೆಯಲು ಕಾರಣವಾಗಿದೆ ಎಂಬ ಮಾತೂ ಇದೆ. ಶತಮಾನದಷ್ಟು ಹಳೆಯದಾಗಿರುವ ಕಾರ್ಮಿಕ ಕಾನೂನುಗಳು 21ನೇ ಶತಮಾನದ ಡಿಜಿಟಲ್ ಯುಗಕ್ಕೆ ಸೂಕ್ತವಾಗಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತದೆ.ಆದರೆ, ಸಂಘಟನೆಗಳನ್ನು ಸ್ಥಾಪಿಸಿಕೊಂಡು ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡಲು ಹೋರಾಡುತ್ತಿರುವವರು, ಇಂಥ ಮಾತುಗಳನ್ನು ವಿರೋಧಿಸುತ್ತಾರೆ. ಐಟಿ ಕಂಪನಿಗಳು ತಮಗೆ ಬೇಕಾದಾಗ ಉದ್ಯೋಗಿಗಳನ್ನು ನೇಮಿಸಿಕೊಂಡು, ಬೇಡವಾದಾಗ, ಇವರ ಸಾಧನೆ ಕಳಪೆ ಎಂಬ ನೆಪ ಹೇಳಿ ಕಿತ್ತೆಸೆಯುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಐಟಿ ಉದ್ಯೋಗಿಗಗಳನ್ನು ಹಗಲು ರಾತ್ರಿಯೆನ್ನದೆ ದುಡಿಸಿಕೊಳ್ಳಲಾಗುತ್ತದೆ, ಪದೇ ಪದೇ ಗಡುವು ನೀಡುವ ಮೂಲಕ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ತಮ್ಮನ್ನು ತಾವು ಕಾಪಾಡಿಕೊಳ್ಳುವ ಸಲುವಾಗಿ ಸಂಘಟಿತರಾಗುವುದನ್ನೂ ತಪ್ಪಿಸಲಾಗುತ್ತದೆ ಎಂದೆಲ್ಲಾ ಆರೋಪಿಸುತ್ತಾರೆ. ಎರಡೂ ಕಡೆಯ ವಾದ ಹೀಗೆಲ್ಲಾ ಇರುವ ಈ ಪರಿಸ್ಥಿತಿಯಲ್ಲಿ, ಐಟಿ ಕ್ಷೇತ್ರಕ್ಕೂ ಕಾರ್ಮಿಕ ಕಾನೂನು ಅನ್ವಯಿಸಬೇಕೆ, ಬೇಡವೇ ಎಂಬ ಬಗ್ಗೆ ದೇಶದಲ್ಲಿ ಇನ್ನೂ ಗೊಂದಲವಿದೆ.

ಇದೆಲ್ಲದರ ಜೊತೆಗೆ ಹತ್ತುಹದಿನೈದು ವರ್ಷಗಳ ಹಿಂದೆ ಎಂಜಿನಿಯರಿ0ಗ್ ಡಿಗ್ರಿ ಪಡೆದು ಕೆಲಸಕ್ಕೆ ಸೇರಿದ ಐಟಿ ಉದ್ಯೋಗಿಗಳು, ಇತ್ತೀಚಿನ ದಿನಗಳಲ್ಲಿ ಬಳಕೆಯಲ್ಲಿರುವ ಹೊಸ ಕೌಶಲ್ಯಗಳನ್ನು ಕಲಿತುಕೊಂಡಿಲ್ಲ. ಈ ಟೆಕಿಗಳ ಭಾಷಾ ಜ್ಞಾನವೂ ಉತ್ತಮವಾಗಿಲ್ಲ, ಅವರಲ್ಲಿ ಬಹುತೇಕರಿಗೆ ಉತ್ತಮ ಸಾಮಾಜಿಕ ನಡವಳಿಕೆಗಳ ಬಗ್ಗೆಯೂ ಗೊತ್ತಿಲ್ಲ ಎಂಬ ಅಂಶಗಳೂ ಇವೆ. ಈ ಎಲ್ಲಾ ಕಾರಣಗಳೂ ಕೂಡ ಐಟಿ ಕಂಪನಿಗಳು ಉದ್ಯೋಗಿಗಳನ್ನು ಸೇವೆಯಿಂದ ತೆಗೆದು ಹಾಕಲು ಕಾರಣವಾಗಿವೆ ಎಂಬ ಮಾತುಗಳಿವೆ. ಒಟ್ಟಿನಲ್ಲಿ, ಈವರೆಗೆ ತಮ್ಮದೇ ಆದ ಲೋಕದಲ್ಲಿದ್ದ ಐಟಿ ಉದ್ಯೋಗಿಗಳು ಇದೀಗ ಇತರೆ ಎಲ್ಲರಂತೆ ತಾವೂ ಕೂಡ ಕಾರ್ಮಿಕರೇ ಅನ್ನುವ ಸತ್ಯವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ, ಈವರೆಗೆ ಸದ್ದುಗದ್ದಲವಿಲ್ಲದಂತೆ ಕೆಲಸ ಮಾಡುತ್ತಿದ್ದ ಐಟಿ ವಲಯದ ನೌಕರರೂ ಕೂಡ, ಇನ್ನು ಮುಂದೆ ಮುಷ್ಕರ, ಸತ್ಯಾಗ್ರಹ ಇತ್ಯಾದಿಗಳನ್ನು ನಡೆಸುತ್ತಾರೆಯೇ? ಇದರಿಂದ ಐಟಿ ಕ್ಷೇತ್ರದ ಮೇಲಾಗುವ ಪರಿಣಾಮಗಳೇನು? ಇದನ್ನು ನಿಭಾಯಿಸಲು ಐಟಿ ಕಂಪನಿಗಳು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತವೆ? ಇಲ್ಲಿ ಸರ್ಕಾರದ ಪಾತ್ರವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರೆಯುವ ದಿನಗಳು ದೂರವೇನೂ ಇಲ್ಲ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ