ಅಪರಾಧಗಳ ಸಂಖ್ಯೆ ಕಡಿಮೆಗೆ ನಮ್ಮ ಕ್ರಮ, ಹೊಸ ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಅಲ್ಲ

Kannada News

13-06-2017

ಬೆಂಗಳೂರು: -ರಾಜ್ಯದಲ್ಲಿ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತಿದೆಯೇ ಹೊರತು ಹೊಸ ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಸರ್ಕಾರ ಆತುರ ತೋರುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಗಿಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಬೇಕು. ಆ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಭದ್ರತೆ ಒದಗಿಸಬೇಕು. ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಿದ್ಧರಾಮಯ್ಯ, ನಮ್ಮ ಗುರಿ ಅಪರಾಧಗಳ ಸಂಖ್ಯೆ ಕಡಿಮೆಯಾಗಬೇಕು ಎಂಬುದೇ ಹೊರತು ಅಪರಾಧಗಳ ಸಂಖ್ಯೆ ಜಾಸ್ತಿಯಾಗಬೇಕು ಎಂದಲ್ಲ.ಹೊಸ ಹೊಸ ಠಾಣೆಗಳನ್ನು ನಿರ್ಮಿಸುತ್ತಾ ಹೋದರೆ ಇದು ಹೇಗೆ ಸಾಧ್ಯ?ಅಂತ ಪ್ರಶ್ನಿಸಿದರು. ಈ ಹಂತದಲ್ಲಿ ಮಾತನಾಡಿದ ಸಿ.ಟಿ.ರವಿ, ನೀವು ಹೇಳಿದ ಪ್ರಕಾರ ಪೊಲೀಸ್ ಠಾಣೆಗಳನ್ನು ಕಡಿಮೆ ಮಾಡುತ್ತಾ ಹೋದರೆ ನಾಳೆ ಲಾಯರುಗಳ ಕತೆ ಏನಾಗಬೇಕು? ಅವರೇನು ಕೆಲಸ ಮಾಡಬೇಕು?ಎಂದಾಗ ಸಿಎಂ ಸಿದ್ಧರಾಮಯ್ಯ ಗರಂ ಆದರು. ಹಿಂದೆ ಸಾರಾಯಿ ನಿಷೇಧವಾಯಿತು. ಹಾಗಂತ ಸಾರಾಯಿ ಮಾರಾಟಗಾರರು ಸತ್ತಿದ್ದಾರಾ? ಅಪರಾಧಗಳು ಕಡಿಮೆಯಾದರೆ ಲಾಯರುಗಳು ಏನು ಮಾಡಬೇಕು? ಅಂತ ಕೇಳುತ್ತೀರಲ್ಲ? ಅವರಿಗಾಗಿ ಅಪರಾಧ ಪ್ರಕರಣಗಳು ಜಾಸ್ತಿಯಾಗಬೇಕೇ? ಎಂದು ಅವರು ಪ್ರಶ್ನಿಸಿದರು. ಮುಂದುವರಿದು ಮಾತನಾಡಿ, ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಯಾವ ಕಾರಣಕ್ಕೂ ಇದಕ್ಕೆ ನಾವು ಕೈ ಹಾಕುವುದಿಲ್ಲ. ಬದಲಿಗೆ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸುತ್ತೇವೆ ಎಂದರು. ಇದಕ್ಕೂ ಮುನ್ನ ಸಿ.ಟಿ.ರವಿ ಅವರ ಪ್ರಶ್ನೆಗೆ ಗೃಹ ಸಚಿವ ಡಾ||ಜಿ.ಪರಮೇಶ್ವರ್ ಅವರು ಉತ್ತರಿಸಿ, ಹೊಸ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಎಂದು ಹೇಳಿದರು. ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಬೇಕೆಂದರೆ ರಾಷ್ಟ್ರೀಯ ಪೊಲೀಸ್ ಆಯೋಗದ ಮಾರ್ಗಸೂಚಿಯನ್ನು ಪಾಲಿಸಬೇಕು. ನಿರ್ದಿಷ್ಟ ಜಾಗದ ವ್ಯಾಪ್ತಿಯೊಳಗೆ ಕನಿಷ್ಟ ಪಕ್ಷ ತಿಂಗಳಿಗೆ ಮುನ್ನೂರು ಪ್ರಕರಣಗಳು ದಾಖಲಾಗಬೇಕು ಎಂದು ನುಡಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ