ಎಸ್ ಐ ಆತ್ಮಹತ್ಯೆ ಹುಟ್ಟುಹಾಕಿದ ಅನುಮಾನಗಳು!

Suspicions created by SI

31-07-2020

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಪಿ.ಎಸ್.ಐ. ಕಿರಣ್ ಕುಮಾರ್ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಎಸ್ಐ ಆತ್ಮಹತ್ಯೆ ಇಡೀ ರಾಜ್ಯ ಪೊಲೀಸ್ ಇಲಾಖೆಯನ್ನು ವಿಚಲಿತಗೊಳಿಸಿದೆ. ಇಂದು ಬೆಳಗ್ಗೆ ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆ ಮುಗಿಸಿ, ತಿಂಡಿ ತಿನ್ನಲು ಮನೆಗೆ ಹೋಗಿದ್ದ ಕಿರಣ್ ಕುಮಾರ್ ಸರಿ ಸುಮಾರು 9 ಗಂಟೆ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾರೆ. ತಡರಾತ್ರಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಆರೋಪಿಯನ್ನು ಬಂಧಿಸಲು ಎಸ್‌ಐ ಕಾರ್ಯಪ್ರವೃತ್ತರಾಗಿದ್ದರು, ಅಲ್ಲದೆ ನಿನ್ನೆ ನಡೆದಿದ್ದ ಕೊಲೆ ಪ್ರಕರಣವನ್ನು ಕೂಡ ಪಿಎಸ್‌ಐ ಬೇಧಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.  ಉತ್ತಮ ಸೇವೆಯ ಮೂಲಕ ಕೀರ್ತಿ ಗಳಿಸಿದ್ದ ಕಿರಣ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕಿರಣ್ ಕುಮಾರ್ ದಿಢೀರನೇ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ದಿನದ ಅಂತರದಲ್ಲಿ ಎರಡು ಕೊಲೆಗಳು ನಡೆದಿವೆ, ಈ ಕೊಲೆಗಳನ್ನು ಬೇಧಿಸುವ ಸಂದರ್ಭದಲ್ಲಿ ಕಿರಣ್ ಕುಮಾರ್ ಸಾಕಷ್ಟು ಒತ್ತಡವನ್ನು ಅನುಭವಿಸಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಕೊಲೆ ಪ್ರಕರಣದ ಸ್ಥಳ ಪರಿಶೀಲನೆಗೆ ಇಂದು ಎಸ್ಪಿ ಹಾಗೂ ಐಜಿ ಆಗಮಿಸಿ ಪರಿಶೀಲನೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು.  ಕರ್ತವ್ಯ ನಿರ್ಲಕ್ಷ್ಯದಿಂದ ಈ ಕೊಲೆಗಳು ನಡೆದಿವೆ ಎಂಬ ಆರೋಪ ತಮ್ಮ ಮೇಲೆ ಬರಲಿದೆ ಎಂಬ ಆತಂಕಕ್ಕೆ ಕಿರಣ್ ಕುಮಾರ್ ಒಳಗಾಗಿದ್ದರು ಎನ್ನಲಾಗಿದೆ. ಬೆಳಗ್ಗೆ ದಕ್ಷಿಣ ವಲಯದ ಐಜಿಪಿ ಸ್ಥಳಕ್ಕೆ ಬರುತ್ತಾರೆ, ನೀವು ರೆಡಿಯಾಗಿ, ನಾನು ಬರುತ್ತೇನೆಂದು ಕಿರಣ್ ಸಿಬ್ಬಂದಿಗೆ ಹೇಳಿ ಹೋಗಿದ್ದರು. ಅಲ್ಲದೆ ಕರ್ತವ್ಯ ವೈಫಲ್ಯ ಕಾರಣ ನೀಡಿ ಸಹೋದ್ಯೋಗಿಗಳ ಜೊತೆಗೆ ನನ್ನನ್ನು ಸಸ್ಪೆಂಡ್ ಮಾಡುತ್ತಾರೆಂದು ತನ್ನ ಸಿಬ್ಬಂದಿಗಳ ಜೊತೆಗೆ ಕಿರಣ್ ಕುಮಾರ್ ಹೇಳಿಕೊಂಡಿದ್ದರು ಎನ್ನಲಾಗಿದೆ.  
ಮೃತ ಕಿರಣ್ ಆತ್ಮಸ್ಥೈರ್ಯ ಕಳೆದುಕೊಂಡು ದುಡುಕಿನ ನಿರ್ಧಾರ ಕೈಗೊಂಡ್ರಾ ಅನ್ನೋ ಅನುಮಾನ ಮೂಡಿಸಿದೆ. ಇಬ್ಬರು ಮಕ್ಕಳೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದ ಕಿರಣ್ ಕುಮಾರ್ ಕರ್ತವ್ಯ ನಿಷ್ಠೆಯಲ್ಲೂ ಎಲ್ಲೂ ಎಡವಿದ ಉದಾಹರಣೆಗಳಿಲ್ಲ, ಇದೀಗ ಕಿರಣ್ ಕುಮಾರ್ ಸಾವಿನಿಂದ ಇಡೀ ಕುಟುಂಬದಲ್ಲಿ ನೋವು ಮಡುಗಟ್ಟಿದೆ. ಚನ್ನರಾಯಪಟ್ಟಣದ ತಾಲ್ಲೂಕು ಆಸ್ಪತ್ರೆ ಬಳಿ ಸಂಬoಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.


ಸಂಬಂಧಿತ ಟ್ಯಾಗ್ಗಳು

#suicide #policesuicide #stress #karnatakapolice


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ