ಶಾರ್ಟ್ ಸರ್ಕ್ಯೂಟ್ ನಿಂದ ಆಸ್ಪತ್ರೆಗೆ ಬೆಂಕಿ ರೋಗಿಗಳ ಸ್ಥಳಾಂತರ !

Kannada News

14-06-2017

ಬೆಂಗಳೂರು:- ಇಂದು ಬೆಳಿಗ್ಗೆ ಜಯನಗರದ 9ನೇ ಬ್ಲಾಕ್‍ನ ರಾಗಿಗುಡ್ಡ ಬಳಿಯಿರುವ ಮಾಲತಿ ಮಣಿಪಾಲ್ ಆಸ್ಪತ್ರೆಗೆ ಬೆಂಕಿ ಬಿದ್ದು 40ಕ್ಕೂ ಹೆಚ್ಚು ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಮಣಿಪಾಲ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಬೆಳಗ್ಗೆ 9.45ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದುಬಂದಿದೆ. ಸುದ್ದಿ ತಿಳಿದ ಕೂಡಲೇ 2 ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಏರ್ ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಮತ್ತೊಂದು ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಘಟನೆಯಲ್ಲಿ ಈ ವರೆಗೂ  ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಸಿಇಒ, ಮೊದಲ ಅಂತಸ್ತಿನಲ್ಲಿರುವ ಐಸಿಯು ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು, ಇದೀಗ ಅಗ್ನಿಶಾಮಕ ಸಿಬ್ಬಂದಿ ಅದನ್ನು  ನಂದಿಸಿದ್ದಾರೆ. ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಕಿಯಿಂದ ಫಿಜಿಯೋಥೆರಪಿ ಯಂತ್ರಗಳು ಪೀಠೋಪಕರಣಗಳು ಸುಟ್ಟು ಹೋಗಿದ್ದು ಯಾವುದೇ ಆಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಜೆಪಿನಗರ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ