ಸದನದಲ್ಲಿ ಕದನ ಕುತೂಹಲ!

Uproar in Lower House

18-02-2020

ಬೆಂಗಳೂರು, ಫೆ. 18: “ಪಾಕಿಸ್ತಾನದ ಉಗ್ರ ಮಸೂದ್ ಅಜರ್‍ನನ್ನು ಕಂದಹಾರ್‍ಗೆ ಬಿಟ್ಟು ಬಂದವರು ಯಾರು? ನೀವು ನಮಗೆ ದೇಶಪ್ರೇಮದ ಬಗ್ಗೆ ಪಾಠ ಮಾಡುತ್ತೀರಾ?” ಎಂದು ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

“ನಿಮ್ಮ ಪ್ರಧಾನಿ ಲಾಹೋರ್‍ಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ. ನೀವು ನಮಗೆ ದೇಶಪ್ರೇಮ, ಭಾರತ ಮಾತೆಯ ಬಗ್ಗೆ ಪಾಠ ಮಾಡುತ್ತೀರಾ” ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡುತ್ತಿರುವವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸಚಿವರು ಮಧ್ಯ ಪ್ರವೇಶಿಸಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ಉಲ್ಲಂಘಿಸಿರುವುದನ್ನು ಕೆಣಕಿದರು. ಅಗ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೀಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶಾದ್ಯಂತ ಸಿಎಎ, ಎನ್‍ಆರ್‍ಸಿ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದು, ಒಂದು ವರ್ಗದ ಜನ ಇದನ್ನು ವಿರೋಧಿಸುತ್ತಿಲ್ಲ. ಎಲ್ಲ ವರ್ಗದ, ಎಲ್ಲ ಕ್ಷೇತ್ರಗಳ ಜನರೂ ಸಿಎಎ ವಿರೋಧ ಮಾಡುತ್ತಿದ್ದಾರೆ. ಕೆಲ ಐಎಎಸ್ ಅಧಿಕಾರಿಗಳು ಸಹ ರಾಜೀನಾಮೆ‌ ಕೊಟ್ಟಿದ್ದಾರೆ ಎಂದರು.
ಆಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯಾವ ಅಧಿಕಾರಿ ರಾಜೀನಾಮೆ ಕೊಟ್ಟಿದ್ದಾರೆ, ಮಾಹಿತಿ ಕೊಡಿ ಎಂದರು. ಇದಕ್ಕೆ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ಕೊಡುತ್ತೇನೆ. ಸ್ವಲ್ಪ ತಾಳ್ಮೆಯಿಂದ ವರ್ತಿಸಿ ಎಂದು ಗೃಹ ಸಚಿವರಿಗೆ ಕಿವಿಮಾತು ಹೇಳಿದರು.

ವಾಗ್ವಾದ ಹೀಗೇ ಮುಂದುವರಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಸ್ಥಿತಿಯನ್ನು ನಿಯಂತ್ರಣ ತಂದರು.


ಸಂಬಂಧಿತ ಟ್ಯಾಗ್ಗಳು

Vidhana Sabha Dinesh Gundurao Priyank Kharge Siddaramaiah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ