ಅಂದು ‘ಐ ಲವ್ ಯೂ’, ಇಂದು ‘ಏಕ್ ಲವ್ ಯಾ’!

Ek Love Yaa

15-02-2020

ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ಓರ್ವ ಪ್ರತಿಭಾವಂತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ‘ಬುಲ್‍ ಬುಲ್‍’, ‘ಅಂಬರೀಶ’, ‘ರಥಾವರ’, ‘ರನ್ನ’, ‘ನಟಸಾರ್ವಭೌಮ’, ‘ಸೀತಾರಾಮ ಕಲ್ಯಾಣ’ ಮೊದಲಾದ ಚಿತ್ರಗಳಲ್ಲಿನ ಅವರ ಚುರುಕು ಅಭಿನಯವನ್ನು ಮೆಚ್ಚದವರಿಲ್ಲ.

ರಚಿತಾ ಕಿರುತೆರೆಯ ಪ್ರಾಡಕ್ಟ್‍. ‘ಬೆಂಕಿಯಲ್ಲಿ ಅರಳಿದ ಹೂವು’, ‘ಅರಸಿ’ ಎಂಬ ದೈನಿಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಇವರು, ‘ಬುಲ್‍ ಬುಲ್‍’ ಚಿತ್ರದಲ್ಲಿ ದರ್ಶನ್‍ ಜತೆಯಾಗಿ ನಟಿಸಿದ ನಂತರ ಹಿಂತಿರುಗಿ ನೋಡಿದ್ದಿಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಸಾಗಿದ ರಚಿತಾ, ಉಪೇಂದ್ರ ಅಭಿನಯದ ‘ಐ ಲವ್‍ ಯೂ’ ಚಿತ್ರದಿಂದ ಸುದ್ದಿಗೆ ಹೆಚ್ಚು ಗ್ರಾಸವಾದರು ಎನ್ನಬೇಕು.

‘ಐ ಲವ್‍ ಯೂ’ ಚಿತ್ರದ ಗೀತೆಯೊಂದರಲ್ಲಿ ಅವರು ಮೈಚಳಿ ಬಿಟ್ಟು ಅಭಿನಯಿಸಿದ್ದು, ಆ ಕುರಿತು ಕೆಲ ಚಿತ್ರರಸಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ‘ಇನ್ನು ಮುಂದೆ ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ’ ಎಂದು ರಚಿತಾ ಪ್ರತಿಜ್ಞೆ ಮಾಡಿದ್ದು, ಸದರಿ ಗೀತೆಯ ಚಿತ್ರೀಕರಣ ಕುರಿತಾದ ಸುದ್ದಿಗಳು ವಿವಾದ ಹುಟ್ಟುಹಾಕಿದಾಗ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದು ಇವೆಲ್ಲ ಗೊತ್ತಿರುವಂಥದ್ದೇ. ಈ ಎಲ್ಲ ಅಂಶಗಳು ಚಿತ್ರದ ಪಾಲಿನ ಪಬ್ಲಿಸಿಟಿ ಸರಕಾಗಿ ಪರಿಣಮಿಸಿ ‘ಐ ಲವ್‍ ಯೂ’ ಚಿತ್ರ ಸೂಪರ್‍ ಹಿಟ್‍ ಆಯಿತು ಎನ್ನಿ.

ಈಗ ಇಂಥದೇ ಮತ್ತೊಂದು ಕಾರಣಕ್ಕೆ ರಚಿತಾ ರಾಮ್‍ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಪ್ರೇಮ್‍ ನಿರ್ದೇಶನದ ‘ಏಕ್‍ ಲವ್‍ ಯಾ’ ಚಿತ್ರದಲ್ಲಿ ನಟಿ ರಕ್ಷಿತಾ ಸೋದರ ರಾಣಾ ನಾಯಕನಾಗಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಟೀಸರ್‍ನಲ್ಲಿ ರಾಣಾ ಜತೆ ‘ಲಿಪ್‍ ಲಾಕ್‍’ ಮಾಡಿರುವ ಹಾಗೂ ಬಿಡುಬೀಸಾಗಿ ಸಿಗರೇಟು ‘ದಂ’ ಬಿಡುವ ದೃಶ್ಯಗಳನ್ನು ಕಂಡವರು ದಂಗಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rachita Ram Raana Prem Ek Love Yaa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ