ಚೀನಾದ ಹೊಸ ಮಿತ್ರರು - ಭಾರತಕ್ಕೆ ಆತಂಕ!

China

16-07-2020

ಭಾರತದೊಂದಿಗೆ ಹೊಡೆದಾಟ ಮಾಡಿ ಅನೇಕ ಕಡೆ ಛೀಮಾರಿ ಹಾಕಿಸಿಕೊಂಡ ಚೀನಾ ಈಗ ಅಮೇರಿಕಾದೊಂದಿಗೆ ತನ್ನ ಸಂಬಂಧವನ್ನು ಬಹುತೇಕ ಹಾಳು ಮಾಡಿಕೊಂಡಿದೆ. ಚೀನಾವನ್ನು ಕೋವಿಡ್ ರಫ್ತು ಮಾಡಿದ ದೇಶ ಎಂಬ ಆರೋಪ ಮಾಡಿ ಮೂಲೆಗೆ ತಳ್ಳಲು ಅಮೇರಿಕಾ ಪ್ರಯತ್ನಿಸಿದರೂ ಇಂದಿನವರೆಗೆ ಕೆಲವೇ ದೇಶಗಳು ಮಾತ್ರ ಅಮೆರಿಕಾದ ಈ ವಾದಕ್ಕೆ ಮನ್ನಣೆ ನೀಡಿವೆ.

ಭಾರತವನ್ನು ಚೀನಾದ ಎದುರು ತನ್ನ ಸಂಗಾತಿಯನ್ನಾಗಿ ತೋರಿಸಲು ಹವಣಿಸುತ್ತಿರುವ ಅಮೇರಿಕ ಅದರಿಂದ ಭಾರತಕ್ಕೆ ಲಾಭ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದರೂ, ಭಾರತಕ್ಕಿಂತ ಹೆಚ್ಚಾಗಿ ಭಾರತ-ಅಮೇರಿಕ ಸಂಬಂಧದಿಂದ ಅಮೇರಿಕಕ್ಕೇ ಲಾಭ ಎಂದು ಹೇಳಲಾಗುತ್ತಿದೆ. ನೆಹರೂ ಕಾಲದಿಂದಲೂ ಭಾರತದ ಭೂಮಿಯಲ್ಲಿ ರಷ್ಯಾದ ವಿರುದ್ಧ ಒಂದು ನೆಲೆ ಸ್ಥಾಪಿಸಲು ಸಂಚು ಮಾಡುತ್ತಿದ್ದ ಅಮೆರಿಕಾಕ್ಕೆ ಭಾರತ ಮತ್ತು ಚೀನಾದ ನಡುವಿನ ಘರ್ಷಣೆ ಒಂದು ವರದಾನವಾಗಿ ಪರಿಣಮಿಸಿದೆ. ಚೀನಾದ ವಿರುದ್ಧ ಭಾರತದಲ್ಲಿ ಜನಾಭಿಪ್ರಾಯ ಮೂಡುತ್ತಿರುವ ಸಂದರ್ಭದಲ್ಲಿ ಅಮೇರಿಕ ಚೀನಾ ವಿರುದ್ಧ ಮಾತಾಡಿ ಹಾಗೇ ಭಾರತದ ಪರ ಹೇಳಿಕೆಗಳನ್ನು ನೀಡಿ ತನ್ನ ವಿರುದ್ಧ ಭಾರತದಲ್ಲಿ ಅಭಿಪ್ರಾಯ ಮೂಡದಂತೆ ನೋಡಿಕೊಳ್ಳುತ್ತಿದೆ. ಹೀಗೇ ಮುಂದುವರಿದರೆ ನರೇಂದ್ರ ಮೋದಿಯವರೊಡಗಿನ ಸ್ನೇಹವನ್ನು ಬಳಸಿಕೊಂಡು ಟ್ರಂಪ್ ಭಾರತದಲ್ಲಿ ಮಿಲಿಟರಿ ನೆಲೆ ಸ್ಥಾಪಿಸುವ ಕಡೆ ಹೆಜ್ಜೆ ಇಡುತ್ತಾರೆ ಎಂದು ಊಹಿಸಲಾಗುತ್ತಿದೆ. ಅದಕ್ಕೆ ಭಾರತದಲ್ಲಿ ಅಂಥಾ ವಿರೋಧ ಬರುವುದಿಲ್ಲ ಎಂದೂ ಎಣಿಸಲಾಗುತ್ತಿದೆ. ಹಾಗಾದಾಗ ಭಾರತ ಬಾಣಲೆಯಿಂದ ಬೆಂಕಿಗೆ ಬಿದ್ದಂಥಾ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಆದರೆ ಭಾರತದ  ವಿರುದ್ಧ  ಚೀನಾ ಷಡ್ಯಂತ್ರ ಮಾಡುತ್ತಿದ್ದರೂ ಅದರ ಬಗ್ಗೆ ಅಮೇರಿಕ ಹೊರತುಪಡಿಸಿ ಅನೇಕ ಬೇರೆ ದೇಶಗಳು ಚೀನಾ ವಿರೋಧಿ ಹೇಳಿಕೆ ನೀಡದಿರುವು ವಿಶ್ವದಾದ್ಯಂತ ಗಮನಿಸಲ್ಪಡುತ್ತಿದೆ.

ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಶ್ರೀಲಂಕಾಗಳನ್ನು ತನ್ನ ಹಣ ಬಲ ಮತ್ತು ಆರ್ಥಿಕ ಪ್ರಭಾವಗಳಿಂದ ಕಬ್ಜ ಮಾಡಿಕೊಂಡ ಚೀನಾ ಪೂರ್ವ ಏಷ್ಯಾದ ರಾಷ್ಟ್ರಗಳು ಮತ್ತು ಆಫ್ರಿಕಾ ಖಂಡದಲ್ಲೂ ಬಹಳಷ್ಟು ಪ್ರಭಾವವನ್ನು ಸ್ಥಾಪಿಸಿದೆ. ಟ್ರಂಪ್ ಅವರ ನಡವಳಿಕೆಯಿಂದ ಬೇಸತ್ತ ಅನೇಕ ಯೂರೋಪಿಯನ್ ರಾಷ್ಟ್ರಗಳು ಈಗ ಅಮೇರಿಕದಿಂದ ದೂರವಾಗಿವೆ. ಅವು ಚೀನಾ ವಿರುದ್ಧ ನಿಲ್ಲಲು ಸಿದ್ಧವಾಗಿಲ್ಲ. ಹಾಗೇ ಭಾರತ ಆಸ್ಟ್ರೇಲಿಯಾ ಜೊತೆ ಸಮರಾಭ್ಯಾಸ ಮಾಡುವುದು ಚೀನಾಕ್ಕೆ ಇರುಸು ಮುರುಸು ಉಂಟು ಮಾಡಬಹುದು ಎಂದು ಅಂದುಕೊಂಡರೂ ಚೀನಾ ಸಧ್ಯದಲ್ಲೇ ಪಾಕಿಸ್ತಾನದೊಂದಿಗೆ ಸಮರಾಭ್ಯಾಸ ಮಾಡುವ ಘೋಷಣೆ ಮಾಡಬಹುದು ಎನ್ನಲಾಗುತ್ತಿದೆ. ರಷ್ಯಾ ಕೂಡ ಪಾಕಿಸ್ತಾನಕ್ಕೆ ಸಮರ ಶಸ್ತ್ರಗಳನ್ನು ತಯಾರು ಮಾಡಿಕೊಡುತ್ತಿರುವ ಅನುಮಾನಗಳಿವೆ.

ಇದೆಲ್ಲದರ ಮಧ್ಯೆ ಅನೇಕ ರಾಷ್ಟ್ರಗಳು ಅಮೇರಿಕಾದಿಂದ ದೂರ ಹೋಗುತ್ತಿವೆ. ಹಾಗೆ ಹೋಗುತ್ತಿರುವ ರಾಷ್ಟ್ರಗಳ ಪೈಕಿ ಜರ್ಮನಿ ಮುಂತಾದ ಕೆಲವು ಪ್ರಭಾವಿ ರಾಷ್ಟ್ರಗಳು ಚೀನಾ ಪರ ವಾಲುತ್ತಿರುವುದು ಕಂಡುಬರುತ್ತಿದೆ. ಆರ್ಥಿಕ ಕಾರಣಗಳಿಂದಾಗಿ ಚೀನಾ ಜೊತೆ ಸ್ನೇಹ ಬೆಳೆಸಲು ಈ ಐರೋಪ್ಯ ರಾಷ್ಟ್ರಗಳು ಮುಂದಡಿಯಿಡುತ್ತಿರುವುದು ಚೀನಾಕ್ಕೆ ಬಹಳ ಸಂತೋಷ ತರುತ್ತಿದೆ. ಅಮೇರಿಕಾಕ್ಕೆ ಬಹಳಷ್ಟು ಕಿರಿಕಿರಿ ಉಂಟು ಮಾಡುತ್ತಿರುವ ಕೆಲವು ದೇಶಗಳ ಈ ನಡೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಆತಂಕ ಉಂಟು ಮಾಡಬಹುದು ಎಂದೂ ಹೇಳಲಾಗುತ್ತಿದೆ. 


ಸಂಬಂಧಿತ ಟ್ಯಾಗ್ಗಳು

#china #indiachina #chinagermany #internationalrelations


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ