ಗೋಹತ್ಯೆ ನಿಷೇಧ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ನೊಟೀಸ್ !

Kannada News

15-06-2017

ನವದೆಹಲಿ: ಮಾಂಸಕ್ಕಾಗಿ ಹಸುಗಳನ್ನು ಹತ್ಯೆ ಮಾಡಲು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಲಿ, ಖರೀದಿಸುವುದಾಗಲಿ ಮಾಡಬಾರದು ಎಂದು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಪಟ್ಟಂತೆ ವಿವರ ಕೋರಿ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರ ಎರಡು ವಾರದೊಳಗೆ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ. ಹೈದರಾಬಾದ್ ಮೂಲದ ಸರ್ಕಾರೇತರ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿತ್ತು. ಮಾಂಸಕ್ಕಾಗಿ ದನ ಕರುಗಳನ್ನು ಮಾರಾಟ ಮಾಡುವುದು ಮತ್ತು ಖರೀದಿಸುವುದಕ್ಕೆ ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಿಂದ ಮುಕ್ತ ವ್ಯಾಪಾರ ಹಕ್ಕನ್ನು ಜನರಿಂದ ಕಸಿದುಕೊಂಡಂತಾಗುತ್ತದೆ ಎಂದು ಆರೋಪಿಸಿ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಅಬ್ದುಲ್ ಫಹೀಮ್ ಖುರೇಷಿ ಇದೇ ತಿಂಗಳ 7ರಂದು ಅರ್ಜಿ ಸಲ್ಲಿಸಿದ್ದರು. ಜನರು ತಮ್ಮ ಖಾಸಗಿ ಬದುಕಿನ ರಕ್ಷಣೆ ಮತ್ತು ಸ್ವಾತಂತ್ರ್ಯಕ್ಕಾಗಿ ಯಾವುದೇ ವೃತ್ತಿ ಮಾಡಬಹುದು. ಅಲ್ಪಸಂಖ್ಯಾತರ ಧಾರ್ಮಿಕ ಅಭ್ಯಾಸ ಮತ್ತು ಹಿತಾಸಕ್ತಿಗಳನ್ನು ಕೇಂದ್ರ ಸರ್ಕಾರದ ನಿಯಮ ಉಲ್ಲಂಘಿಸುತ್ತದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ