ಸಿಕ್ಕಿಬಿದ್ದ ಖದೀಮ

Culprit arrested

18-02-2020

ಬೆಂಗಳೂರು, ಫೆ.೧೮: ಕೋಲ್ಕತಾ ಹಾಗೂ ಬೆಂಗಳೂರಿನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಎರಡು ಆಧಾರ್ ಕಾರ್ಡ್ ಮಾಡಿಸಿಕೊಂಡು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಕೊಲ್ಕತಾದ ಖದೀಮನೊಬ್ಬ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಶೈಲೇಶ್ ಕೊತಾರಿ (೪೮) ಎಂಬಾತನಿಂದ ೨ ಲಕ್ಷ ನಗದು, ೧೦ ಲಕ್ಷ ಚಿನ್ನಾಭರಣ ಹಾಗೂ ಎರಡು ಆಧಾರ್‌ ಕಾರ್ಡ್‌ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಆರೋಪಿಯು ಗೌರೀಶ್ ಕುಮಾರ್ ಗಾಗಾ ಎಂಬ ಹೆಸರಲ್ಲಿ ಕೊಲ್ಕತಾದ ನ್ಯೂ ಆಲಿಪೋರ್‌ನ ಟೋಲಿಗಂಜ್‍ ರಸ್ತೆಯಲ್ಲಿ ವಾಸಿಸುವುದಾಗಿ ಆಧಾರ್‌ಕಾರ್ಡ್ ಪಡೆದಿದ್ದರೆ, ನಗರದ ಶಿವಾಜಿನಗರದಲ್ಲಿನ ಸೆಪ್ಪಿಂಗ್ಸ್ ರಸ್ತೆಯಲ್ಲಿ ವಾಸಿಸುತ್ತಿರುವ ಶೈಲೇಶ್ ಕೊತಾರಿ ಎಂಬ ಹೆಸರಿನಲ್ಲಿ ಮತ್ತೊಂದು ಆಧಾರ್‌ಕಾರ್ಡ್ ಪಡೆದು ವಂಚನೆ ನಡೆಸುತ್ತಿರುವುದು ಪತ್ತೆಯಾಗಿದೆ.

ಆರೋಪಿಯು ಎಂಬಿಬಿಎಸ್, ಇಂಜಿನಿಯರಿಂಗ್, ಬಿ-ಟೆಕ್, ಎಂಬಿಎ, ಎಂಡಿ, ಎಂಡಿಎಸ್, ಎಂಎಸ್ ಸೀಟುಗಳಿಗಾಗಿ ಸಂಪರ್ಕಿಸುವಂತೆ ಪ್ರತಿಷ್ಠಿತ ಪತ್ರಿಕೆಗಳಲ್ಲಿ ತನ್ನ ಮೊಬೈಲ್ ನಂಬರ್‌ ಹಾಕಿ ಜಾಹೀರಾತು ನೀಡುತ್ತಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಜಾಹೀರಾತು ನೋಡಿದ ಬೂಬೇಶ್ ಭಾರತಿ ಎಂಬುವವರು ಆರೋಪಿಯನ್ನು ಸಂಪರ್ಕಿಸಿದಾಗ ಚೆನ್ನೈನ ಭಾರತ್ ವಿಶ್ವವಿದ್ಯಾಲಯದಲ್ಲಿ ಬಿ-ಟೆಕ್, ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಂಬಿಸಿ ೧ ಲಕ್ಷ ೭೦ ಸಾವಿರ ಹಣ ಪಡೆದು ಸೀಟನ್ನು ಕೊಡಿಸದೆ ಮೋಸ ಮಾಡಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ವಿಶೇಷ ವಿಚಾರಣಾ ದಳದ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಆರೋಪಿಯು ೨ ಆಧಾರ್‌ ಕಾರ್ಡ್‌ಗಳನ್ನು ಹೊಂದಿ ಬೇರೆ ಬೇರೆ ರಾಜ್ಯಗಳಲ್ಲಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟುಗಳನ್ನು ಕೊಡಿಸುವುದಾಗಿ ವಂಚನೆ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾನೆ.

ಆರೋಪಿಯಿಂದ ವಂಚನೆಗೊಳಗಾದವರು ಸಿಸಿಬಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Culprit arrested Dual Aaadhar Card cheater arrested Investigation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ