ವಾಹನ ಸವಾರರನ್ನು ಆಕರ್ಷಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ !

Kannada News

15-06-2017

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯಲ್ಲಿ ಯುವತಿಯನ್ನು ನಿಲ್ಲಿಸಿ ವಾಹನ ಸವಾರರನ್ನು ಆಕರ್ಷಿಸಿ, ಅವರನ್ನು ನಿರ್ಜನ ಪ್ರದೇಶಕ್ಕೆ ಕರೆತಂದು ಸುಲಿಗೆ ಮಾಡುತ್ತಿದ್ದ ಗ್ಯಾಂಗ್‍ನ್ನು ಆಗ್ನೇಯ ವಿಭಾಗದ ಪೊಲೀಸರು ಬಲಗೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಗ್ಯಾಂಗ್‍ ನಲ್ಲಿ ವಾಹನ ಸವಾರರನ್ನು ಆಕರ್ಷಿಸುತ್ತಿದ್ದ ಬೇಗೂರಿನ ಮೋನಿಷ (20) ಸೇರಿ ಗ್ಯಾಂಗ್‍ ನ 12 ಮಂದಿಯನ್ನು ಬಂಧಿಸಿ 15 ಲಕ್ಷ ಮೌಲ್ಯದ 450 ಗ್ರಾಂ ಚಿನ್ನಾಭರಣಗಳು, ಮೊಬೈಲ್, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಗ್ಯಾಂಗ್ ನಡೆಸಿದ್ದ 25ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಬೇಗೂರಿನ ಸಾವನ್ ಅಲಿಯಾಸ್ ಬಬ್ಲು (24), ಮುತ್ತು (20), ಪುನೀತ್ ಅಲಿಯಾಸ್ ಕಾಡಿ (19), ತುಳಸಿರಾಂ (23), ಅರುಣ್ ಏಸುರಾಜ್ (22), ಸ್ಟೀಫನ್ ರಾಜ್ ಅಲಿಯಾಸಿ ಮೂಕಡಿ (22), ವಿಘ್ನೇಶ್ ಅಲಿಯಾಸ್ ಡೀಲ (18), ದೊಡ್ಡಬಳ್ಳಾಪುರದ ಅಮರ್ (25), ಬನ್ನೇರುಘಟ್ಟದ ಶಾಂತಕುಮಾರ್ (21), ಆರ್.ಟಿ ನಗರದ ದೀಪಕ್ ಜಾರ್ಜ್ (21), ತಮಿಳುನಾಡಿನ ಕೇಶವಮೂರ್ತಿ (25)ಯನ್ನು ಬಂಧಿಸಲಾಗಿದ್ದು ಮೋನಿಷಾಳನ್ನು ಬಳಸಿ ಆರೋಪಿಗಳು ಸುಲಿಗೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಮುಖ ಆರೋಪಿ ಸಾವನ್ ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯಲ್ಲಿ ಮೊನಿಷಾಳನ್ನು ನಿಲ್ಲಿಸಿ ವಾಹನ ಸವಾರರನ್ನು ಸೆಳೆದು ಅವರಿಗೆ ಅನುಮಾನ ಬರದಂತೆ ರಸ್ತೆಯ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬರಲಾಗುತ್ತಿತ್ತು. ಅಲ್ಲಿ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿರುತ್ತಿದ್ದ ಆರೋಪಿಗಳು ಅವರ ಬಳಿ ಇದ್ದ ಹಣ, ಚಿನ್ನಾಭರಣ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು. ಸಾವನ್ ವಿಚಾರಣೆಯಲ್ಲಿ ತನ್ನ ಸಹಚರರ ಜೊತೆ ಸೇರಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ 13, ಹೆಬ್ಬಗೋಡಿಯ 6, ಆನೆಕಲ್, ಹುಳಿಮಾವುವಿನ ತಲಾ 2 ಸೇರಿ 25ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಸುಲಿಗೆ ಪ್ರಕರಣದಲ್ಲಿ ಸಾರ್ವಜನಿಕರ ಸಹಾಯದಿಂದ ಬನ್ನೇರುಘಟ್ಟ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಈತ ಶೌಚಾಲಯದಲ್ಲಿದ್ದ ಫೆನಾಲ್ ಕುಡಿದು ವಿಚಾರಣೆಗೆ ಸಹಕರಿಸದೆ ನುಸುಳಿಕೊಂಡಿದ್ದನು. ಪಿ.ಯು.ಸಿ.ಯಲ್ಲಿ ಶೇ. 80ರಷ್ಟು ಅಂಕ ಪಡೆದು ಪದವಿ ವ್ಯಾಸಂಗ ಮಾಡುತ್ತಿದ್ದ ಸಾವನ್, ರೌಡಿ ಚಪ್ಪರ್ ರಾಜನ ಸಹವಾಸಕ್ಕೆ ಬಿದ್ದು ಗಾಂಜ, ಮದ್ಯಪಾನದಂತಹ ಇನ್ನಿತರ ಚಟಗಳಿಗೆ ಬಲಿಯಾಗಿ ವಿದ್ಯಾಭ್ಯಾಸವನ್ನು ಬಿಟ್ಟು ರೌಡಿಗಳಾದ ಸಂತೋಷ್, ಅಸ್ಗರ್, ಆನಂದ, ಸುನೀಲ್ ಎಂಬುವರ ಜತೆಗೆ ಸೇರಿ 2011ರಿಂದಲೂ ಸುಲಿಗೆ, ಢಕಾಯಿತಿ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ಬಾರಿ ಬಂಧಿತನಾಗಿ ಜೈಲು ಸೇರಿ ಬಿಡುಗಡೆಯಾಗಿ ಬಂದ ನಂತರವೂ ಮತ್ತದೇ ಕೃತ್ಯಗಳನ್ನು ನಡೆಸುತ್ತಿದ್ದ. ಆರೋಪಿ ಸಾವನ್ ಶಾಂತ, ಕೇಶವಮೂರ್ತಿ ಜೊತೆ ಸೇರಿ ತಮಿಳುನಾಡಿನ ತಳಿಯಲ್ಲಿ ಕೊಲೆಯೊಂದನ್ನು ನಡೆಸಿದ್ದನು. ಬಂಧಿತ ಎಲ್ಲ 12 ಮಂದಿ ಆರೋಪಿಗಳು ಗಾಂಜಾ ವ್ಯಸನಿಗಳಾಗಿದ್ದು, ಮನೆಯಲ್ಲಿ ಮಲಗದೆ ನೀಲಗಿರಿ ತೋಪು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಲಗುತ್ತಿದ್ದು, ಸುಲಿಗೆ ಮಾಡುತ್ತಿದ್ದ ಚಿನ್ನಾಭರಣ, ಮೊಬೈಲ್‍ಗಳನ್ನು ದಾರಿ ಹೋಕರಿಗೆ ಮಾರಾಟ ಮಾಡಿ ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಬಳಸಿಕೊಳ್ಳುತ್ತಿದ್ದರು. ಇದಲ್ಲದೆ ಸುಲಿಗೆಗೆ ಬಳಸಲು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದು, ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಗಾಂಜಾ ನಷೆಯಲ್ಲಿ ಎಲ್ಲೆಂದರಲ್ಲಿ ಬಿಟ್ಟು ಹೋಗಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿ ಗ್ಯಾಂಗ್‍ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ