ನೇಕಾರರ ಸರ್ವತೋಮುಖ ಅಭಿವೃದ್ಧಿಗೆ ಕ್ರಮ: ಗೋಪಾಲಯ್ಯ

Weavers welfare needed

17-02-2020

ಬೆಂಗಳೂರು,ಫೆ.೧೫: ಉತ್ತರ ಕರ್ನಾಟಕದ ನೇಕಾರರ ಬದುಕು ಶೋಚನೀಯವಾಗಿದೆ. ರಾಜ್ಯದ ನೇಕಾರರ ಸರ್ವತೋಮುಖ ಅಭಿವೃದ್ಧಿಗೆಂದು ನೇಕಾರ ನಿಗಮ ಸ್ಥಾಪಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಆಶ್ವಾಸನೆ ನೀಡಿದರು.

ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ನೇಕಾರ ಮಹಾಸಭಾ ವತಿಯಿಂದ ವೃಷಭಾವತಿ ನಗರದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, “ನೇಕಾರರದ್ದು ಶ್ರಮದಿಂದ ಕೂಡಿದ ಬದುಕು. ನಾನೇನಾದರೂ ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದರೆ ಅದರಲ್ಲಿ ನೇಕಾರರ ಪಾತ್ರ ಅತ್ಯಂತ ನಿರ್ಣಾಯಕವಾದುದು” ಎಂದು ನೇಕಾರ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಉಪಮೇಯರ್‍ ಎಸ್‍. ಹರೀಶ್‍, “ಮನುಷ್ಯನಿಗೆ ಅನ್ನ ಎಷ್ಟು ಮುಖ್ಯವೋ ಮಾನವೂ ಅಷ್ಟೇ ಮುಖ್ಯ. ಅಂಥ ಮಾನ ಮುಚ್ಚುವ ಕಾಯಕದಲ್ಲಿ ತೊಡಗಿರುವ ನೇಕಾರರ ಅಭಿವೃದ್ಧಿ ಅವಶ್ಯಕವಾಗಿದೆ. ನೇಕಾರ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಅರಿವು ಹೆಚ್ಚುತ್ತಿರುವ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ ಜಾಗ ಒದಗಿಸಿಕೊಡಬೇಕು” ಎಂದು ಸಚಿವರಲ್ಲಿ ಮನವಿ ಮಾಡಿದರು.

ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು ಆಸಕ್ತಿ ಹೊಂದಿದ್ದು, ಮುಂದಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಒದಗುವ ವಿಶ್ವಾಸ ತಮಗಿದೆ ಎಂದರು.

ಮಹಾಸಭಾ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜವಳಿ ನೀತಿಯ ಪ್ರಯೋಜನಗಳು ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಪ್ರಯೋಜನ ಸಿಗುತ್ತಿಲ್ಲ. ಈ ನೀತಿಯಿಂದ ಎಲ್ಲರಿಗೂ ಅನುಕೂಲ ಮಾಡಿಕೊಡಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Weavers K. Gopalaiah Welfare Yediyurappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ