ನಗುವು ಸಹಜಧರ್ಮ, ನಗಿಸುವುದು ಪರಧರ್ಮ

Naguvu sahajadharma, Nagisuvudu Paradharma

14-02-2020

ತ್ಯಾಂಪಣ್ಣನಿಗೆ ತುಂಬಾ ಬೋರ್‍ ಹೊಡೆಯುತ್ತಿತ್ತು. ತನ್ನ ಶಕ್ತ್ಯಾನುಸಾರ ಆಕಳಿಸುತ್ತಿರುವಾಗ ಎದುರಲ್ಲಿ ಬೀದಿನಾಯಿಯೊಂದು ಕಾಣಿಸಿತು. ಏನೋ ತೋಚಿದಂತಾಗಿ ಅದರ ಬಾಲಕ್ಕೆ ಪ್ಲಾಸ್ಟಿಕ್‍ ಪೈಪ್‍ ಒಂದನ್ನು ತೂರಿಸುವ ಪ್ರಯತ್ನದಲ್ಲಿ ತೊಡಗಿದ.

ಪೈಪ್‍ ಒಳಗೆ ಬಾಲವು ಸ್ವಲ್ಪವೇ ತೂರಿಕೊಳ್ಳುತ್ತಿದ್ದಂತೆ ನಾಯಿ ಕೊಡವಿಕೊಳ್ಳುತ್ತಿದ್ದುದರಿಂದ ಯತ್ನದಲ್ಲಿ ಪದೇಪದೇ ವಿಫಲನಾಗುತ್ತಿದ್ದ. ತ್ಯಾಂಪಣ್ಣನ ಹರಸಾಹಸವನ್ನು ನೋಡಿದ ದಾರಿಹೋಕರೊಬ್ಬರು, “ಲೇಯ್‍ ಮಂಗ್ಯಾ, ನಾಯಿಬಾಲ ಯಾವತ್ತಿದ್ರೂ ಡೊಂಕು, ಅದನ್ನ ನೆಟ್ಟಗೆ ಮಾಡೋಕ್ಕಾಗಲ್ಲ ಅಂತ ಗೊತ್ತಿಲ್ವೇನೋ?” ಎಂದು ಛೇಡಿಸಿದರು.

ಆಗ ತ್ಯಾಂಪಣ್ಣ, “ಅದು ನನಗೂ ಗೊತ್ತು ರೀ. ನಾನು ಈ ಪ್ಲಾಸ್ಟಿಕ್‍ ಪೈಪ್‍ ಅನ್ನು ಡೊಂಕು ಮಾಡಲು ಪ್ರಯತ್ನಿಸ್ತಿದ್ದೇನೆ” ಎಂದು ಹಲ್ಲುಬೀರಿದ.

‘ಜ್ಞಾನೋದಯ’ ಮಾಡಿಸಲು ಬಂದ ಆ ದಾರಿಹೋಕರು ‘ಜ್ಞಾನ’ತಪ್ಪಿ ಬಿದ್ದರು!!

===========================================================================

ಮನೆಯಂಗಳದ ಜೋಕಾಲಿಯಲ್ಲಿ ಕೂತ ತ್ಯಾಂಪಣ್ಣ ರೊಮ್ಯಾಂಟಿಕ್‍ ಕಲ್ಪನೆಯಲ್ಲಿ ಜೀಕಿಕೊಳ್ಳುತ್ತಿದ್ದ. ಅವನ ಮುಖದಲ್ಲಿದ್ದ ಮಂದಹಾಸ, ನವಿರುಭಾವನೆ ಇತ್ಯಾದಿಗಳನ್ನು ಗಮನಿಸಿದ ಪತ್ನಿ ತ್ಯಾಂಪಣ್ಣನ ತಲೆಗೂದಲಲ್ಲಿ ನವಿರಾಗಿ ಬೆರಳಾಡಿಸುತ್ತಾ, “ಡಾರ್ಲಿಂಗ್‍, ಪ್ರೀತಿ ನಿಜಕ್ಕೂ ಹುಟ್ಟಿದ್ದು ಎಲ್ಲಿ ಅಂತ ಹೇಳಬಲ್ಲಿರಾ?” ಎಂದು ಕೇಳಿದಳು.

“ವೈ ನಾಟ್‍; ಖಂಡಿತ ಹೇಳಬಲ್ಲೆ. ತುಂಬಾ ಸಿಂಪಲ್‍ ಪ್ರಶ್ನೆ ಇದು” ಅಂದ ತ್ಯಾಂಪಣ್ಣ.

ಕುತೂಹಲಗೊಂಡ ಪತ್ನಿ, “ಹಾಗಾದ್ರೆ ಎಲ್ಲಿ? ಹೇಳಿ ನೋಡೋಣ?” ಅಂದಳು.

ಅದಕ್ಕೆ ತ್ಯಾಂಪಣ್ಣ, “ಅಷ್ಟೂ ಗೊತ್ತಿಲ್ವಾ ಡಿಯರ್‍, ಪ್ರೀತಿ ಹುಟ್ಟಿದ್ದು ಚೀನಾ ದೇಶದಲ್ಲೇ” ಅಂದ.

ಗೊಂದಲಗೊಂಡ ಪತ್ನಿ, “ಅದ್ಹೇಗ್ರಿ ಅಷ್ಟು ನಿಖರವಾಗಿ ಹೇಳ್ತೀರಾ?” ಎಂದಳು.

ನಸುನಕ್ಕ ತ್ಯಾಂಪಣ್ಣ, “ಹೇಗೆ ಅಂದ್ರೆ, ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರೋದಿಲ್ಲ ಕಣೇ..” ಎಂದ.

===========================================================================

ವೈದ್ಯರೊಬ್ಬರು ಬಿಡುವಿನ ವೇಳೆಯಲ್ಲಿ ತಮ್ಮ ಚೇಂಬರ್‍ನಲ್ಲಿ ಹಾಯಾಗಿ ಕಾಲುಚಾಚಿ ಮಲಗಿಕೊಂಡು ಪುಸ್ತಕವೊಂದನ್ನು ಓದುತ್ತಿದ್ದರು. ಅಚಾನಕ್ಕಾಗಿ ಅಲ್ಲಿಗೆ ಪ್ರವೇಶಿಸಿದ ಆಸ್ಪತ್ರೆಯ ಆಡಳಿತ ಮಂಡಳಿಯ ಮುಖ್ಯಸ್ಥರು ನಿಂತನಿಲುವಿಗೇ ಆ ವೈದ್ಯರನ್ನು ಕೆಲಸದಿಂದ ತೆಗೆದುಹಾಕಿದರು.

ರೋಗಿಗಳ ತಪಾಸಣೆ, ಚಿಕಿತ್ಸೆ, ಉಪಚಾರದಲ್ಲಿ ತೊಡಗಿಕೊಂಡಿರುವುದನ್ನು ಬಿಟ್ಟು ತಮ್ಮ ಚೇಂಬರ್‍ನಲ್ಲಿ ಹಾಯಾಗಿ ಕಾಲುಚಾಚಿ ಮಲಗಿಕೊಂಡಿದ್ದಕ್ಕೆ ವೈದ್ಯರಿಗೆ ಈ ಶಿಕ್ಷೆ ಎಂಬುದು ನಿಮ್ಮ ಎಣಿಕೆಯೇ?

ಹಾಗಿದ್ದಲ್ಲಿ ನಿಮ್ಮ ಲೆಕ್ಕಾಚಾರ ತಪ್ಪು!

ಆ ವೈದ್ಯ ಮಾಡಿದ ತಪ್ಪು ಏನು ಗೊತ್ತೇ? ’30 ದಿನಗಳಲ್ಲಿ ವೈದ್ಯರಾಗೋದು ಹೇಗೆ?’ ಎಂಬ ಪುಸ್ತಕವನ್ನು ಓದುತ್ತಿದ್ದುದು..!!

===========================================================================

ಪ್ಯಾರಾಶೂಟ್‍ ಕೊಳ್ಳಲು ಬಂದಿದ್ದ ಒಬ್ಬ ಗಿರಾಕಿ ಮತ್ತು ಅಂಗಡಿ ಮಾಲೀಕನ ನಡುವೆ ನಡೆದ ಸಂಭಾಷಣೆ ಹೀಗಿತ್ತು-

ಗಿರಾಕಿ: ಒಂದು ಒಳ್ಳೆಯ ಪ್ಯಾರಾಶೂಟ್‍ ಕೊಡ್ರೀ...

ಅಂಗಡಿ ಮಾಲೀಕ: ನೋಡಿ ಸರ್‍. ಇದನ್ನ ತಗೊಳ್ಳಿ. ತುಂಬಾ ಒಳ್ಳೇ ಮಾಲು.

ಗಿರಾಕಿ: ಇಲ್ಲಿಂದ ತಗೊಂಡು ಹೋದ್ಮೇಲೆ ಇದು ಕೈ ಕೊಡೋದಿಲ್ಲ ತಾನೇ?

ಅಂಗಡಿ ಮಾಲೀಕ: ಛೇ ಛೇ! ಎಲ್ಲಾದ್ರೂ ಉಂಟೇ? ಖಂಡಿತ ಹಾಗಾಗೋಲ್ಲ ಸರ್‍...

ಗಿರಾಕಿ: ಒಂದು ವೇಳೆ ವಿಮಾನದಿಂದ ನಾನು ಧುಮುಕುವಂಥ ಸಂದರ್ಭ ಎದುರಾಗಿ, ಈ ಪ್ಯಾರಾಶೂಟ್‍ನ ಬಟನ್‍ ಅದುಮಿದರೂ ಅದು ಬಿಚ್ಚಿಕೊಳ್ಳದಿದ್ರೆ ಏನು ಮಾಡೋದು?

ಅಂಗಡಿ ಮಾಲೀಕ: ಡೋಂಟ್‍ ವರಿ ಮಾಡ್ಕೋಬೇಡಿ ಸರ್‍! ತಕ್ಷಣ ನಮ್ಮ ಅಂಗಡಿಗೆ ಬನ್ನಿ, ಬದಲಾಯಿಸಿ ಕೊಡ್ತೀವಿ!!

ಈ ಮುತ್ತಿನಂಥ ಮಾತು ಕೇಳಿಸಿಕೊಂಡ ಗಿರಾಕಿ ಅಂಗಡಿಯಲ್ಲೇ ಪ್ರಜ್ಞೆತಪ್ಪಿ ಬಿದ್ದ!!


ಸಂಬಂಧಿತ ಟ್ಯಾಗ್ಗಳು

Tyaampanna Jokes Time Pass Nagehani


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ