ಡಿಕೆಗೆ ಬಂತು ಆನೆ ಬಲ

Elephant

17-06-2020

ಡಿಕೆಗೆ ಬಂತು ಆನೆ ಬಲ
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದು ಚರ್ಚೆಗೆ ಗ್ರಾಸವಾಗಿ ಅದು ಕುತೂಹಲದ ಮಟ್ಟ ತಲುಪಿದ್ದಾಗ ಪಕ್ಷದ ಹೈ ಕಮಾಂಡ್ ನಜೀರ್ ಅಹ್ಮದ್ ಜೊತೆ ಪಕ್ಷದ ನಿಷ್ಠ ನಾಯಕ ಮತ್ತು ಹಿಂದುಳಿದ ವರ್ಗದ ಮೂಲದವರಾದ ಬಿ ಕೆ ಹರಿಪ್ರಸಾದ್ ಅವರಿಗೆ ಟಿಕೆಟ್ ನೀಡಿ ಆ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದೆ. ನಜೀರ್ ಅಹ್ಮದ್ ಸಿದ್ದರಾಮಯ್ಯ ಅವರಿಗೆ ನಿಷ್ಠರು ಎನ್ನುವುದನ್ನು ಬಿಟ್ಟರೆ ಬೇರೇನೂ ಅಲ್ಲ. ಉದ್ಯಮಿಯಾಗಿರುವುದು ಮಾತ್ರ ಅವರ ಅರ್ಹತೆಯಷ್ಟೇ ಎನ್ನುವ ಮಾತು ಪಕ್ಷದಲ್ಲೇ ಕೇಳಿಬರುತ್ತದೆ. ಆದರೆ ಕಾಂಗ್ರೆಸ್ ಪಕ್ಷದ ನಿಷ್ಠ ಕಾರ್ಯಕರ್ತ ಬಿ ಕೆ ಹರಿಪ್ರಸಾದ್ ಅವರಿಗೆ ಟಿಕೆಟ್ ನೀಡುವುದರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದೆ ಎಂದು ತೋರಿಸಿಕೊಟ್ಟಂತಾಗಿದೆ. ಈಡಿಗ ಸಮುದಾಯಕ್ಕೆ ಸೇರಿದ ಹರಿಪ್ರಸಾದ್ ಅವರಿಗೆ ಟಿಕೆಟ್ ನೀಡುವ ಮೂಲಕ ಆ ಸಮುದಾಯಕ್ಕೂ ಒಂದು ಸಂದೇಶ ನೀಡಿ ದಶಕಗಳ ಹಿಂದಿನ ಸಂಬಂಧವನ್ನು ಆ ಸಮುದಾಯದೊಂದಿಗೆ ಮತ್ತೊಮ್ಮೆ ಬಲಪಡಿಸಲು ಕಾಂಗ್ರೆಸ್ ಪಕ್ಷ ಮುಂದಡಿಯಿಟ್ಟಂತೆ ಕಂಡುಬರುತ್ತಿದೆ. ಬಹಳಷ್ಟು ವರ್ಷಗಳ ಕಾಲ ಎಐಸಿಸಿಯಲ್ಲೇ ಕೆಲಸ ಮಾಡಿದ ಹರಿಪ್ರಸಾದ್ ಅವರನ್ನು ಕರ್ನಾಟಕ ರಾಜಕಾರಣಕ್ಕೆ ತರುವ ಮೂಲಕ ಹಿಂದುಳಿದ ವರ್ಗಗಳ ನಾಯಕರಾಗಿ ಸಿದ್ದರಾಮಯ್ಯ ಏಕಚಕ್ರಾಧಿಪತ್ಯ ನಡೆಸುವುದಕ್ಕೆ ಅಡ್ಡಗಾಲು ಹಾಕಿದಂತಾಗಿದೆ ಎಂದೂ ಹೇಳಲಾಗುತ್ತಿದೆ. ಪ್ರಬಲ ಈಡಿಗ ಸಮುದಾಯವನ್ನು ಮತ್ತೊಮ್ಮೆ ರಾಜಕೀಯವಾಗಿ ಬಲಪಡಿಸುವುದರೊಂದಿಗೆ ಹರಿಪ್ರಸಾದ್ ಅವರನ್ನು ಹಿಂದುಳಿದ ವರ್ಗಗಳ ನಾಯಕರಂತೆ ಬಿಂಬಿಸುವುದೂ ಈ ಯೋಜನೆಯ ಮುಂದುವರೆದ ಭಾಗವಾಗಿದೆ ಎಂದೂ ಹೇಳಲಾಗುತ್ತಿದೆ. ಈ ಎಲ್ಲಾ ತಂತ್ರಗಳ ಹಿಂದೆ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ರಾಜಕೀಯ ಚಾಣಾಕ್ಷತನ ಮತ್ತು ಕುಟಿಲ ತಂತ್ರಗಾರಿಕೆಯೂ ಇದೆ ಎಂಬುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹರಿಪ್ರಸಾದ್ ಮೇಲ್ಮನೆ ಪ್ರವೇಶಿಸುವ ಮೂಲಕ ಮೂಲ ಕಾಂಗ್ರೆಸ್ಸಿಗನೊಬ್ಬ ಹಿಂದುಳಿದ ವರ್ಗಗಳ ನಾಯಕನಾಗುವುದು ಡಿಕೆಯವರಿಗೆ ಆನೆ ಬಲ ನೀಡುತ್ತದೆ ಎಂದೂ ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

#bkhariprasad #dkshivakumar #karnataka #kpcc


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ