ಆರೋಪಿಗಳ ಬಂಧನ

Culprits arrested

17-02-2020

ಬೆಂಗಳೂರು,ಫೆ.೧೫: ಅಕ್ಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ರೌಡಿ ಪ್ರಭಾಕರ ಅಲಿಯಾಸ್ ಸಕ್ಕರೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ತಮ್ಮ ಸೇರಿ ಆರು ಮಂದಿ ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಕ್ಷಿಗಾರ್ಡನ್‌ನ ದೀಪಕ್ ಅಲಿಯಾಸ್ ಗುಂಡು (೨೨), ಕಾಟನ್‌ಪೇಟೆಯ ಜಾಲಿ ಮೊಹಲ್ಲದ ಶಿವ ಅಲಿಯಾಸ್ ಶರತ್ (೨೮), ಅಜಯ (೨೨), ವಿನೋದ್ (೨೨), ಸುನಿಲ್ (೨೨) ಹಾಗೂ ಮಾಲಾ (೪೩) ಬಂಧಿತ ಆರೋಪಿಗಳಾಗಿದ್ದಾರೆ.
ಕಾಟನ್‌ಪೇಟೆ ಬಳಿ ಕಳೆದ ಫೆ. ೧೧ರ ರಾತ್ರಿ ೭.೪೦ರ ವೇಳೆ ರೌಡಿ ಪ್ರಭಾಕರ ಅಲಿಯಾಸ್ ಸಕ್ಕರೆಯನ್ನು ಆರೋಪಿಗಳು ಮಚ್ಚು-ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಕಾಟನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.
ಕೊಲೆಯಾದ ರೌಡಿ ಪ್ರಭಾಕರ ಆರೋಪಿ ದೀಪಕ್ ಅವರ ಅಕ್ಕ ದೀಪಾಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಅಲ್ಲದೆ ಅವರ ತಾಯಿ ನಿರ್ಮಾಣ ಮಾಡುತ್ತಿದ್ದ ಮನೆಯನ್ನು ಪೂರ್ಣಗೊಳಿಸಲು ನನಗೆ ಹಣ ಕೊಡಬೇಕು. ಇಲ್ಲದಿದ್ದರೆ ಬಿಡುವುದಿಲ್ಲ. ನಾನು ಕೊಲೆಯತ್ನದಲ್ಲಿ ಜೈಲು ಸೇರಲು ದೀಪಕ್ ಕಾರಣನಾಗಿದ್ದಾನೆ ಎಂದು ಕಿರುಕುಳ ನೀಡಿ ೪೦ ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಇದರಿಂದ ಆಕ್ರೋಶಗೊಂಡ ದೀಪಕ್, ಆರು ಮಂದಿಯ ಜತೆ ಸೇರಿ ಸಂಚು ರೂಪಿಸಿ ರೌಡಿ ಪ್ರಭಾಕರನನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದವರು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ