ಮುಂದಿನ ಜನವರಿವರೆಗೆ ಶಾಲೆ ಇಲ್ಲವಂತೆ!

No school till next January!

28-07-2020

ಸರ್ಕಾರವೇ ಕೋವಿಡ್ ನಿರ್ವಹಣೆಯ ವಿಚಾರದಲ್ಲಿ ದಿಕ್ಕು ಕಾಣದ ರೀತಿಯಲ್ಲಿ ವರ್ತಿಸುತ್ತಿರುವ ಸಂದರ್ಭದಲ್ಲಿ ಶಾಲೆಗಳು ಪುನರಾರಂಭಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದ್ದರೂ ಈಗ ಸಧ್ಯಕ್ಕೆ ಆನ್ಲೈನ್ ಕ್ಲಾಸ್ಸೆಸ್ ಗಳಿಗೆ ಮಾತ್ರ ಶಾಲಾ ಚಟುವಟಿಕೆಗಳನ್ನು ಸೀಮಿತ ಗೊಳಿಸುವ ಬಗ್ಗೆ ನಿರ್ಧರಿಸಲಾಗಿದೆ. ಕೆಲವು ಪೋಷಕರು ಶಾಲೆಗಳ ಪುನರಾರಂಭದ ಬಗ್ಗೆ ಒಲವು ತೋರಿದ್ದರೂ ಇನ್ನು ಬಹುತೇಕ ಮಂದಿ ಪೋಷಕರು ಶಾಲೆಗಳಿಗೆ ಮಕ್ಕಳನ್ನು ಈ ಪರಿಸ್ಥಿತಿಯಲ್ಲಿ ಕಳಿಸುವುದು ಸೂಕ್ತವಲ್ಲ ಮತ್ತು ಅದು ಸರಿಯಾದ ನಿರ್ಧಾರವೂ ಅಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸರ್ಕಾರ ಏನೇ ಆದರೂ ಶಾಲೆಗಳನ್ನು ಪುನರಾರಂಭಿಸಬಾರದು ಎಂದು ಒತ್ತಡ ಹೇರಿದ್ದಾರೆ.

ಕರ್ನಾಟಕದಲ್ಲಂತೂ ಸರ್ಕಾರ ಮಕ್ಕಳ ಶಿಕ್ಷಣದ ಬಗ್ಗೆ ಸೂಕ್ತ ನಿರ್ಧಾರ ವನ್ನು ತೆಗೆದುಕೊಳ್ಳದೆ ಮತ್ತು ಮುಂದಿನ ದಿನಗಳಲ್ಲಿ ಶಿಕ್ಷಣ ಹೇಗೆ ಮುಂದುವರಿಯಬೇಕೆಂಬ ಬಗ್ಗೆ ನೀತಿ ಕೂಡ ಇಲ್ಲದೆ ಇರುವುದರಿಂದ ಖಾಸಗಿ ಶಾಲೆಗಳೂ ಅತಂತ್ರ ಸ್ಥಿತಿಯನ್ನು ತಲುಪಿ ಬಿಟ್ಟಿವೆ. ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಇತರ ಸಿಬ್ಬಂದಿಗೆ ಸರ್ಕಾರದಿಂದಲೇ ಸಂಬಳ ಬರುವ ಕಾರಣ ಅವರು ಚಿಂತಿತರಾಗಿಲ್ಲ ಆದರೆ ಅನುದಾನ ಪಡೆಯದ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗೆ ಶಾಲೆಗಳ ಆದಾಯದಿಂದಲೇ ಸಂಬಳ ಬರಬೇಕಾಗಿರುವುದರಿಂದ ಮತ್ತು ಶಾಲೆ ಫೀಸ್ ಕಟ್ಟಲೂ ಕೂಡ ಪೋಷಕರು ಹಿಂದೆ ಮುಂದೆ ನೋಡುತ್ತಿರುವುದರಿಂದ ಅನೇಕ ಶಿಕ್ಷಕರು ಕೆಲಸ ಬಿಡುವ ಚಿಂತನೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಮಕ್ಕಳಿಲ್ಲದೆ, ಶುಲ್ಕವಿಲ್ಲದೆ ಶಾಲೆಯ ಕಟ್ಟಡ ಮತ್ತು ಸೌಲಭ್ಯಗಳನ್ನು ನೋಡಿಕೊಳ್ಳುವುದೂ ಸಾಧ್ಯವಾಗುತ್ತಿಲ್ಲವೆಂದು ಅನೇಕ ಶಾಲಾ ಮಾಲೀಕರು ಹೇಳುತ್ತಿದ್ದಾರೆ. ಶಾಲಾ ವಾಹನಗಳ ನಿರ್ವಹಣೆ, ಚಾಲಕರ ಸಂಬಳ ಮುಂತಾದ ಅವಶ್ಯಕತೆಗಳಿಗೂ ಹಣವಿಲ್ಲದಂತಾಗಿ ಮಕ್ಕಳು ಬರುವ ತನಕ ಶಾಲೆಗಳನ್ನು ನಿಭಾಯಿಸುವುದು ಹೇಗೆ ಎಂದು ಅನೇಕರು ಚಿಂತಾಕ್ರಾಂತರಾಗಿದ್ದರೆ. ಅದರೊಂದಿಗೆ ದಿನೇದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದರೆ ಬರುವ ವರ್ಷ ಜನವರಿಯ ತನಕ ಶಾಲೆಗಳು ತೆರೆಯುವ ಸೂಚನೆಯೂ ಕಂಡುಬರುತ್ತಿಲ್ಲ ಎಂದು ಕೆಲವು ಪ್ರತಿಷ್ಠಿತ ಶಾಲೆಗಳ ಮಾಲೀಕರು ಮತ್ತು ಶೈಕ್ಷಣಿಕ ಮುಖ್ಯಸ್ಥರು ಹೇಳುತ್ತಿದ್ದಾರೆ. ಎಷ್ಟೇ ಆನ್ಲೈನ್ ಕ್ಲಾಸ್ ಗಳನ್ನ ಮಾಡಿದರೂ ಮಗು ತರಗತಿಯಲ್ಲಿ ಕಲಿತಂತಾಗುವುದಿಲ್ಲ ಮತ್ತು ಅನೇಕ ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲ ಕೂಡ, ಅದರಿಂದ ಅನೇಕ ಪೋಷಕರು ಮಕ್ಕಳು ಶಾಲೆಗೇ ಹೋಗಿ ಕಲಿಯುವುದೇ ಒಳಿತು ಎಂದುಕೊಂಡರೂ ಮಕ್ಕಳನ್ನು ಶಾಲೆಗೆ ಕಲಿಸಲು ಧೈರ್ಯ ತೋರುತ್ತಿಲ್ಲ ಎಂಬ ಮಾಹಿತಿ ಹೊರಬಂದಿದೆ.

ಇದೆಲ್ಲವನ್ನ ಪರಿಗಣಿಸಿ ಈ ವರ್ಷವಂತೂ ಶಾಲೆಗಳು ಪುನರಾರಂಭಗೊಳ್ಳುವ ಸಾಧ್ಯತೆಯೇ ಇಲ್ಲ ಎಂದು ಅನೇಕ ಶಾಲಾ ಮಾಲೀಕರು ದುಃಖ ತುಂಬಿದ ವಿಶ್ವಾಸದೊಂದಿಗೆ ಹೇಳುತ್ತಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

#school #onlineclass #covid #karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ