‘ಹಸ್ತಪಕ್ಷ’ದ ಮೇಲೆ ಹರಿಹಾಯ್ದ ಹ್ಯಾರಿಸ್…!

Hastapakshada mele harihaayda Haris

15-02-2020

ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ ‘ಶೂನ್ಯ ಸಂಪಾದನೆ’ಯ ಸಾಧನೆ ಹೊಮ್ಮಿಸಿದ್ದರ ಹಿನ್ನೆಲೆಯಲ್ಲಿ ಆತ್ಮಾವಲೋಕನದ ಮಾತುಗಳು ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್‍.ಎ. ಹ್ಯಾರಿಸ್‍ ಅವರು ಸ್ವಪಕ್ಷದ ಮೇಲೆ ಹರಿಹಾಯ್ದಿದ್ದಾರೆ.

ಈ ಸಂಬಂಧವಾಗಿ ಟ್ವಿಟರ್‍ ಮಾಧ್ಯಮದಲ್ಲಿ ಅಸಮಾಧಾನ ತೋಡಿಕೊಂಡಿರುವ ಅವರು, “ನಾನೊಬ್ಬ ಕಟ್ಟಾ ಕಾಂಗ್ರೆಸ್ಸಿಗ. ಆದರೆ ಹಲವಾರು ಸೋಲುಗಳ ನಡುವೆಯೂ ಕಾಂಗ್ರೆಸ್‍ ಪಕ್ಷ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ಆತಂಕಕಾರಿ. ಪಕ್ಷದಲ್ಲಿ ಪದಾಧಿಕಾರಿಗಳು ಇರುವುದು ಯಾವ ಕೆಲಸಕ್ಕಾಗಿ? ಪಕ್ಷವನ್ನು ಕಟ್ಟುವುದಕ್ಕಾಗಿಯೋ ಅಥವ ಸ್ವಹಿತಾಸಕ್ತಿಗಳಿಗಾಗಿ ಪಕ್ಷವನ್ನು ಬಲಿಕೊಡುವುದಕ್ಕಾಗಿಯೋ?” ಎನ್ನುವ ಮೂಲಕ ಕೈ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಗ್ರಹಿಕೆಗೆ ಪುಷ್ಟಿ ನೀಡಿದ್ದಾರೆ.

ಹ್ಯಾರಿಸ್‍ ಅವರು ಮುಂದುವರಿದು, "ದೆಹಲಿಯಲ್ಲಿ ಹೊಮ್ಮಿದಂಥ ಫಲಿತಾಂಶ ಹಲವಾರು ಬಾರಿ ಬಂದಿದ್ದರೂ ಪಕ್ಷ ಆ ಬಗ್ಗೆ ಯೋಚನೆ ಮಾಡದಿರುವುದು, ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿರುವುದು ಯೋಚಿಸಬೇಕಾದ ವಿಚಾರ. ದೇಶಕ್ಕೆ ಕಾಂಗ್ರೆಸ್‍ ಪಕ್ಷದ ಅನಿವಾರ್ಯತೆ ಇದೆ; ಆದರೆ ಕಾಂಗ್ರೆಸ್‍ ಪಕ್ಷ ಈ ಬಗ್ಗೆ ಚಿಂತಿಸುತ್ತಿಲ್ಲ. ಸೋಲುಗಳು ಪಾಠವಾಗಬೇಕೇ ವಿನಾ ಅಭ್ಯಾಸವಾಗಬಾರದು” ಎಂದು ಕಿಡಿಕಾರಿದ್ದಾರೆ.

ಕೆಪಿಸಿಸಿ ಅಧ್ಯಕ್ಷಗಾದಿಗೆ ಸಂಬಂಧಿಸಿದಂತೆ ಕಾಂಗ್ರೆಸ್‍ ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಹ್ಯಾರಿಸ್‍ ಅವರ ಈ ಟ್ವೀಟ್‍ ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ. ಹ್ಯಾರಿಸ್‍ ಬೇಗುದಿಯನ್ನು ಹೈಕಮಾಂಡ್‍ ಗಂಭೀರವಾಗಿ ಪರಿಗಣಿಸಿ, ಪಕ್ಷದ ಇಮೇಜಿಗೆ ಮತ್ತಷ್ಟು ಧಕ್ಕೆಯಾಗದಂತಿರಲು ನಿರ್ಣಾಯಕ ಫರ್ಮಾನು ಹೊರಡಿಸಲಿದೆಯೇ ಎಂದು ರಾಜಕೀಯಾಸಕ್ತರು ಕಾದುನೋಡುವಂತಾಗಿದೆ.


ಸಂಬಂಧಿತ ಟ್ಯಾಗ್ಗಳು

Haris Congress KPCC ಆಂತರಿಕ ಭಿನ್ನಮತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ