“ಭಾರತದಲ್ಲಿ ಹಿರಿಯ ನಾಗರಿಕರನ್ನು ನಡೆಸಿಕೊಳ್ಳುವ ಸಂಬಂಧದ” ವರದಿ ಬಿಡುಗಡೆ !

Kannada News

14-06-2017

ಬೆಂಗಳೂರು:- ಹಿರಿಯ ನಾಗರಿಕರ ಮೇಲೆ ಹೆಚ್ಚುತ್ತಿರುವ ಸಾರ್ವಜನಿಕವಾಗಿ ನಿಂದನೆ ದೌರ್ಜನ್ಯ ತಡೆಗಟ್ಟಲು ಪೊಲೀಸರ ಜತೆ ಸಂಘ ಸಂಸ್ಥೆಗಳು ಕೈಜೋಡಿಸಬೇಕಾದ ಅಗತ್ಯವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಅವರು ಒತ್ತಿ ಹೇಳಿದ್ದಾರೆ. ವಿಶ್ವ ಹಿರಿಯ ನಾಗರಿಕ ದೌರ್ಜನ್ಯ ವಿರೋಧಿ ದಿನದ ಅಂಗವಾಗಿ ನಗರದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ, “ಭಾರತದಲ್ಲಿ ಹಿರಿಯ ನಾಗರಿಕರನ್ನು ನಡೆಸಿಕೊಳ್ಳುವ ಸಂಬಂಧದ” ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿ ಅವರು, ದೇಶದಲ್ಲಿ ಶೇಕಡಾ 44ರಷ್ಟು ಹಿರಿಯ ನಾಗರಿಕರು, ನಿಂದನೆ, ದೌರ್ಜನ್ಯ, ಇನ್ನಿತರ ಕಿರುಕುಳಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅನುಭವಿಸುತ್ತಿದ್ದಾರೆ. ಇದನ್ನು ಶೇಕಡಾ 22ಕ್ಕೆ ಇಳಿಸಲು ಶಕ್ತಿಮೀರಿ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಇಬ್ಬರು ಹಿರಿಯ ನಾಗರಿಕರಲ್ಲಿ ಒಬ್ಬರು ಒಂದಲ್ಲಾ ಒಂದು ರೀತಿಯ ನಿಂದನೆಗೆ ಒಳಗಾಗುತ್ತಿದ್ದಾರೆ. ಆರೋಗ್ಯ, ಹಣಕಾಸು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಹಿರಿಯ ನಾಗರಿಕರನ್ನು ಅತ್ಯಂತ ಗೌರವದಿಂದ ಕಾಣಬೇಕಾಗಿರುವ ಅಗತ್ಯವನ್ನು ಪ್ರತಿಪಾದಿಸಿದರು.

ವರದಿಯ ಪ್ರಮುಖಾಂಶಗಳು- ಭಾರತದಲ್ಲಿ ಶೇಕಡಾ 53ರಷ್ಟು ಹಿರಿಯರು ತಮ್ಮನ್ನು ಸಮಾಜ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಭಾವಿಸುವವರಾಗಿದ್ದಾರೆ, ದೇಶದಲ್ಲಿ ಶೇಕಡಾ 65ರಷ್ಟು ಜನರು ಹಿರಿಯ ನಾಗರಿಕರಿಗೆ ಬಸ್‍ಗಳಲ್ಲಿ ಸೀಟು ಬಿಟ್ಟುಕೊಡುತ್ತಾರೆ. ಬ್ಯಾಂಕ್ ಸಿಬ್ಬಂದಿ ಶೇಕಡಾ 57ರಷ್ಟು ಹಿರಿಯರಿಗೆ ವಿಶೇಷ ಸೌಲಭ್ಯ ನೀಡಿದ್ದಾರೆ. ಆಸ್ಪತ್ರೆಗಳಲ್ಲಿ ಶೇಕಡಾ 70ರಷ್ಟು ಹಿರಿಯರಿಗೆ ಚಿಕಿತ್ಸೆ ನೀಡುವಾಗ ವಿಶೇಷ ಗಮನ ಹರಿಸುತ್ತಾರೆ ಎಂದು ವರದಿ ಹೇಳಿದೆ. ದೇಶದ ಶೇಕಡಾ 17ರಷ್ಟು ಮಾಲ್ ಸಿಬ್ಬಂದಿ ಹಿರಿಯ ನಾಗರಿಕರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ.  ಶೇಕಡಾ 19ರಷ್ಟು ಹಿರಿಯ ನಾಗರಿಕನ್ನು ಅಂಚೆ ಕಚೇರಿಗಳಲ್ಲಿ ಕ್ರೂರವಾಗಿ ನಡೆಸಿಕೊಂಡಿದ್ದಾರೆ. ವೃದ್ಧಾಪ್ಯ ಸಂಬಂಧಿ ನಿಧಾನಗತಿಯ ನಮ್ಮ ಕೆಲಸದಿಂದ ಕೆಲವು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು, ಶೇಕಡಾ 61ರಷ್ಟು ಹಿರಿಯ ನಾಗರಿಕರು ದೂರಿದ್ದಾರೆ. ಅಂಗಡಿಗಳಲ್ಲಿ ಯುವಕರಿಗಿಂತ ತಮಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಶೇಕಡಾ 54ರಷ್ಟು ಹಿರಿಯರು ಸಂತಸ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ