ಮುಖ್ಯಮಂತ್ರಿಗಳಿಗೆ ಹೀಗೊಂದು ಆವಾಜ್!

Sarangadhara Swamiji threatens

28-02-2020

ಕಲಬುರಗಿ, ಫೆ.28: “ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರಬೇಕೆಂದರೆ ಶಾಸಕ ದತ್ತಾತ್ರೇಯ ಪಾಟೀಲರಿಗೆ ಮಂತ್ರಿಗಿರಿ ಕೊಡಬೇಕು; ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ ಕೊಡಿಸಲಾಗುವುದು”.

-ಇದು ಮುಖ್ಯಮಂತ್ರಿಗಳಿಗೆ ಯಾವುದೇ ಅತೃಪ್ತ ಶಾಸಕರು ಅಥವ ರಾಜಕೀಯ ವಿರೋಧಿಗಳು ಒಡ್ಡಿದ ಬೆದರಿಕೆಯಲ್ಲ; ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಶ್ರೀಗಳು ಹಾಕಿದ ಧಮಕಿ!

ದತ್ತಾತ್ರೇಯ ಪಾಟೀಲ ರೇವೂರ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮಾತಾಡುತ್ತಿದ್ದ ಶ್ರೀಗಳು, “ಹಿಂದೆ ಮಾತು ಕೊಟ್ಟಂತೆ ಪಾಟೀಲರನ್ನು ಮಂತ್ರಿ ಮಾಡದಿದ್ದಲ್ಲಿ ರಾಜೀನಾಮೆ ನೀಡಿ ಮನೆಯಲ್ಲಿರುವಂತೆ ಅವರಿಗೆ ಹೇಳುತ್ತೇನೆ. ರಾಜೀನಾಮೆ ನೀಡುವಂತೆ ಶಾಸಕ ಅಪ್ಪುಗೌಡರಿಗೂ ಹೇಳುತ್ತೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ 10 ಶಾಸಕರಿಗೂ ಹೀಗೇ ಹೇಳುತ್ತೇನೆ. ಅಂಥ ಶಕ್ತಿ ನನಗಿದೆ” ಎಂದು ಹೇಳಿದರು.

ಕೆಲ ದಿನಗಳ ಹಿಂದೆ, ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಂಚಮಸಾಲಿ ಪೀಠದ ಶ್ರೀ ವಚನನಾನಂದ ಸ್ವಾಮೀಜಿ ಅವರು ಸಿಎಂ ಯಡಿಯೂರಪ್ಪ ಅವರನ್ನುದ್ದೇಶಿಸಿ ಮಾತನಾಡುತ್ತಾ, “ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ಪಂಚಮಸಾಲಿ ಸಮುದಾಯ ನಿಮ್ಮೊಂದಿಗಿದೆ. ನಮ್ಮ ಸಮುದಾಯದ ನಾಲ್ವರು ಶಾಸಕರಿಗೆ ನೀವು ಸಚಿವ ಸ್ಥಾನ ನೀಡಲೇಬೇಕು. ನಮ್ಮ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಮುರುಗೇಶ ನಿರಾಣಿ ಅವರ ಕೈಬಿಟ್ಟರೆ, ನಮ್ಮ ಸಮುದಾಯ ನಿಮ್ಮ ಕೈಬಿಡಲಿದೆ” ಎಂದು ಎಚ್ಚರಿಕೆ ನೀಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಈ ಮಾತಿಗೆ ಅಸಮಾಧಾನಗೊಂಡಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.


ಸಂಬಂಧಿತ ಟ್ಯಾಗ್ಗಳು

Dattatreya Patil Revoora Vachanananda Swamiji Sarangadhara Swamiji Yediyurappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ