ಸರ್ಕಾರದ ಒತ್ತುವರಿ ಭೂಮಿಯಲ್ಲಿ ಆರ್ಥಿಕ ದುರ್ಬಲರಿಗೆ ಮನೆಭಾಗ್ಯ !

Kannada News

13-06-2017

ಬೆಂಗಳೂರು:- ರಾಜ್ಯಾದ್ಯಂತ ಸರ್ಕಾರಿ ಭೂಮಿಯ ಒತ್ತುವರಿ ತೆರವು ಕಾರ್ಯ ನಡೆಸಿ ಆರ್ಥಿಕ ದುರ್ಬಲರಿಗೆ ಮನೆಭಾಗ್ಯ ಕಲ್ಪಿಸಿಕೊಡುವುದಾಗಿ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಇಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಭೂಮಿಯ ಒತ್ತುವರಿ ಏನಾಗಿದೆ? ಅದನ್ನು ತೆರವುಗೊಳಿಸಿ ಅಂತಹ ಭೂಮಿಯಲ್ಲಿ ಆರ್ಥಿಕ ದುರ್ಬಲರಿಗೆ ನಿವೇಶನ ಒದಗಿಸುವ, ಮನೆ ನಿರ್ಮಿಸುವ ಉದ್ದೇಶ ಸರ್ಕಾರಕ್ಕಿದೆ ಎಂದರು. ಬೆಂಗಳೂರು ನಗರದಲ್ಲಿ ಬಿಡಿಎ ವತಿಯಿಂದ ಮೂರು ಸಾವಿರ ಫ್ಲ್ಯಾಟ್‍ಗಳನ್ನು ನಿರ್ಮಿಸಿದರೂ ಅವುಗಳನ್ನು ಖರೀದಿಸಲು ಜನ ನಿರೀಕ್ಷಿತ ಪ್ರಮಾಣದಲ್ಲಿ ಮುಂದೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ನೋಟು ಅಮಾನ್ಯೀಕರಣ ಎಂದರು. ಭಾರೀ ಮುಖ ಬೆಲೆಯ ನೋಟುಗಳ ರದ್ದಿತಿಯಿಂದ ಫ್ಲ್ಯಾಟುಗಳನ್ನು ಖರೀದಿಸಲು ಜನ ಹಿಂದೆ ಮುಂದೆ ನೋಡುವ ಸ್ಥಿತಿಯಿದೆ. ಇದೇ ಕಾರಣಕ್ಕಾಗಿ ಬಿಡಿಎ ಫ್ಲ್ಯಾಟುಗಳ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ವಿವರ ನೀಡಿದರು. ಈಗ ಫ್ಲ್ಯಾಟುಗಳಿಗೆ ವಿಧಿಸಿರುವ ದರದ ಪೈಕಿ ಆರ್ಥಿಕ ದುರ್ಬಲರಿಗೆ ಶೇಕಡಾ 25 ರಷ್ಟು,ಪರಿಶಿಷ್ಟ ಜಾತಿ,ವರ್ಗದವರಿಗೆ ಶೇಕಡಾ 44 ರಷ್ಟು ರಿಯಾಯ್ತಿ ನೀಡಲಾಗುತ್ತದೆ ಎಂದರು. ಹನ್ನೆರಡು ಲಕ್ಷ ರೂ ಮೌಲ್ಯದ ಫ್ಲ್ಯಾಟ್‍ಗೆ ಆರ್ಥಿಕ ದುರ್ಬಲ ವರ್ಗದವರು ಇನ್ನು ಒಂಭತ್ತು ಲಕ್ಷ ರೂ ನೀಡಿದರೆ ಸಾಕು, ಪರಿಶಿಷ್ಟ ಜಾತಿ,ವರ್ಗದವರು ಆರೂ ಮುಕ್ಕಾಲು ಲಕ್ಷ ರೂ ನೀಡಿದರೆ ಸಾಕು ಎಂದರು. ಮುಂದಿನ ದಿನಗಳಲ್ಲಿ ಈ ಫ್ಲ್ಯಾಟುಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಲಿದೆ ಎಂದ ಅವರು, ಇಷ್ಟಾದರೂ ರಾಜ್ಯಾದ್ಯಂತ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಿ ಆರ್ಥಿಕ ದುರ್ಬಲರಿಗೆ ನಿವೇಶನ,ವಸತಿ ಒದಗಿಸಿಕೊಡುವ ಕಾರ್ಯ ಭರದಿಂದ ನಡೆಯಲಿದೆ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಶಿವಲಿಂಗೇಗೌಡ,ಬೆಂಗಳೂರಿನಲ್ಲಿ ಕಡುಬಡವರು ಒಂದು ನಿವೇಶನ ಅಥವಾ ವಸತಿಯನ್ನು ಮಾಡಿಕೊಳ್ಳಲು ಪೂರಕವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ರೀತಿ ಆರ್ಥಿಕ ದುರ್ಬಲರಿಗೆ ಸರ್ಕಾರ ಬೆಂಬಲ ನೀಡದೆ ಹೋದರೆ ಅವರು ನಿವೇಶನ ಖರೀದಿಸುವುದು ಕಷ್ಟ.ವಸತಿ ಖರೀದಿಸುವುದು ಕಷ್ಟ.ಆದ್ದರಿಂದ ಸರ್ಕಾರ ಕಡಿಮೆ ದರದಲ್ಲಿ ಅವರಿಗೆ ಸೂರು ಕಲ್ಪಿಸಲಿ ಎಂದು ಮನವಿ ಮಾಡಿದರು. ಈಗ ಬಿಡಿಎ ವತಿಯಿಂದ ನಿರ್ಮಿಸಿರುವ ಫ್ಲ್ಯಾಟುಗಳಿಗೆ ವಿಧಿಸಲಾಗಿರುವ ದರ ಸಾಮಾನ್ಯ ಜನರ ಕೈಗೆಟುಕದಂತೆ ಇದೆ. ಹೀಗಾಗಿ ಸರ್ಕಾರಕ್ಕೆ ನಷ್ಟವಾದರೂ ಪರವಾಗಿಲ್ಲ .ಅವರಿಗೆ ಕಡಿಮೆ ದರದಲ್ಲಿ ಅವನ್ನು ಒದಗಿಸಿ ಎಂದು ಆಗ್ರಹಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ