ನಂ.1 ಸ್ಥಾನಕ್ಕೆ ಜೀ ಕನ್ನಡ..?

Kannada News

14-06-2017

ಕನ್ನಡದಲ್ಲಿ ಕಳೆದ ಮೂರು ವರ್ಷಗಳ ಹಿಂದೆ 4ನೇ ಸ್ಥಾನದಲ್ಲಿದ್ದ ಜೀ ಕನ್ನಡ ವಾಹಿನಿ ಸದ್ಯ 2ನೇ ಸ್ಥಾನಕ್ಕೇರಿದೆ. ಒಂದು ಕಾಲದಲ್ಲಿ ನಂ.1 ಚಾನೆಲ್ ಆಗಿದ್ದ ಉದಯ, ಸ್ಟಾರ್ ಸುವರ್ಣ ವಾಹಿನಿಗಳನ್ನು ಹಿಂದಿಕ್ಕಿದೆ. ದಿನದಿಂದ ದಿನಕ್ಕೆ ಜೀ ಕನ್ನಡದ ಟಿಆರ್ ಪಿ ರೇಟಿಂಗ್ ಏರುತ್ತಲೇ ಸಾಗಿದೆ. ಹೀಗೆಯೇ ಏರುತ್ತಾ ಹೋದಲ್ಲಿ ಇದು ಕನ್ನಡದ ನಂ 1 ಚಾನೆಲ್ ಆಗೋದಿಕ್ಕೆ ಕೆಲವೇ ದಿನಗಳು ಸಾಕು ಅನ್ನೋ ಮಾತುಗಳು ಕೇಳಿಬರುತ್ತಿದೆ.

ಹೌದು… ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸುತ್ತಿವೆ. ಜೀ ಯಲ್ಲಿ ಪ್ರಸಾರವಾಗುವ ವೀಕೆಂಡ್ ವಿಥ್ ರಮೇಶ್, ಡ್ರಾಮಾ ಜ್ಯೂನಿಯರ್ಸ್, ಸ ರೆ ಗ ಮ ಪ, ಮುಂತಾದ ಕಾರ್ಯಕ್ರಮಗಳಿಗೆ ಜನರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಇಷ್ಟಲ್ಲದೇ ಹಳೇ ಕಥೆಗಳನ್ನೇ ಎಳೆಯದೇ, ಹೊಸತನವಿರುವ ಸಾಕಷ್ಟು ಹೊಸ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವುದರಿಂದ ಜನರಿಗೆ ಜೀ ಇನ್ನಷ್ಟು ಹತ್ತಿರವಾಗುತ್ತಿದೆ. ಇದರಲ್ಲಿ ಪ್ರಸಾರವಾಗುವ ವಿಭಿನ್ನ ಅಭಿರುಚಿಯ, ವಿನೂತನ ಕಾರ್ಯಕ್ರಮಗಳನ್ನು ಜನರು ಇಷ್ಟಪಡುತ್ತಿದ್ದಾರೆ.

ಅಂದಹಾಗೆ ಜೀ ಕನ್ನಡದ ಟಿ ಆರ್ ಪಿ ಇಷ್ಟರ ಮಟ್ಟಿಗೆ ಏರಿಕೆಯಾಗೋಕೆ ಕಾರಣ ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು. ಹೌದು… ರಾಘವೇಂದ್ರ ಅವರು ಜೀ ಕನ್ನಡಕ್ಕೆ ಮುಖ್ಯಸ್ಥರಾಗಿ ಬಂದಾಗಿನಿಂದ ಸಾಕಷ್ಟು ಬದಲಾವಣೆ ತಂದಿದ್ದಾರೆ. ವಾಹಿನಿಯಲ್ಲಿ ಸಾಕಷ್ಟು ಹೊಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರ ಕಾರ್ಯಶೈಲಿ, ಶ್ರಮವಹಿಸಿ ದುಡಿಯುವ ರೀತಿ, ಬೇರೆಯವರಿಗೂ ಕ್ರೆಡಿಟ್ ಕೊಡುವ ಉದಾರತೆಯೇ ಇದಕ್ಕೆ ಕಾರಣ. ಸದ್ಯಕ್ಕೆ ಕೇವಲ 40-50 ಪಾಯಿಂಟ್ ಗಳಿಂದ 2ನೇ ಸ್ಥಾನದಲ್ಲಿರುವ ಜೀ ಕನ್ನಡದ ವಾಹಿನಿಯನ್ನು ಸ್ವಲ್ಪ ಶ್ರಮವಹಿಸಿದರೆ ನಂ.1 ನೇ ಸ್ಥಾನಕ್ಕೇರಿಸುವುದು ಕಷ್ಟವಾಗಲಿಕ್ಕಿಲ್ಲ.

ಸದ್ಯಕ್ಕೆ ನಂ 1 ಸ್ಥಾನದಲ್ಲಿರುವ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಳೇ ಕಾಲದಿಂದಲೂ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ಬೋರ್ ಹೊಡೆಸುವ ಕಾರ್ಯಕ್ರಮಗಳು, ಹೊಸತನವಿಲ್ಲದ ರಿಯಾಲಿಟಿ ಶೋಗಳಿಂದ ಜನರು ಬೇಸತ್ತಿದ್ದಾರೆ ಅನ್ನೋದಂತೂ ನಿಜ.

ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಿದಲ್ಲಿ ಯಾವತ್ತಿಗೂ ಜನರು ಸ್ವೀಕಾರ ಮಾಡುತ್ತಾರೆ. ಈಗ ಜನರ ಬಳಿ ಸಾಕಷ್ಟು ಆಪ್ಷನ್ ಗಳಿವೆ. ಯಾವುದು ಬೆಸ್ಟ್ ಅನ್ನಿಸುತ್ತೋ ಅದನ್ನೇ ಒಪ್ಪಿಕೊಳ್ಳುತ್ತಾರೆ. ಹೀಗೆಯೇ ಮುಂದುವರಿದಲ್ಲಿ ಈಗ ನಂ.2 ಸ್ಥಾನದಲ್ಲಿರುವ ಜೀ ಕನ್ನಡ ವಾಹಿನಿ 1ನೇ ಸ್ಥಾನಕ್ಕೇರುವ ದಿನಗಳು ದೂರ ಉಳಿದಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ