ಪೀಠ v/s ಗಣತಂತ್ರ

Kannada News

14-06-2017

ಕೇರಳ:- ಯಾವುದೇ ಸ್ಥಳದಲ್ಲಿ ಅಥವ ಕಾರ್ಯಕ್ರಮದಲ್ಲಿ ನಮ್ಮ ಪೀಠ ಅಥವ ಆಸನ ಅನ್ನುವುದು, ಬೇರೆಯವರ ಆಸನಕ್ಕೆ ಸಮನಾಗಿದ್ದರೆ ಅದು ನಮಗೆ ಅಪಮಾನವೇ? ಅಥವ ನಮ್ಮ ಪೀಠದ ಎತ್ತರವನ್ನು ಏರಿಸಿಕೊಳ್ಳುವ ಮೂಲಕ ನಮ್ಮನ್ನು ನಾವೇ ಶ್ರೇಷ್ಠರನ್ನಾಗಿಸಿಕೊಂಡುಬಿಡಲು ಸಾಧ್ಯವೇ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನಿರಬಹುದು ಅನ್ನುವುದನ್ನು ಊಹಿಸುವುದು ಕಷ್ಟವೇನಲ್ಲಾ ಬಿಡಿ. ಆದರೆ, ಕೇರಳದಲ್ಲಿ ನಡೆದ ಒಂದು ಘಟನೆಯಿಂದ ಇವೆಲ್ಲಾ ಪ್ರಶ್ನೆಗಳು ಮರುಹುಟ್ಟು ಪಡೆದಿವೆ. ಕೇರಳದ ಪಡಿಂಗಾರ್ ಕೋಟ ಎಂಬಲ್ಲಿ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದ್ದ ಪುಷ್ಕರಣಿಯೊಂದರ ಉದ್ಘಾಟನೆ ಕಾರ್ಯಕ್ರಮವಿತ್ತು. ಇದರಲ್ಲಿ ಶೃಂಗೇರಿ ಶಾರದಾ ಪೀಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತಿ ಸ್ವಾಮೀಜಿ ಮತ್ತು ಕೇರಳದ ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ಪಾಲ್ಗೊಳ್ಳುವುದು ನಿಗದಿಯಾಗಿತ್ತು. ಅದರಂತೆ, ಸ್ಥಳಕ್ಕೆ ಬಂದ ಸಚಿವರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಭಾರಿ ಸಿಂಹಾಸನವೊಂದು ಕಂಡುಬಂತು. ಅದು, ಶ್ರೀಗಳು ಆಸೀನರಾಗಲು ಇರಿಸಿದ ಸಿಂಹಾಸನ ಅನ್ನುವುದನ್ನು ಅರಿತ ಸಚಿವರು, ಅಲ್ಲೊಂದಿಷ್ಟು ಪ್ರಜಾತಂತ್ರದ ತತ್ವ ಅನ್ವಯಿಸಲು ಮುಂದಾದರು. ತಾವೇ ಮುಂದಾಗಿ ನಿಂತು ಆ ವಿಶೇಷ ಆಸನವನ್ನು ವೇದಿಕೆಯ ಬದಿಗೆ ಸರಿಸಿದರು. ಸಚಿವ ಸುರೇಂದ್ರನ್, ತಮ್ಮ ಈ ವರ್ತನೆಯ ಮೂಲಕ ಪ್ರಜಾಪ್ರತಿನಿಧಿಯ ಸ್ಥಾನಕ್ಕೆ ಕುಂದುಂಟಾಗುವ ಸಾಧ್ಯತೆ ತಪ್ಪಿಸಿದರು. ಅದೇ ರೀತಿಯಲ್ಲಿ, ಶತಮಾನಗಳಿಂದ ನಡೆದು ಬಂದಿದ್ದ ಅನಗತ್ಯ ಸಂಪ್ರದಾಯಕ್ಕೂ ಇತಿಶ್ರೀ ಹಾಡಿದರು.  ಕೇರಳ ಸಚಿವರ ಈ ನಡೆಗೆ, ಕರ್ನಾಟಕವೂ ಸೇರಿದಂತೆ ಹಲವೆಡೆ ಪ್ರಶಂಸೆ ಮತ್ತು ಆಕ್ಷೇಪಣೆಗಳೆರಡೂ ವ್ಯಕ್ತವಾಗುತ್ತಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಅನ್ನುವುದನ್ನು ಒಪ್ಪುವ ಎಲ್ಲರೂ, ಸಚಿವರು ಮಾಡಿದ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೇರಳದ ಸಚಿವರು, ಯಾವುದೇ ಸದ್ದಿಲ್ಲದೆ ಸಮಾನತೆಯ ಹಿರಿಮೆ ಎತ್ತಿಹಿಡಿದ್ದಿದ್ದಾರೆ. ಆ ಕ್ಷಣಕ್ಕೆ ತಮಗೆ ಅನ್ನಿಸಿದ ರೀತಿಯಲ್ಲಿ ಸಚಿವರು ಮಾಡಿದ ಈ ಕೆಲಸ, ಇಲ್ಲಿಯವರೆಗೂ ನಡೆದುಕೊಂಡು ಬಂದಿದ್ದ ಶ್ರೇಷ್ಠತೆಯನ್ನು ಹೇರುವ ಸಂಪ್ರದಾಯಕ್ಕೆ ಯಳ್ಳೂನೀರು ಬಿಟ್ಟಿದೆ. ಇಲ್ಲಿಂದಾಚೆಗೆ ಯಾವುದೇ ಕಾರ್ಯಕ್ರಮದಲ್ಲೂ ಮಠಾಧಿಪತಿಗಳಿಗೆ ವಿಶೇಷ ಆಸನ ವ್ಯವಸ್ಥೆ ಇರದಂತೆ ನೋಡಿಕೊಳ್ಳಬೇಕು ಅನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಇದೇ ವೇಳೆ ಸಚಿವರ ವರ್ತನೆ ಶ್ರೀಗಳಿಗೆ ತೋರಿದ ಅಗೌರವ ಎಂಬ ಪ್ರತಿಕ್ರಿಯೆಗಳೂ ಬಂದಿವೆ. ಮಠಾಧಿಪತಿಗಳ ಆಶೀರ್ವಾದವನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮತ್ತು ಅವರ ಶಿಷ್ಯೆ ಶೋಭಾ ಕರಂದ್ಲಾಜೆ ಅವರು, ಕೇರಳ ಸಚಿವರ ವರ್ತನೆ ವಿರುದ್ಧ ಕೂಗಾಡುತ್ತಿದ್ದಾರೆ. ಈ ರೀತಿಯ ಪ್ರತಿಕ್ರಿಯೆ ಗಣತಂತ್ರ, ಪ್ರಜಾತಂತ್ರ ವ್ಯವಸ್ಥೆ ಮತ್ತು ಮಾನವ ಘನತೆ ಬಗ್ಗೆ ಅವರಿಗೆ ಸ್ವಲ್ಪವೂ ಗೌರವ ಇಲ್ಲ ಅನ್ನುವುದನ್ನು ಸಾರಿ ಹೇಳುತ್ತಿದೆ. ರಾಮಾಯಣದಲ್ಲಿ ಬರುವ ಕತೆಯಂತೆ, ಲಂಕಾಧಿಪತಿ ರಾವಣನು ಎತ್ತರದ ಪೀಠದಲ್ಲಿ ಆಸೀನನಾಗಿದ್ದನಂತೆ. ಅವನ ಸಭೆಗೆ ಹಿಡಿದು ತರಲಾದ ಹನುಮಂತ ಒಂದು ಪಿಳ್ಳೆಯಂತೆ ಕಾಣುತ್ತಿದ್ದನಂತೆ. ಇದನ್ನು ನೋಡಿ ಆಸ್ಥಾನದಲ್ಲಿದ್ದವರು ಘೊಳ್‌ ಎಂದು ನಕ್ಕರಂತೆ. ಹನುಮಂತನಿಗೆ ಏನನ್ನಿಸಿತೋ ಏನೋ ತನ್ನ ಬಾಲವನ್ನೇ ಹಗ್ಗದ ರೀತಿಯಲ್ಲಿ ಬೆಳೆಸಿ, ಹತ್ತುತಲೆಯ ರಾವಣನ ಆಸನಕ್ಕಿಂತ ದೊಡ್ಡ ಆಸನವನ್ನೇ ಸೃಷ್ಟಿ ಮಾಡಿಕೊಂಡು ಕಾಲಮೇಲೆ ಕಾಲು ಹಾಕಿ ಕುಳಿತು ಅವನ ಸೊಕ್ಕುಮುರಿದನಂತೆ. ಈ ರೀತಿಯಲ್ಲಿ, ಈ ಆಸನದ ರಾಜಕೀಯ ಆ ಹೊತ್ತಿನಿಂದ ಈ ಹೊತ್ತಿನವರೆಗೂ ಪ್ರಚಲಿತವಾಗಿದ್ದು, ಇನ್ನೂ ಮುಂದಕ್ಕೆ ಯಾವ ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೋ ನೋಡಬೇಕು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


I read it fully,excellent thought provoking article...keep it up.
  • VLN
  • CIVIL Engineer
I is superb news
  • shsjs
  • Professional
Nice superb
  • shsjs
  • Professional