‘ಥಪ್ಪಡ್’ ಚಲನಚಿತ್ರ ವಿಮರ್ಶೆ29-02-2020

ಇದು, ತನ್ನ ಕೆನ್ನೆಗೆ ಬಾರಿಸಿದ ಗಂಡನ ವಿಚ್ಛೇದನಕ್ಕೆ ನಿರ್ಧರಿಸುವ ಮಹಿಳೆಯೊಬ್ಬಳ ಕಥೆ. 

ತಾಪ್ಸೀ ಪನ್ನು (‘ಸಾಂಡ್‍ ಕೀ ಆಂಖ್‍’, ‘ಮಿಷನ್ ಮಂಗಲ್’, ‘ಬದ್ಲಾ’ ಚಿತ್ರಗಳ ಖ್ಯಾತಿ) ಅಭಿನಯ ಪ್ರಭಾವಶಾಲಿಯಾಗಿದೆ. ಆದರೆ, ‘ಪಂಗಾ’ ಚಿತ್ರದಲ್ಲಿ ಕಂಗನಾ ರನೌತ್‍ ಮತ್ತು 'ಚಪಾಕ್‍’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಒಂದಿಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಯಶಸ್ಸಿನತ್ತ ಒಯ್ಯುವಲ್ಲಿ ವಿಫಲರಾದಂತೆಯೇ, ಏಕಾಂಗಿಯಾಗಿ ಹಿಟ್‍ ಚಿತ್ರವೊಂದನ್ನು ನೀಡುವುದು ತಾಪ್ಸೀ ಪನ್ನುಗೆ ಕಷ್ಟಕರವಾಗಬಹುದು ಎನಿಸುತ್ತದೆ. ಆಕೆಯ ಗಂಡನಾಗಿ ನಟಿಸಿರುವ ಪಾವೈಲ್‍ ಗುಲಾಟಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಾಗೆ ನೋಡಿದರೆ, ಕಥೆಗೆ ಅಗತ್ಯವೇ ಇಲ್ಲದ ತುಂಬಾ ಪಾತ್ರಗಳು ಚಿತ್ರದಲ್ಲಿವೆ. ದಿಯಾ ಮಿರ್ಜಾ, ರಾಮ್‍ ಕಪೂರ್‍, ಮಾನವ್‍ ಕೌಲ್‍, ತನ್ವಿ ಅಜ್ಮಿ, ಕುಮುದ್‍ ಮಿಶ್ರಾ ಮೊದಲಾದವರು ತಮಗಿತ್ತ ‘ಅರೆಬೆಂದ’ ಪಾತ್ರಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಯಾ ಸರಾವ್‍ ಅವರದ್ದು ಹದವರಿತ ಅಭಿನಯ.

ಇನ್ನು ಕಥೆಯ ವಿಷಯಕ್ಕೆ ಬರುವುದಾದರೆ, ನಮ್ಮ ಸಮಾಜದಲ್ಲಿ ಕಾಣಬರುವ ಕೌಟುಂಬಿಕ ಹಿಂಸಾಚಾರದಂಥ ಒಂದು ಮುಖ್ಯವಾದ ಸಾಮಾಜಿಕ ಸಮಸ್ಯೆಯನ್ನು ಅದು ಎತ್ತಿಹಿಡಿಯುತ್ತದೆ. ಕಥೆ ಹೆಣೆದಿರುವ ಅನುಭವ್‍ ಸಿನ್ಹಾ ಮತ್ತು ಮೃಣ್ಮಯೀ ಲಾಗೂ ಈ ನಿಟ್ಟಿನಲ್ಲಿ ಅಭಿನಂದನಾರ್ಹರು.

ಛಾಯಾಗ್ರಹಣ (ಸೌಮಿಕ್‍ ಮುಖರ್ಜಿ) ಸೊಗಸಾಗಿದೆ. ದೆಹಲಿಯ ಸುಂದರ ತಾಣಗಳು ಕಣ್ಮನ ಸೆಳೆಯುತ್ತವೆ. ಚಿತ್ರ ನಿರ್ಮಾಣದ ಮತ್ತಿತರ ವಲಯಗಳೂ ಇದೇ ಮಾನದಂಡವನ್ನು ಕಾಯ್ದುಕೊಂಡಿರುವುದು ಶ್ಲಾಘನೀಯ.

ಹಾಗಂತ ಚಿತ್ರದಲ್ಲಿ ಕೊರತೆಗಳು ಇಲ್ಲವೇ ಇಲ್ಲ ಎಂದೇನಲ್ಲ. ಪುರುಷ ಪಾತ್ರಗಳನ್ನು ನಕಾರಾತ್ಮಕವಾಗಿ ಬಿಂಬಿಸುವ ಈ ಚಿತ್ರದ ಪರಿಕಲ್ಪನೆಯನ್ನು ಬಹುತೇಕ ಪ್ರೇಕ್ಷಕರು ಸ್ವೀಕರಿಸದಿರಬಹುದು (ಇತ್ತೀಚೆಗೆ ಬಿಡುಗಡೆಯಾದ ‘ಕಬೀರ್‍ ಸಿಂಗ್‍’ ಚಿತ್ರ ಇಲ್ಲಿ ಉಲ್ಲೇಖನೀಯ; ನಿಮ್ಮ ಅರ್ಧಾಂಗಿಗೆ ಹೊಡೆಯುವುದು ಸಮರ್ಥನೀಯ ಎಂಬಂತೆ ಬಿಂಬಿಸಿಕೊಂಡ ಈ ಚಿತ್ರ ಸೂಪರ್‍ ಹಿಟ್‍ ಆಯಿತು ಎಂಬುದು ಈ ಮಾತಿಗೆ ಪುಷ್ಟಿ ನೀಡುತ್ತದೆ). ಚಿತ್ರದಲ್ಲಿ ಬರುವ ಬಹುತೇಕ ಎಲ್ಲ ಮಹಿಳಾ ಪಾತ್ರಗಳು (ಅದು ಸ್ವತಃ ನಾಯಕಿ ಅಥವ ಆಕೆಯ ಸೋದರನ ಗರ್ಲ್‍ ಫ್ರೆಂಡ್‍, ಲಾಯರ್‍, ಸೇವಕಿ ಹೀಗೆ ಯಾರು ಬೇಕಾದರೂ ಆಗಿರಬಹುದು) ತಮ್ಮ ಜೀವನಸಂಗಾತಿಯಾಗಿ ಬರುವ ಪುರುಷನ ಕಾರಣದಿಂದಲೇ ಒಂದಲ್ಲಾ ಒಂದು ಪಡಿಪಾಟಲಿಗೆ ಒಳಗಾಗಬೇಕಾಗಿ ಬರುತ್ತದೆ ಎಂಬಂತೆ ಚಿತ್ರದ ಕಥೆ ಬಿಂಬಿತವಾಗಿದೆ. ಹೀಗಾಗಿ, ಸಾಮಾಜಿಕ ನೆಲೆಯಲ್ಲಿ ಸುಸಂಬದ್ಧವಾಗಿ ರೂಪುಗೊಳ್ಳಬಹುದಾಗಿದ್ದ ಚಿತ್ರವೊಂದು ವೀಕ್ಷಕರೊಂದಿಗೆ ಭಾವನಾತ್ಮಕ ನಂಟು ರೂಪಿಸಿಕೊಳ್ಳುವಲ್ಲಿ ವಿಫಲವಾಗುತ್ತದೆ. ಇದು ಮಹಿಳಾ ಪಾತ್ರಗಳಿಗೂ ಅನ್ವಯವಾಗುವ ಮಾತು.

ಜತೆಗೆ, ಈ ಚಿತ್ರವನ್ನು ಕಟ್ಟುವಲ್ಲಿನ ಪರಿಕಲ್ಪನೆಯೂ ಅಸ್ಪಷ್ಟವಾಗಿದೆ. ಚಿತ್ರ ಮುಗಿದ ನಂತರವೂ, ಉತ್ತರವೇ ಸಿಗದ ಸಾಕಷ್ಟು ಪ್ರಶ್ನೆಗಳು ಹಾಗೇ ಉಳಿದುಕೊಳ್ಳುತ್ತವೆ. ನಾವೀಗ ಇರುವುದು 2020ರ ಆಧುನಿಕ ಕಾಲಘಟ್ಟದಲ್ಲಿ; ಮಹಿಳಾ ಸಬಲೀಕರಣಕ್ಕೆ ನಮ್ಮೆಲ್ಲರ ಒತ್ತಾಸೆ ಸಿಗುತ್ತಿರುವ, ತಂತಮ್ಮ ಮನೆಗಳು ಹಾಗೂ ವೃತ್ತಿಜೀವನಗಳನ್ನು ಮಹಿಳೆಯರು ಸಮತೋಲಿತ ಸ್ಥಿತಿಯಲ್ಲಿ ನಿರ್ವಹಿಸಬಲ್ಲದು ಎಂಬುದನ್ನು ನಾವೆಲ್ಲ ನಂಬಿರುವ ಕಾಲವಿದು. ಆದರೆ, ನಿರ್ದೇಶಕ ಅನುಭವ್ ಸಿನ್ಹಾ ಅವರು ಈ ಗ್ರಹಿಕೆಯಲ್ಲಿ ಹೊರಳುದಾರಿ ತುಳಿದಿದ್ದಾರೆ ಎನಿಸುತ್ತದೆ. ನಾಯಕಿ ತಾಪ್ಸೀ ಪನ್ನು ವೃತ್ತಿಜೀವನವನ್ನು ಕೈಬಿಟ್ಟು ಗೃಹಿಣಿಯಾಗೇ ಉಳಿವ ಕಡೆ ಹೆಜ್ಜೆಹಾಕುವಂತೆ ಅವರು ತೋರಿಸಿರುವುದನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ತನಗೆ ಕಪಾಳಮೋಕ್ಷವಾದ ನಂತರವೂ, ನಾಯಕಿಯು ತನ್ನ ‘ದೈನಂದಿನ ದಿನಚರಿ’ಯನ್ನೇ ಮುಂದುವರಿಸಿಕೊಂಡು ಹೋಗುವುದು ಅಸಹಜ ಎನಿಸುತ್ತದೆ. ತನ್ನ ಕೆನ್ನೆಗೆ ಬಾರಿಸಿದ್ದು ತಪ್ಪು ಎಂದು ಆಕೆಗೆ ಅನಿಸಿದ್ದಲ್ಲಿ, ಸಾಕಷ್ಟು ದಿನ ಕಾಯುವ ಬದಲು ಆಕೆ ಕ್ಷಿಪ್ರವಾಗಿಯೇ ಪ್ರತಿಕ್ರಿಯಿಸಬೇಕಿತ್ತು. ನಾಯಕಿಗೆ ಆಗುವ ಕಪಾಳಮೋಕ್ಷಕ್ಕೆ ಪತಿ-ಪತ್ನಿಯ ನಡುವಿನ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಕಾರಣವಾಗಿರುವುದಿಲ್ಲ, ತನ್ನ ಗಂಡ ಹಾಗೂ ಆತನ ಸಹೋದ್ಯೋಗಿಯ ನಡುವಿನ ಹಣಾಹಣಿಯಲ್ಲಿ ಆಕೆ ಮಧ್ಯಪ್ರವೇಶಿಸಿದಾಗ ಗಂಡನಿಂದ ಹೊಮ್ಮುವ ಒಂದು ಅನಿರೀಕ್ಷಿತ ವರ್ತನೆಯಾಗಿರುತ್ತದೆ ಆ ಕೆನ್ನೆಯೇಟು. ಒಂದು ವೇಳೆ, ದಂಪತಿಯ ವೈಯಕ್ತಿಕ ಭಿನ್ನಾಭಿಪ್ರಾಯವೇ ಕಪಾಳಮೋಕ್ಷಕ್ಕೆ ಕಾರಣವಾಗಿದ್ದಿದ್ದಲ್ಲಿ, ಅದು ಸಮರ್ಥನೀಯವೆನಿಸುತ್ತಿತ್ತೇನೋ. ಗಂಡನು ವೃತ್ತಿಸಂಬಂಧದ ಕಿರಿಕಿರಿಯ ಕಾರಣದಿಂದ ಹೆಂಡತಿಗೆ ಕೆನ್ನೆಗೆ ಬಾರಿಸುತ್ತಾನೆಯೇ ವಿನಾ, ಕೌಟುಂಬಿಕ ಹಿಂಸಾಚಾರದ ಇತಿಹಾಸ ಅವನಿಗಿರುವುದಿಲ್ಲ. ಹೀಗಾಗಿ, ನಾಯಕಿಯ ಹಿತೈಷಿಗಳೆಲ್ಲರೂ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸದಂತೆ ಸಾಕಷ್ಟು ಒತ್ತಾಯಿಸಿದರೂ ಆಕೆ ಅಂಥ ಹೆಜ್ಜೆಯಿಡುವಂಥ ಸನ್ನಿವೇಶದ ಔಚಿತ್ಯ ನನಗರ್ಥವಾಗಲಿಲ್ಲ.

ನಿರ್ದೇಶಕ ಅನುಭವ್‍ ಸಿನ್ಹಾ (‘ಆರ್ಟಿಕಲ್‍ 15’, ‘ಮುಲ್ಕ್‍’ ಚಿತ್ರಗಳ ಖ್ಯಾತಿ) ವೀಕ್ಷಕರಿಗೆ ನಿರಾಶೆ ಹುಟ್ಟಿಸುತ್ತಾರೆ. ಕಾರಣ, ಪ್ರಸಕ್ತ ಕಾಲಘಟ್ಟದಲ್ಲಿನ ಅತ್ಯಂತ ಸುಸಂಬದ್ಧ ವಸ್ತುವೊಂದನ್ನು ಇಟ್ಟುಕೊಂಡು ವಸ್ತುನಿಷ್ಠ ಚಿತ್ರವೊಂದನ್ನು ಕಟ್ಟಿಕೊಡುವಲ್ಲಿ ಅವರು ವಿಫಲರಾಗಿದ್ದಾರೆ. ರಬ್ಬರ್‍ ರೀತಿಯಲ್ಲಿ ಎಳೆಯಲ್ಪಟ್ಟಿರುವ ಕಥೆ ತೀರಾ ದುರ್ಬಲವಾಗಿದೆ. ಹೀಗಾಗೇ, ತಾಪ್ಸೀ ಪನ್ನು ಅವರಿಗಿರುವ ಹೀರೋಯಿನ್‍ ಸ್ಥಾನಮಾನವನ್ನು ಎನ್‍ಕ್ಯಾಷ್‍ ಮಾಡಿಕೊಳ್ಳುವುದನ್ನು ಬಿಟ್ಟು ಅವರಿಗೆ ಮತ್ತೇನನ್ನೂ ನಿಭಾಯಿಸಲಾಗಿಲ್ಲ. ಇದೇ ಕಥೆಯಿಟ್ಟುಕೊಂಡು ಅವರು ಈ ಚಿತ್ರವನ್ನು 10 ವರ್ಷಗಳ ಹಿಂದೆ ನಿರ್ದೇಶಿಸಿದ್ದಿದ್ದರೆ, ಅದನ್ನು ಅರಗಿಸಿಕೊಳ್ಳಬಹುದಿತ್ತೇನೋ; ಆದರೆ ಕಾಲವೀಗ ಬದಲಾಗಿದೆ. ಮನರಂಜನಾತ್ಮಕ ಮೌಲ್ಯವೇ ಇಲ್ಲದ ಈ ಚಿತ್ರ ‘ಸಾಕ್ಷ್ಯಚಿತ್ರ’ದಂತೆ ಭಾಸವಾಗುತ್ತದೆ.

ಚಿತ್ರದ ಸಂಕಲನ (ಯಶಾ ರಾಮ್‍ಚಂದಾನಿ) ಶೋಚನೀಯವಾಗಿದೆ. ಚಿತ್ರವನ್ನು ಕನಿಷ್ಠಪಕ್ಷ 30 ನಿಮಿಷದಷ್ಟು ಮೊಟಕಾಗಿಸಲು ಸಾಧ್ಯವಿತ್ತು. ಚಿತ್ರದ ಮೊದಲರ್ಧ ನಿಧಾನಗತಿಯಲ್ಲಿ ಸಾಗುತ್ತದೆ, ಸೀಟಿಗೆ ಅಂಟಿಕೊಂಡು ಕೂರುವಂತೆ ಮಾಡುವ ಯಾವುದೇ ಸ್ವಾರಸ್ಯಕರ ಅಂಶಗಳಿಲ್ಲದೆ ಸೊರಗುತ್ತದೆ. ಇಂಥದೊಂದು ಕಥಾವಸ್ತುವಿಗೆ ಇರಬೇಕಿದ್ದ ತೀಕ್ಷ್ಣ ಸಂಭಾಷಣೆಯ ಜಾಗವನ್ನು ಪೇಲವ ಮಾತುಗಳು ಆಕ್ರಮಿಸಿಬಿಟ್ಟಿವೆ. ಓಬೀರಾಯನ ಕಾಲದ ಮಾತುಗಳನ್ನೇ ಚಿತ್ರದ ಪಾತ್ರಗಳು ಪುನರಾವರ್ತಿಸುತ್ತವೆ. ಚಿತ್ರಕಥೆ ದುರ್ಬಲವಾಗಿರುವುದು ಮಾತ್ರವಲ್ಲದೆ ಅನೇಕ ಉಪಕಥೆಗಳನ್ನು ಹೊಂದಿರುವುದು ಇಷ್ಟವಾಗುವ ಸಂಗತಿಯಲ್ಲ. ಸಂಗೀತ (ಅನುರಾಗ್‍ ಸೈಕಿಯಾ) ಪರವಾಗಿಲ್ಲ, ಸಹಿಸಿಕೊಳ್ಳಬಹುದು.

ಸನ್ಮಾನ್ಯ ಅನುಭವ್ ಸಿನ್ಹಾ ಅವರೇ, ನೀವಿಲ್ಲಿರುವುದು ಮನರಂಜಿಸಲಿಕ್ಕೆ. ಬೋಧನೆ ಮಾಡುವುದೇ ನಿಮ್ಮ ಮೂಲೋದ್ದೇಶವಾಗಿದ್ದಲ್ಲಿ, ‘ರಂಜನೀಯ ಹಾದಿಯಲ್ಲಿ’ (‘ತಾರೆ ಜಮೀನ್‍ ಪರ್‍’, ‘ನೀಲ್‍ ಬತ್ತೇ ಸನ್ನಾಟಾ’ ಚಿತ್ರಗಳಂತೆ) ಅದನ್ನು ಕೈಗೊಳ್ಳಲಿಕ್ಕೆ ಸಾಧ್ಯವಿದೆ ಎಂಬುದನ್ನು ಮರೆಯದಿರಿ.

ಈ ಚಿತ್ರ ಮಹಿಳಾ ಪ್ರೇಕ್ಷಕರಿಗೆ ಇಷ್ಟವಾಗಬಹುದೇನೋ. ಬಿಡುಗಡೆಗೂ ಮುನ್ನ ದಕ್ಕಿರುವ ಎಲ್ಲ ಅಭಿಪ್ರಾಯಗಳನ್ನು ಪರಿಗಣಿಸಿ ಹೇಳುವುದಾದರೆ, ಗಣ್ಯ ಪ್ರೇಕ್ಷಕರು ಬರುವ ಮಲ್ಟಿಪ್ಲೆಕ್ಸ್‍ಗಳಲ್ಲಿ ಈ ಚಿತ್ರ ದಡ ಸೇರಬಹುದೇನೋ. ಆದರೆ ಸಿಂಗಲ್‍ ಸ್ಕ್ರೀನ್‍ ಚಿತ್ರಮಂದಿರಗಳ ವಿಷಯದಲ್ಲಿ ಇದೇ ಮಾತನ್ನು ಹೇಳಲಾಗದು.

ರೇಟಿಂಗ್: 2/5 


ಸಂಬಂಧಿತ ಟ್ಯಾಗ್ಗಳು

Thappad Movie Anubha Sinha Taapsi Pannu Pawail Gulati


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ