ಜುಲೈ 1 ರಿಂದ ರಾಜ್ಯದಲ್ಲಿರುವ ಎಲ್ಲ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್ ಗಳು ರದ್ದು !

Kannada News

13-06-2017

ಬೆಂಗಳೂರು:- ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ. ಜಾರಿಗೆ ಬರುತ್ತಿದ್ದು, ನಂತರ ಕೂಡಲೇ ರಾಜ್ಯದಲ್ಲಿರುವ ಎಲ್ಲ ವಾಣಿಜ್ಯ ತೆರಿಗೆ ಚೆಕ್  ಪೋಸ್ಟ್ ಗಳು ರದ್ದಾಗಲಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಉಮೇಶ್ ಕತ್ತಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಒಟ್ಟು ಇಪ್ಪತ್ತು ಚೆಕ್ ಪೋಸ್ಟ್ ಗಳಿವೆ. ನೀವು ಕೇಳಿದ ಪ್ರಕಾರ ಇಲ್ಲೆಲ್ಲ ಬಹುತೇಕ ಗಣಕೀಕರಣ ಕಾರ್ಯ ನಡೆದಿದೆ. ಆದರೆ ಜುಲೈ ಒಂದರಿಂದ ಜಿ.ಎಸ್.ಟಿ. ಬಿಲ್ ಜಾರಿಗೆ  ಬಂದ ಮೇಲೆ ಚೆಕ್ ಪೋಸ್ಟ್ ಗಳೇ ರದ್ದಾಗುತ್ತದೆ ಎಂದರು. ಚೆಕ್ ಪೋಸ್ಟ್ ಗಳು ರದ್ದಾಗುವುದರಿಂದ ಅಲ್ಲಿ ಏನು ನಡೆಯುತ್ತಿದೆ ಎಂಬ ಕುರಿತು ನಾನು ಪ್ರತ್ಯೇಕವಾಗಿ ಉತ್ತರಿಸಬೇಕಾದ ಅಗತ್ಯವಿಲ್ಲ. ಹೀಗಾಗಿ ನಿಮ್ಮ ಪ್ರಶ್ನೆಯೇ ಅಪ್ರಸ್ತುತ ಎಂದು ನುಡಿದರು. ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಉಮೇಶ್ ಕತ್ತಿ, ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರ-ಕರ್ನಾಟಕದ ಗಡಿಭಾಗದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತೂಕವನ್ನು ಪರಿಶೀಲಿಸುವ ವೇ ಬ್ರಿಡ್ಜ್ ಇಲ್ಲ. ಇದರಿಂದ ಹಲವಾರು ತೊಂದರೆಗಳನ್ನು ಅನುಭವಿಸಲಾಗುತ್ತಿದೆ. ಕೂಡಲೇ ಇದನ್ನು ಸರ್ಕಾರ ತಡೆಗಟ್ಟಬೇಕು. ವೇ ಬ್ರಿಡ್ಜ್ ನಿರ್ಮಿಸುವ ಮೂಲಕ ವಾಹನಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಮಹಾರಾಷ್ಟ್ರದಿಂದ ನಮಗೆ ಕಲ್ಲಿದ್ದಲು, ಸಕ್ಕರೆ ಸೇರಿದಂತೆ ಹಲವು ವಸ್ತುಗಳು ಬರುತ್ತವೆ.ಅವನ್ನು ತುಂಬಿಸಿಕೊಂಡು ಬರುವ ವಾಹನಗಳಲ್ಲಿ ಇರುವ ಸರಕುಗಳ ತೂಕವನ್ನು ವೇ ಬ್ರಿಡ್ಜ್‍ಗಳ ಮೂಲಕ ಖಚಿತಪಡಿಸಿಕೊಳ್ಳುವ ಕೆಲಸವಾಗಬೇಕು.ಆದರೆ ವೇ ಬ್ರಿಡ್ಜ್ ಇಲ್ಲದೆ ತೊಂದರೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಅದನ್ನು ಸರಿಪಡಿಸಿ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ