51 ಪ್ರಕರಣಗಳನ್ನು ಬೇಧಿಸಿದ ಪೊಲೀಸರಿಂದ 74 ಲಕ್ಷ ಮೌಲ್ಯದ ವಸ್ತುಗಳ ವಶ !

Kannada News

13-06-2017

ಬೆಂಗಳೂರು:- ಇರಾನಿ ಗ್ಯಾಂಗ್‍ನ ಅಂತರಾಜ್ಯ ಸರಗಳ್ಳರು, ಐನಾತಿ ಲ್ಯಾಪ್‍ಟಾಪ್‍ಕಳ್ಳರು ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು 51 ಪ್ರಕರಣಗಳನ್ನು ಬೇಧಿಸಿ 74 ಲಕ್ಷ 53 ಸಾವಿರ ಮೌಲ್ಯದ ಚಿನ್ನ,ಬೆಳ್ಳಿ,ಡ್ರೋಣ್ ಕ್ಯಾಮಾರ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಾಲಹಳ್ಳಿ ಪೊಲೀಸರು ಬ್ಲಾಕ್ ಪಲ್ಸರ್ ಬೈಕ್‍ನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಒಂಟಿ ಮಹಿಳೆಯರ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ ಇರಾನಿ ಗ್ಯಾಂಗ್ ನ ಶಹೆನ್ ಶಾ ಅಲಿಯಾಸ್ ಲಾಲು (28) ಹಾಗೂ ಮೊಹ್ಮದ್ ಅಲಿಯಾಸ್ ಕುಟ್ಟಿ (32)ನನ್ನು ಬಂಧಿಸಿ 502 ಗ್ರಾಂ ತೂಕದ 15 ಮಾಂಗಲ್ಯ ಸರಗಳು, ಪಲ್ಸರ್ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬೈಕ್‍ ಗಳನ್ನು ಕಳವು ಮಾಡಿ ನಂಬರ್ ಪ್ಲೇಟ್ ತೆಗೆದು ನಗರದ ವಿವಿಧೆಡೆ ಸುತ್ತಾಡಿ ಒಂಟಿಯಾದ ಮಹಿಳೆಯರು, ವೃದ್ಧೆಯರನ್ನು ಗುರುತಿಸಿ ಸರಗಳ್ಳತನ ಮಾಡುತ್ತಿದ್ದು, ಇವರ ಬಂಧನದಿಂದ ಸಂಜಯನಗರ, ಸುಬ್ರಹ್ಮಣ್ಯ ನಗರ, ಮಲ್ಲೇಶ್ವರ, ಮಹಾಲಕ್ಷ್ಮಿಪುರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ 15 ಸರಗಳವು ಪ್ರಕರಣಗಳು ಪತ್ತೆಯಾಗಿವೆ.

ಸಂಜಯ್ ನಗರ ಪೊಲೀಸರು ಕೊಡಿಗೇಹಳ್ಳಿಯ ಮೊಬಾರಕ್ ಅಲಿಯಾಸ್ ಮುಟ್ಟಾಳ (22), ಅಜಿತ್ ಅಲಿಯಾಸ್ ಕೋತಿ (20) ಎಂಬ ಸರಗಳ್ಳರನ್ನು ಬಂಧಿಸಿ 2 ಲಕ್ಷ 20 ಸಾವಿರ ಮೌಲ್ಯದ ಚಿನ್ನದ ಸರಗಳು, ಬೈಕ್‍ನ್ನು ವಶಪಡಿಸಿಕೊಂಡು 3 ಸರ ಅಪಹರಣ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ಸಂಜಯ್ ನಗರದ ಪೊಲೀಸ್ ಕಾಲೋನಿ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುವಾಗ ಅವರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಸಂಜಯ್ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಲ್ಲೇಶ್ವರಂ ಪೊಲೀಸರು ಡ್ರೋನ್ ಕ್ಯಾಮೆರಾ ಕಳವು ಮಾಡಿದ್ದ ಲಗ್ಗೆರೆಯ ಕುಮಾರ್ ಅಕ್ಷಯ್ (24), ಪಾವಗಡದ ನಲ್ಲಿಗಾನಹಳ್ಳಿಯ ಬಾಲಾಜಿ ನಾಯ್ಕ (24) ಎಂಬುವರನ್ನು ಬಂಧಿಸಿ ಕೆಟಿಎಂ ಡ್ಯೂಕ್ ಬೈಕ್, ಡ್ರೋಣ್ ಕ್ಯಾಮೆರಾ ಸೇರಿದಂತೆ 26,63, 631 ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಕೆಆರ್ ಪುರ, ಮೈಕೋ ಲೇಔಟ್, ಜೆಸಿನಗರ, ಮಲ್ಲೇಶ್ವರಂ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ತಲಾ 2 ಸೇರಿ 14 ಪ್ರಕರಣಗಳು ಪತ್ತೆಯಾಗಿವೆ.

ಮಲ್ಲೇಶ್ವರಂನ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ತಮಿಳುನಾಡಿನ ಹರೀಶ್ ಅಲಿಯಾಸ್ ಹರಿಹರನ್ (23) ಎಂಬಾತನನ್ನು ಬಂಧಿಸಿ 4.50 ಲಕ್ಷ ಮೌಲ್ಯದ 9.5 ಕೆಜಿ ಬೆಳ್ಳಿಯ ಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ದೇವಸ್ಥಾನದಲ್ಲಿ ಬೆಳ್ಳಿ ಆಭರಣಗಳ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದು, ಅವನ ಬಳಿ ಇದ್ದ ಬೆಳ್ಳಿ ಸಾಮಾನುಗಳನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಬೆಳ್ಳಿಯ ಪಟ್ಟಿಗಳು ಪತ್ತೆಯಾಗಿವೆ.

ಆರ್.ಟಿ ನಗರದ ಲಕ್ಷ್ಮಿವೆಂಕಟೇಶ್ವರ ಕಂಪ್ಯೂಟರ್ ಶಾಲೆಗೆ 200 ಮಾನಿಟರ್ಗಳು, ಸಿಪಿಐಗಳು ಬೇಕಾಗಿರುವುದಾಗಿ ಹಳೆ ಲ್ಯಾಪ್ಟಾಪ್, ಸಿಪಿಯುಗಳನ್ನು ಮಾರಾಟ ಮಾಡುತ್ತಿದ್ದ ಮಾಲೀಕರನ್ನು ನಂಬಿಸಿ ಅವುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ ಕಮ್ಮನಹಳ್ಳಿಯ ಸೈಫ್ ಪಾಷ ಅಲಿಯಾಸ್ ಪಾಷ (22), ಜೆಜೆ ನಗರದ ಸೈಯದ್ ಜಾವೇದ್ ಅಲಿಯಾಸ್ ಜಾಬು (28)ನನ್ನು ಬಂಧಿಸಿ 14.45, 435 ರೂ. ಮೌಲ್ಯದ 60 ವಿವಿಧ ಕಂಪನಿಯ ಲ್ಯಾಪ್ ಟ್ಯಾಪ್, 60 ಹೆಚ್ಪಿ ಕಂಪನಿಗಳ ಮಾನಿಟರ್ಗಳು, ಡೆಲ್ ಕಂಪನಿಯ 70 ಸಿಪಿಯುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಲದೇವನಹಳ್ಳಿ ಪೊಲೀಸರು ದ್ವಿಚಕ್ರ ಕಳವು ಮಾಡುತ್ತಿದ್ದ ಬಾಗಲಕುಂಟೆಯ ರಾಹುಲ್ (19), ಅಶೋಕ್ ಕುಮಾರ್ (25) ನನ್ನು ಬಂಧಿಸಿ 3 ಲಕ್ಷ 10 ಸಾವಿರ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಸಿಂಗಪುರದ ಲಕ್ಷ್ಮಣ ಎಂಬ ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ 4 ಲಕ್ಷ 50 ಸಾವಿರ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್.ಟಿ ನಗರ ಪೊಲೀಸರು ಮನೆ ಕಳವು ಮಾಡುತ್ತಿದ್ದ ಸುರೇಶ ಅಲಿಯಾಸ್ ದೇವ (27)ನನ್ನು ಬಂಧಿಸಿ 3 ಲಕ್ಷ 64 ಸಾವಿರ ಮೌಲ್ಯದ 120 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಡಿಜೆ ಹಳ್ಳಿಯ ಪೊಲೀಸರು ಠಾಣೆಯ 1 ಹಗಲು ಕಳ್ಳತನವನ್ನು ಬೇಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 692 ಗ್ರಾಂ. ಚಿನ್ನಾಭರಣ, 9.5 ಕೆಜಿ ಬೆಳ್ಳಿ, ಡ್ರೋನ್ ಕ್ಯಾಮೆರಾ, 60 ಲ್ಯಾಪ್‍ಟಾಪ್‍ಗಳು, 60 ಎಸ್ಪಿ ಮಾನಿಟರ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸರು ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ