ಒಂದಷ್ಟು ಅಪರಾಧ ಸುದ್ದಿಗಳು

Crime news

19-02-2020

ವೇಶ್ಯಾವಾಟಿಕೆ ದಂಧೆ: ಆರೋಪಿಯ ಬಂಧನ

ಬೆಂಗಳೂರು, ಫೆ.19: ಕೋರಮಂಗಲ ಬಳಿಯ ಸಲೂನ್ ಹಾಗೂ ಸ್ಪಾ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಪರಾರಿಯಾಗಿರುವ ಪ್ರಮುಖ ಆರೋಪಿ ಸೇರಿ ಇಬ್ಬರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಕೋರಮಂಗಲದ ಮಲಾಲಿ ಘೋಷ್ (೩೩) ಬಂಧಿತ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಅರವಿಂದ್ ಹಾಗೂ ರೂಪೇಶ್ ಅಲಿಯಾಸ್ ಸಿದ್ದಾರ್ಥ್‌ಗಾಗಿ ಶೋಧ ನಡೆಸಲಾಗಿದೆ. ಸ್ಪಾದಲ್ಲಿದ್ದ ಆರು ಮಂದಿ ಯುವತಿಯರನ್ನು ರಕ್ಷಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

=====================================================================

ಪರಾರಿಯಾದ ಪ್ರೇಮಿಗಳು

ಬೆಂಗಳೂರು, ಫೆ.19: ಸರಸ ಸಲ್ಲಾಪದಲ್ಲಿದ್ದ ತಮ್ಮ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ವ್ಯಕ್ತಿಗೆ ಕಲ್ಲಿನಿಂದ ಹೊಡೆದು ಪರಾರಿಯಾದ ಪ್ರೇಮಿಗಳ ಪತ್ತೆಗಾಗಿ ಕಬ್ಬನ್‌ಪಾರ್ಕ್ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕಲ್ಲೇಟಿನಿಂದ ಗಾಯಗೊಂಡಿರುವ ಸುಧೀರ್ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮಧ್ಯಾಹ್ನ ಕಬ್ಬನ್ ಪಾರ್ಕ್‌ನಲ್ಲಿ ಇಬ್ಬರು ಪ್ರೇಮಿಗಳು ಏಕಾಂತದಲ್ಲಿ ಇರುವುದನ್ನು ಗಮನಿಸಿದ ಸುಧೀರ್ ಮೊಬೈಲ್‌ನಲ್ಲಿ ಅವರ ಒಡನಾಟವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ಪ್ರೇಮಿಗಳು ಮೊಬೈಲ್ ತೋರಿಸುವಂತೆ ಕೇಳಿದಾಗ ನಿರಾಕರಿಸಿದ ಸುಧೀರ್‍ಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ.

ತಲೆಗೆ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗಿದ್ದರಿಂದ ಸುಧೀರ್ ಕೆಳಗೆ ಬಿದ್ದಿದ್ದು, ಕಬ್ಬನ್ ಪಾರ್ಕ್ ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
=====================================================================
ಆರೋಪಿಯ ಬಂಧನ

ಬೆಂಗಳೂರು, ಫೆ.19: ಬಾರ್‌ವೊಂದರಲ್ಲಿ ಮದ್ಯ ಸೇವಿಸಬೇಕು ತೊಂದರೆ ಕೊಡಬೇಡ ಎಂದಿದ್ದಕ್ಕೆ ಯುವಕನೊಬ್ಬನನ್ನು ಚಾಕುವಿಂದ ಚುಚ್ಚಿದ್ದ ಆರೋಪಿಯನ್ನು ಅಶೋಕ್‌ನಗರ ಪೊಲೀಸರು ಬಂಧಿಸಿದ್ದಾರೆ.

ಕಳೆದ ಭಾನುವಾರ ರಾತ್ರಿ ನೀಲಸಂದ್ರದ ಬಾರ್‌ವೊಂದರಲ್ಲಿ ಕಿರಣ್ ಎಂಬಾತ ಕುಡಿಯುತ್ತಾ ಕುಳಿತಿದ್ದ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಸೋಮು ಎಂಬಾತ ಜೋರು ಜೋರಾಗಿ ಮಾತಾಡುತ್ತಾ ಬಾರಿನ ತುಂಬೆಲ್ಲಾ ಓಡಾಡಲಾರಂಭಿಸಿದ.
ಇದರಿಂದ ತನಗೆ ತೊಂದರೆಯಾಗುತ್ತಿದೆ ಸುಮ್ಮನಿರು. ಬಾರ್ ಬರುವುದು ನಿರಾಳವಾಗಿ ಮದ್ಯಪಾನ ಮಾಡಲು ನಿನ್ನ ಗಲಾಟೆ ಕೇಳುವುದಕ್ಕಲ್ಲ ಎಂದು ಬೈದ.

ಇದರಿಂದ ಸಿಟ್ಟಿಗೆದ್ದ ಸೋಮು ಚಾಕುವಿನಿಂದ ಕಿರಣ್‌ಮೇಲೆ ಹಲ್ಲೆ ಮಾಡಿದ್ದ. ಹಲ್ಲೆಯಿಂದ ಕಿರಣ್‌ನ ಹೊಟ್ಟೆಯ ಎರಡೂ ಪಕ್ಕೆಗಳಿಗೆ ಗಾಯಗಳಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ತಳ್ಳಿದ್ದಾರೆ


ಸಂಬಂಧಿತ ಟ್ಯಾಗ್ಗಳು

Koramangala Scandal Malali Ghosh Arrest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ