ಸಚಿವ ಸ್ಥಾನ ಉಳಿಸಿಕೊಂಡ ಸವದಿ

Savadi elected

17-02-2020

ಬೆಂಗಳೂರು, ಫೆ.17: ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಇಂದು ನಡೆದ ಒಂದು ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿಲ್‍ಕುಮಾರ್ ಈಗಾಗಲೇ ಸ್ಪರ್ಧೆಯಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಹೀಗಾಗಿ ಇಂದು ಕೇವಲ ನಾಮ್‍-ಕೆ-ವಾಸ್ತೆ ಚುನಾವಣೆ ನಡೆಯಿತು.

ಬೆಳಗ್ಗೆ 8.30ಕ್ಕೆ ವಿಧಾನಸೌಧದ ಮೊದಲ ಮಹಡಿಯ ಕೊಠಡಿ 106ರಲ್ಲಿ ನಡೆದ ಮತದಾನದಲ್ಲಿ ಬಿಜೆಪಿಯ ಎಲ್ಲ ಸಚಿವರು, ಶಾಸಕರು ಸೇರಿದಂತೆ ಒಟ್ಟು 117 ಮಂದಿ ಜತೆಗೆ ಪಕ್ಷೇತರ ಶಾಸಕರಾದ ಅಬಕಾರಿ ಸಚಿವ ಎಚ್.ನಾಗೇಶ್ ಮತ್ತು ಬಿಎಸ್‍ಪಿಯ ಎನ್.ಮಹೇಶ್ ಕೂಡ ಲಕ್ಷ್ಮಣ್ ಸವದಿ ಪರ ಮತ ಚಲಾಯಿಸಿದ್ದಾರೆ.

ಮತದಾನ ಆರಂಭಗೊಂಡ ತಕ್ಷಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್. ಅಶ್ವತ್ಥನಾರಾಯಣ, ಲಕ್ಷ್ಮಣ್ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ವಿ.ಸೋಮಣ್ಣ, ಆರ್.ಅಶೋಕ್ ಸೇರಿದಂತೆ ಶಾಸಕರೆಲ್ಲರೂ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಸ್ಪರ್ಧಾ ಕಣದಲ್ಲಿ ತಾವೊಬ್ಬರೇ ಇದ್ದ ಕಾರಣ ಲಕ್ಷ್ಮಣ್ ಸವದಿ ಅವರೂ ತುಸು ನಿರಾಳರಾದಂತೆ ಕಂಡುಬಂದರು. ಇನ್ನು ಪಕ್ಷೇತರ ಅಭ್ಯರ್ಥಿ ಅನಿಲ್‍ಕುಮಾರ್ ನಿವೃತ್ತಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಯಾವುದೇ ಶಾಸಕರು ಮತ ಚಲಾಯಿಸುವ ಗೊಡವೆಗೆ ಹೋಗಲಿಲ್ಲ. ಬಹುತೇಕ ಎಲ್ಲಾ ಶಾಸಕರು ಮತದಾನದಿಂದ ದೂರ ಉಳಿದಿದ್ದರು.

ಕಾಂಗ್ರೆಸ್‍ನ ರಿಜ್ವಾನ್ ಅರ್ಷದ್ ಅವರು ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಈ ಸ್ಥಾನಕ್ಕೆ ಬಿಜೆಪಿಯಿಂದ ಲಕ್ಷ್ಮಣ್ ಸವದಿ ಕಣಕ್ಕಿಳಿದಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಪರಾಭವಗೊಂಡಿದ್ದರು.

ಸಮ್ಮಿಶ್ರ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಚ್ಚರಿ ಬೆಳವಣಿಗೆ ಎಂಬಂತೆ ಲಕ್ಷ್ಮಣ್ ಸವದಿ ಸಂಪುಟಕ್ಕೆ ಸೇರ್ಪಡೆಯಾಗಿ ಉಪಮುಖ್ಯಮಂತ್ರಿಯೂ ಆಗಿದ್ದರು. ನಿಯಮಗಳ ಪ್ರಕಾರ ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಇಲ್ಲವೆ, ವಿಧಾನಪರಿಷತ್‍ಗೆ ಆರು ತಿಂಗಳೊಳಗೆ ಯಾವುದಾದರೂ ಒಂದು ಸದನದಿಂದ ಆಯ್ಕೆಯಾಗಲೇಬೇಕು. ಇಲ್ಲದಿದ್ದರೆ ಅವರು ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಲಕ್ಷ್ಮಣ್ ಸವದಿ ಇದೇ ತಿಂಗಳ ಅಂತ್ಯದೊಳಗೆ ಆಯ್ಕೆಯಾಗಬೇಕಿತ್ತು. ಇದೀಗ ವಿಧಾನಪರಿಷತ್‍ನಿಂದ ಆಯ್ಕೆಯಾಗಿರುವ ಕಾರಣ ಅವರ ಸ್ಥಾನಕ್ಕೆ ಎದುರಾಗಿದ್ದ ತಡೆಗೋಡೆ ನಿವಾರಣೆಯಾದಂತಾಗಿದೆ.


ಸಂಬಂಧಿತ ಟ್ಯಾಗ್ಗಳು

Lakshman savadi Election Vidhana Parishat Deputy CM


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ