ಡಿ.ಹೆಚ್.ಶಂಕರಮೂರ್ತಿ ಅವರ ವಿರುದ್ಧ ಕಾಂಗ್ರೆಸ್ ಪ್ರಯತ್ನಕ್ಕೆ ಜೆಡಿಎಸ್ ಅಡ್ಡಿ !

Kannada News

14-06-2017

ಬೆಂಗಳೂರು:- ಸಭಾಪತಿ ಸ್ಥಾನದಿಂದ ಡಿ.ಹೆಚ್. ಶಂಕರಮೂರ್ತಿ ಅವರನ್ನು ಕೆಳಗಿಳಿಸುವ ಕಾಂಗ್ರೆಸ್ ಪಕ್ಷದ ಪ್ರಯತ್ನ ವಿಫಲವಾಗುವುದು ಬಹುತೇಕ ಖಚಿತವಾಗಿದೆ. ಕಡೇ ಕ್ಷಣದಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸದಿರಲು ಜೆಡಿಎಸ್ ನಿರ್ಧರಿಸಿದ್ದು, 'ಕೈ' ಪಾಳಯ ಮುಜುಗರಕ್ಕೀಡಾಗು ಸಾಧ್ಯತೆಯಿದೆ. ಸಭಾಪತಿಯನ್ನು ಕೆಳಗಿಳಿಸುವ ವಿಚಾರದಲ್ಲಿ ಕಾಂಗ್ರೆಸ್‌ ನವರ ಪ್ಲಾನ್ ಉಲ್ಟಾ ಆಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನೊಂದಿಗೆ ಕೈ ಜೋಡಿಸುವ ಸಂಬಂಧ ಜೆಡಿಎಸ್ ಪರಿಷತ್ ಸದಸ್ಯರ ಜತೆ ಹೆಚ್.ಡಿ. ಕುಮಾರಸ್ವಾಮಿ ರಹಸ್ಯ ಸಭೆ ನಡೆಸಿದರು. ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಪರಿಷತ್‌ನ 13 ಮಂದಿ ಸದಸ್ಯರು ಭಾಗಿಯಾಗಿದ್ದರು. ಸಭೆಯಲ್ಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಸಂಬಂಧ ಕುರಿತು ಸುಧೀರ್ಘ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಹಿರಿಯ ಸದಸ್ಯರು ಕಾಂಗ್ರೆಸ್ ಬೆಂಬಲಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಜನರಿಗೆ ತಪ್ಪು ಸಂದೇಶ ಹೋಗಲಿದೆ, ಅಧಿಕಾರಕ್ಕಾಗಿ ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ಕೊಡುತ್ತಾರೆ ಎನ್ನುವ ಅಪವಾದಕ್ಕೆ ಸಿಲುಕುತ್ತೇವೆ. ಹಾಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಬಾರದು ಎಂದು ಸಲಹೆ ನೀಡಿದ್ದಾರೆ. ಸದಸ್ಯರ ಸಲಹೆಯನ್ನು ಪರಿಗಣಿಸಿದ ಕುಮಾರಸ್ವಾಮಿ ಅವರು ಕಾಂಗ್ರೆಸ್ ನೊಂದಿಗೆ ಕೈ ಜೋಡಿಸದಿರಲು ನಿರ್ಧಾರ ಕೈಗೊಂಡು ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಕೆಗೆ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ