ಉಗ್ರಹೋರಾಟ ನಡೆಸಲಾಗುವುದು: ಸಿದ್ದರಾಮಯ್ಯ

Siddaramaiah warns

17-02-2020

ಬೆಂಗಳೂರು, ಫೆ. ೧೫: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಮಾಡಲೆಂದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಮಾತನಾಡಿರುವವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿರುವುದನ್ನು ರಾಜ್ಯ ಸರ್ಕಾರ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಪ್ರತಿಭಟಿಸಿ ನಗರದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಇಂಥ ದುರ್ಬಳಕೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ; ಕಾಂಗ್ರೆಸ್‍ ಪಕ್ಷ ಇದನ್ನೆಲ್ಲ ನೋಡಿಕೊಂಡು ಕೈಕಟ್ಟಿ ಸುಮ್ಮನೆ ಕುಳಿತುಕೊಂಡಿದೆ ಎಂದು ಭಾವಿಸಿದರೆ ಅದು ನಿಮ್ಮ ಭ್ರಮೆ” ಎಂದು ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹಾಗೂ ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ವಿರೋಧಿಸಲು ದೊಡ್ಡ ಮಟ್ಟದ ಆಂದೋಲನ ನಡೆಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಸಿದ್ದರಾಮಯ್ಯ, ಬೀದರ್‌ನ ಶಾಲೆಯಲ್ಲಿ ಸಿಎಎ ವಿರುದ್ಧವಾಗಿ ನಾಟಕ ಮಾಡಿದರೆ, ಅದು ದೇಶದ್ರೋಹದ ಕೆಲಸವೇ? ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವ, ಸಂವಿಧಾನವನ್ನು ವಿರೋಧಿಸುವವರೇ ನಿಜವಾದ ದೇಶದ್ರೋಹಿಗಳು ಎಂದ ಅವರು, ದೇಶದ್ರೋಹದ ಕೆಲಸ ಮಾಡಿಲ್ಲದವರನ್ನು ಜೈಲಿಗೆ ಅಟ್ಟುವುದು ನಾಚೀಕೆಗೆಡಿನ ಕೆಲಸ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್, ವಿ.ಎಸ್. ಉಗ್ರಪ್ಪ, ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ಎಚ್.ಎಂ. ರೇವಣ್ಣ, ನಾರಾಯಣಸ್ವಾಮಿ, ಸೇರಿದಂತೆ ಹಲವರು ನಾಯಕರು ಉಪಸ್ಥಿತರಿದ್ದರು.
 


ಸಂಬಂಧಿತ ಟ್ಯಾಗ್ಗಳು

CAA Siddaramaiah NRC Yediyurappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ