‘ಕಮಲ್’ ಸರ್ಕಾರಕ್ಕೆ ‘ಕಮಲ’ದಿಂದ ಕಂಟಕ?

Operation Lotus in Madhyapradesh?

04-03-2020

ಭೋಪಾಲ್‍, ಮಾ.4: ಮಧ್ಯಪ್ರದೇಶದಲ್ಲೂ ಕರ್ನಾಟಕ ಮಾದರಿಯಲ್ಲಿ ‘ಆಪರೇಷನ್‍ ಕಮಲ’ ನಡೆಯಲಿದೆಯೇ? ಕಮಲ್‍ ನಾಥ್‍ ನೇತೃತ್ವದ ಅಲ್ಲಿನ ಕಾಂಗ್ರೆಸ್‍ ಸರ್ಕಾರ ಸಂಕಷ್ಟದಲ್ಲಿ ಸಿಲುಕಿದೆಯೇ?- ಇವು ಕಳೆದ ರಾತ್ರಿ ಆಗಿರುವ ಬದಲಾವಣೆ ಕಂಡು ರಾಜಕೀಯಾಸಕ್ತರಲ್ಲಿ ಮೂಡಿರುವ ಪ್ರಶ್ನೆಗಳು.

ಮಧ್ಯಪ್ರದೇಶ ವಿಧಾನಸಭೆಯ ನಾಲ್ವರು ಕಾಂಗ್ರೆಸ್‍ ಶಾಸಕರು ದೆಹಲಿ ಸಮೀಪದ ಗುರುಗ್ರಾಮದ ಖಾಸಗಿ ಹೋಟೆಲ್‍ ಒಂದರಲ್ಲಿ ಜಮಾವಣೆಗೊಂಡಿರುವುದೇ ಈ ಪ್ರಶ್ನೆಗಳಿಗೆ ಕಾರಣ. ಈ ಶಾಸಕರಿಗೆ ಬಿಜೆಪಿ ನಾಯಕರು ಆಮಿಷವೊಡ್ಡಿ, ತಮ್ಮ ಪಕ್ಷಕ್ಕೆ ಸೆಳೆದುಕೊಂಡು ಕಮಲ ನಾಥ್‍ ಸರ್ಕಾರವನ್ನು ಬೀಳಿಸಲಿದ್ದಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಗಳಲ್ಲಿ ದಟ್ಟವಾಗಿದೆ.

ಕಾಂಗ್ರೆಸ್‍ ನಾಯಕ ದಿಗ್ವಿಜಯ್‍ ಸಿಂಗ್‍ ಅವರು ಈ ಕುರಿತು ಮಾತನಾಡುತ್ತ, “ವಾಸ್ತವವಾಗಿ ಆ ಹೋಟೆಲ್‍ನಲ್ಲಿ 8 ಮಂದಿ ಕಾಂಗ್ರೆಸ್‍ ಶಾಸಕರು ಒಗ್ಗೂಡಿದ್ದರು. ಆ ಪೈಕಿ ನಾಲ್ವರ ಮನವೊಲಿಸಿ ವಾಪಸ್‍ ಕರೆದುಕೊಂಡು ಬರುವಲ್ಲಿ ಸಚಿವರಾದ ಜೈವರ್ಧನ್‍ ಸಿಂಗ್‍ ಹಾಗೂ ಜಿತು ಪತ್ವಾರಿ ಯಶಸ್ವಿಯಾದರು. ಆದರೆ ಮಿಕ್ಕ ನಾಲ್ವರು ಅಲ್ಲೇ ಉಳಿದಿದ್ದಾರೆ. ಬಿಜೆಪಿ ನಾಯಕರಿಂದ ಅವರಿಗೆ ಹಣಹಂಚಿಕೆಯಾಗುತ್ತಿದೆ” ಎಂದಿದ್ದಾರೆ.

ಕಳೆದ 15 ತಿಂಗಳಿಂದ ಮಧ್ಯಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಕಮಲ್‍ ನಾಥ್‍ ಸರ್ಕಾರ, ಆಗೊಮ್ಮೆ ಈಗೊಮ್ಮೆ ಹೀಗೆ ಆಪರೇಷನ್‍ ಕಮಲದ ಆತಂಕಕ್ಕೆ ಒಳಗಾಗುತ್ತಲೇ ಇರುವುದು ಸುಳ್ಳಲ್ಲ. ಈ ಬಾರಿಯ ಕಸರತ್ತೇನಾದರೂ ಕೈಗೂಡಿದರೆ, ಕರ್ನಾಟಕದಲ್ಲಿದ್ದ ಜೆಡಿಎಸ್‍-ಕಾಂಗ್ರೆಸ್‍ ನೇತೃತ್ವದ ಸರ್ಕಾರವನ್ನು ಕೆಡವಿದ ನಂತರದ ಮತ್ತೊಂದು ನಿದರ್ಶನವಾಗಿ ಮಧ್ಯಪ್ರದೇಶದ ಪ್ರಹಸನ ದಾಖಲಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Kamala Nath Operation Lotus BJP Digvijay Singh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ