ಮಾದಕ ವಸ್ತು ಮಾರಾಟವನ್ನು ಸಾಮಾನ್ಯ ಅಪರಾಧ ಎಂದು ಪರಿಗಣಿಸಬಾರದು !

Kannada News

13-06-2017 229

ಬೆಂಗಳೂರು:- ಇತ್ತೀಚೆಗೆ ಮಾದಕ ವಸ್ತುಗಳ ಮಾರಾಟ ಹಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಶಾಲಾ-ಕಾಲೇಜುಗಳ ಬಳಿ, ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ, ಪಾರ್ಟಿಗಳಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆಗೆ ಪ್ರೇರಣೆ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಲಾಗುತ್ತಿದೆ ಎಂದರು. ಬೆಂಗಳೂರು, ಮಂಗಳೂರು, ಬೆಳಗಾವಿಯಲ್ಲಿ ಮಾದಕ ವಸ್ತು ಮಾರಾಟ ಸಮಸ್ಯೆ ಗಂಭೀರವಾಗಿದ್ದು, ಇತರೆ ಪ್ರದೇಶಗಳಲ್ಲೂ ಮಾರಾಟ ಪ್ರಕರಣಗಳು ಕಂಡು ಬರುತ್ತಿವೆ. ಸರ್ಕಾರ ಈ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಅಪ್ಪಚ್ಚು ರಂಜನ್, ಮಾತನಾಡಿ, ಶಾಲಾ-ಕಾಲೇಜುಗಳ ಬಳಿ ಬೆಳಿಗ್ಗೆ ಮತ್ತು ಸಂಜೆ ವಿಡಿಯೋ ಚಿತ್ರೀಕರಣ ಮಾಡಬೇಕು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಸರಕಾರಿ ವಕೀಲರು ಸರಿಯಾಗಿ ವಾದ ಮಂಡಿಸದಿರುವುದರಿಂದ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಎಷ್ಟೇ ಗಾಂಜಾ ಸಿಕ್ಕರೂ ಕೇವಲ 50 ಗ್ರಾಂ ಸಿಕ್ಕಿದೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸುತ್ತಾರೆ. ಆದ್ದರಿಂದ ಸುಲಭವಾಗಿ ಜಾಮೀನು ಸಿಗುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯ ಎಸ್.ಸುರೇಶ್‍ಕುಮಾರ್, ಮಾದಕ ವಸ್ತು ಮಾರಾಟವನ್ನು ಸಾಮಾನ್ಯ ಅಪರಾಧ ಎಂದು ಪರಿಗಣಿಸಬಾರದು. ದೇಶದ್ರೋಹ ಎಂದು ಪರಿಗಣಿಸಬೇಕು. ಮಕ್ಕಳನ್ನು ಮಾದಕ ಜಾಲಕ್ಕೆ ಬೀಳಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಎಲ್ಲೆಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಪೊಲೀಸರಿಗೆ ಗೊತ್ತಿದೆ. ಆದ್ದರಿಂದ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ