ಸೌತೆಕಾಯಿ ಎಂಬ ವೈದ್ಯರತ್ನ

Soutekaayi emba vaidyaratna

14-02-2020

ಕಡಿಮೆ ಕ್ಯಾಲರಿ ಹಾಗೂ ಹೆಚ್ಚು ನಾರಿನಂಶ ಹೊಂದಿರುವ ಸೌತೆಕಾಯಿ ಅನುಪಮ ವೈದ್ಯಕೀಯ ಗುಣವನ್ನು ಒಳಗೊಂಡಿರುವ ತರಕಾರಿ. ಮಾತ್ರವಲ್ಲದೆ, ಪ್ರೋಟೀನ್, ಸಿ ಮತ್ತು ಕೆ ಜೀವಸತ್ವಗಳು, ಕಾರ್ಬೋಹೈಡ್ರೇಟ್ಸ್, ಪೊಟಾಶಿಯಂ, ಮ್ಯಾಂಗನೀಸ್ ಅಂಶಗಳು ಇದರಲ್ಲಿ ಯಥೋಚಿತವಾಗಿವೆ. ಹೀಗಾಗಿ ಸೌತೆಕಾಯಿಯನ್ನು ದಿನನಿತ್ಯ ಸೇವಿಸಿದರೆ ದೇಹಕ್ಕೆ ಒದಗುವ ಪ್ರಯೋಜನಗಳು ಒಂದೆರಡಲ್ಲ.

೧. ಮಿದುಳಿನ ಮಿತ್ರ: ಸೌತೆಕಾಯಿಯಲ್ಲಿ ಉರಿಯೂತ ಶಮನಕಾರಿ ಅಂಶವಿರುವುದರಿಂದ, ಮಿದುಳಿನ ಸ್ವಾಸ್ಥ್ಯ ಕಾಯ್ದುಕೊಳ್ಳುವಲ್ಲಿ ಹಾಗೂ ನರಗಳ ಸಂಪರ್ಕಶೀಲತೆ ಹೆಚ್ಚಿಸುವಲ್ಲಿ ಪೂರಕ. ಪ್ರತಿನಿತ್ಯ ಹಿತಮಿತವಾಗಿ ಸೌತೆಕಾಯಿ ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುವುದರ ಜತೆಗೆ ನರಕೋಶಗಳಿಗೆ ವಯಸ್ಸಾಗುವುದಕ್ಕೂ ತಡೆ ಬೀಳುತ್ತದೆ ಎನ್ನುತ್ತಾರೆ ಬಲ್ಲವರು.

೨. ತೂಕ ಇಳಿಸಲು ರಾಮಬಾಣ: ಹೇಳಿಕೇಳಿ ಸೌತೆಯಲ್ಲಿ ಜಲಾಂಶ ಅಧಿಕವಾಗಿದ್ದು, ಕ್ಯಾಲರಿ ಕಡಿಮೆಯಿರುವುದರಿಂದ ಶರೀರದ ತೂಕ ಇಳಿಸಲು ಹರಸಾಹಸ ಪಡುತ್ತಿರುವವರಿಗೆ (ಮತ್ತು ಅದಕ್ಕಾಗಿ ಸಾವಿರಾರು ರೂಪಾಯಿ ಸುರಿಯುತ್ತಿರುವವರಿಗೆ!) ಕೈಗೆಟುಕುವ ಮಿತ್ರ! ಸೌತೆಕಾಯಿ ಹೋಳುಗಳನ್ನು ಜಗಿಯುವುದರಿಂದ ದವಡೆಗಳಿಗೆ ವ್ಯಾಯಾಮವೂ ದೊರಕುತ್ತದೆ. ಮಲಬದ್ಧತೆ ಸಮಸ್ಯೆಯಿರುವವರು ಪ್ರತಿನಿತ್ಯ ಬಳಸಿದಲ್ಲಿ ಸೌತೆಯಲ್ಲಿನ ನಾರಿನಂಶ ಜೀರ್ಣಕ್ರಿಯೆಗೆ ನೆರವಾಗುತ್ತದೆ, ಹೊಟ್ಟೆಯಲ್ಲಿನ ಲಾಭಕಾರಿ ಬ್ಯಾಕ್ಟೀರಿಯಾಗಳಿಗೆ ಪೋಷಣೆ ನೀಡುತ್ತದೆ, ಕರುಳಿನ ಕ್ರಿಯೆಯನ್ನು ಸರಾಗವಾಗಿಸುತ್ತದೆ. ಸೌತೆಕಾಯಿಯನ್ನು ಸಿಪ್ಪೆಸಹಿತ ಕತ್ತರಿಸಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಉದುರಿಸಿಕೊಂಡು ಸೇವಿಸಿದಲ್ಲಿ ಜೀಣಕ್ರಿಯೆ ಸರಾಗವಾಗುತ್ತದೆ. ಸೂಪ್, ಸಲಾಡ್, ಕೋಸಂಬರಿ, ಹಸಿಗೊಜ್ಜುಗಳಲ್ಲಿ ಸೌತೆಕಾಯಿಯನ್ನು ಬಳಸಬಹುದು.

೩. ಕೀಲುಗಳ ಸ್ವಾಸ್ಥ್ಯರಕ್ಷಕ: ಸಿಲಿಕಾ ಅಂಶಗಳಿರುವ ಕಾರಣದಿಂದಾಗಿ ಸೌತೆಕಾಯಿ ಕೀಲುಗಳಿಗೆ ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆ. ಕೀಲುಗಳು ಮತ್ತು ಸಂದುಗಳ ಅಂಗಾಂಶಗಳಿಗೆ ಬಲ ತುಂಬುವ ಕಾರಣದಿಂದಾಗಿ ‘ಸಂಧಿವಾತ’ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ವರದಾನವಾಗಬಲ್ಲದು.

೪. ಕೊಲೆಸ್ಟ್ರಾಲ್ ಮತ್ತು ಮಧುಮೇಹದ ನಿಯಂತ್ರಕ: ಶರೀರದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುವಲ್ಲಿ ಹೆಸರಾಗಿರುವ ಸೌತೆಕಾಯಿ, ರಕ್ತದೊತ್ತಡಕ್ಕೂ ಕಡಿವಾಣ ಹಾಕಬಲ್ಲದು. ಇನ್ಸುಲಿನ್ ಉತ್ಪಾದನೆಗೆ ಮೇದೋಜೀರಕ ಗ್ರಂಥಿಗಳನ್ನು ಉತ್ತೇಜಿಸುವ ಮೂಲಕ ಅದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ತಜ್ಞರು.

೫. ಸೋಂಕು ನಿವಾರಕ: ಸೋಂಕು ಹಾಗೂ ನೋವು ನಿವಾರಣೆಯಲ್ಲಿ ಸೌತೆಕಾಯಿಯ ರಸ ಅನುಪಮ ಕೊಡುಗೆ ನೀಡುತ್ತದೆ. ಸೌತೆಕಾಯಿಯಲ್ಲಿ ಅಂತರ್ಗತವಾಗಿರುವ ಭರಪೂರ ನೀರಿನಂಶ, ಜೀವಕೋಶಗಳಿಗೆ ಪೋಷಣೆ ನೀಡಿ ನಿರ್ಜಲೀಕರಣಕ್ಕೆ (ಅಂದರೆ ಡೀಹೈಡ್ರೇಷನ್‌ಗೆ) ತಡೆ ಒಡ್ಡುವುದರ ಜತೆಜತೆಗೆ ದೇಹವನ್ನು ತಂಪಾಗಿ ಇಡುತ್ತದೆ.

೬. ಹೃದಯಕ್ಕೆ ಆಪ್ತಮಿತ್ರ: ಪೊಟಾಶಿಯಂನ ಆಗರವಾಗಿರುವ ಸೌತೆಕಾಯಿ, ನರವ್ಯೂಹದ ಮತ್ತು ಹೃದಯದ ಸುವ್ಯವಸ್ಥಿತ ಕಾರ್ಯನಿರ್ವಹಣೆಗೆ ಕೊಡುಗೆ ನೀಡುತ್ತದೆ. ಭರಪೂರ ನಾರಿನಂಶದ ಕಾರಣದಿಂದಾಗಿ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗುವುದಕ್ಕೆ ತಡೆಯಾಗಿ ಹೃದಯಸ್ತಂಭನದ ಸಮಸ್ಯೆ ದೂರವಾಗುತ್ತದೆ.

೭. ಉತ್ಸಾಹದಾಯಕ, ನಿಶ್ಶಕ್ತಿ ನಿವಾರಕ: ಕಾರ್ಯಕ್ಷೇತ್ರಗಳಲ್ಲಿ ಸಾಮಾನ್ಯವಾಗಿರುವ ಒತ್ತಡದಿಂದ ಹುಟ್ಟಿಕೊಳ್ಳುವ ತಲೆನೋವಿನ ನಿವಾರಣೆಯಲ್ಲಿ, ನಿಶ್ಶಕ್ತಿಯನ್ನು ಕಿತ್ತೊಗೆಯುವಲ್ಲಿ ಹಾಗೂ ಕಣ್ಣು ಕತ್ತಲಿಟ್ಟುಕೊಂಡು ಬರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಸೌತೆಕಾಯಿ ಎತ್ತಿದಕೈ. ಮೂತ್ರಪಿಂಡದ ಕಲ್ಲುಗಳನ್ನೂ ಇದು ಕರಗಿಸಬಲ್ಲದು. ಶರೀರದಲ್ಲಿನ ವಿಷಕಾರಿ ಹಾಗೂ ಅನುಪಯುಕ್ತ ವಸ್ತುಗಳನ್ನು ನಿರ್ಮೂಲಗೊಳಿಸಬಲ್ಲದು.

೮. ದುರ್ವಾಸನೆ ನಿಯಂತ್ರಕ: ಸೌತೆಕಾಯಿಯ ತೆಳುವಾದ ಹೋಳನ್ನು ನಾಲಿಗೆಯ ಮೇಲಿಟ್ಟುಕೊಂಡು ಬಾಯಿಯ ಮೇಲ್ಭಾಗದ ಅಂಗಳಕ್ಕೆ ಕೆಲಕಾಲ ಒತ್ತಿಹಿಡಿಯುವುದರಿಂದ ಬ್ಯಾಕ್ಟೀರಿಯಾಗಳು ನಾಶವಾಗಿ, ದುರ್ವಾಸನೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

೯. ಆ್ಯಂಟಿ ಆಕ್ಸಿಡೆಂಟ್‌ಗಳ ಭಂಡಾರ: ಶರೀರದಲ್ಲಿ ಜಮೆಯಾಗುವ ವಿಷಕಾರಿ ಅಂಶಗಳಿಂದ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಉಂಟಾಗುವುವು. ಶ್ವಾಸಕೋಶ, ಹೃದಯಕ್ಕೆ ಮಾತ್ರವಲ್ಲದೆ ದೇಹದ ಪ್ರತಿರೋಧಕ ವ್ಯವಸ್ಥೆಗೂ ಸಂಚಕಾರ ಒದಗಿದಾಗ, ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸೌತೆಕಾಯಿ ಈ ಕಾಯಿಲೆಗಳ ಅಪಾಯವನ್ನು ತಗ್ಗಿಸುವುದು.

೧೦. ಕ್ಯಾನ್ಸರ್‌ಗೆ ತಡೆಗೋಡೆ: ಗರ್ಭಾಶಯ, ಅಂಡಾಶಯ, ಎದೆ, ಪ್ರಾಸ್ಟೇಟ್ ಗ್ರಂಥಿ ಮುಂತಾದ ಶರೀರದ ಅಂಗಭಾಗಗಳು ಕ್ಯಾನ್ಸರ್‌ಗೆ ಸಿಲುಕುವಂತಾಗುವುದನ್ನು ಸೌತೆಕಾಯಿ ತಪ್ಪಿಸುತ್ತದೆ.

೧೧. ಸನ್‌ಬರ್ನ್ ತಗ್ಗಿಸಬಲ್ಲದು: ಸೂರ್ಯನ ಪ್ರಖರ ಬಿಸಿಲಿನಿಂದುಂಟಾಗುವ ‘ಸನ್‌ಬರ್ನ್’ ಹಾಗೂ ಚರ್ಮದ ಉರಿಯ ತೀವ್ರತೆಯನ್ನು ಸೌತೆಕಾಯಿ ರಸ ತಗ್ಗಿಸಬಲ್ಲದು. ಕಣ್ಣುಗಳು ಉರಿಯುತ್ತಿದ್ದರೆ ಅಥವಾ ನೋಯುತ್ತಿದ್ದರೆ, ಕಣ್ಣುಮುಚ್ಚಿಕೊಂಡು ಸೌತೆಕಾಯಿಯ ತೆಳುವಾದ ಬಿಲ್ಲೆಗಳನ್ನು ಅವುಗಳ ಮೇಲೆ ಕೆಲಕಾಲ ಇರಿಸಿಕೊಳ್ಳುವುದರಿಂದ ಉರಿ/ನೋವು ಶಮನವಾಗುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿಯನ್ನು ಹೆಚ್ಚು ಬಳಸುವುದರಿಂದ ದಾಹವೂ ತಗ್ಗುತ್ತದೆ, ದೇಹದ ಉಷ್ಣಾಂಶವೂ ಕಡಿಮೆಯಾಗುತ್ತದೆ.

೧೨. ಸೌಂದರ್ಯವರ್ಧಕ: ಸೌತೆಕಾಯಿಯಲ್ಲಿರುವ ಸಲ್ಫರ್ ಹಾಗೂ ಸಿಲಿಕಾನ್ ಅಂಶಗಳು ಕೇಶವರ್ಧನೆಗೂ ಪೂರಕ. ಕೂದಲು ಮತ್ತು ಉಗುರುಗಳ ಶಕ್ತಿ, ಕಾಂತಿ ಹೆಚ್ಚಿಸುವಲ್ಲಿ ಸೌತೆಕಾಯಿ ಹೆಸರಾಗಿದೆ. ಮುಖದಲ್ಲಿ ಕಪ್ಪುಕಲೆ ವ್ಯಾಪಿಸಿದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆರಸವನ್ನು ಬೆರೆಸಿ ನುಣ್ಣಗೆ ಅರೆದು ಲೇಪಿಸಿಕೊಂಡರೆ ಕಲೆಗಳು ಮುಂಗಮಾಯವಾಗುತ್ತವೆ. ಮುಖದ ಮೇಲೆ ಸೌತೆಕಾಯಿ ಸಿಪ್ಪೆಗಳನ್ನು ನಯವಾಗಿ ಉಜ್ಜುವುದರಿಂದ ಮುಖ ಕಾಂತಿಯುತವಾಗುತ್ತದೆ ಎನ್ನುತ್ತಾರೆ ಬಲ್ಲವರು.

೧೩. ಕಲೆನಾಶಕ: ಮನೆಯ ಕಿಟಕಿ-ಬಾಗಿಲುಗಳನ್ನು ತೆರೆಯುವಾಗ/ಮುಚ್ಚುವಾಗ ಕರ್ಕಶ ದನಿ ಹೊಮ್ಮುತ್ತಿದ್ದರೆ ಅದರ ಹಿಂಜಸ್‍ ಗೆ ಸೌತೆಕಾಯಿ ರಸ ಸವರಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಕಲೆಗಳಿಂದಾಗಿ ಕನ್ನಡಿಯ ಮೇಲ್ಮೈ ಮಂಕಾಗಿದ್ದರೆ ಸೌತೆಕಾಯಿಯ ಹೋಳುಗಳಿಂದ ಉಜ್ಜಿ ಸ್ವಚ್ಛಗೊಳಿಸಬಹುದು.

೧೪. ನಿದ್ರಾಜನಕ: ಸೌತೆಕಾಯಿಯ ತಿರುಳನ್ನು ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಸಾಜ್ ಮಾಡುವುದರಿಂದ ಸೊಗಸಾದ ನಿದ್ರೆ ಬರುತ್ತದೆ.

ದಕ್ಷಿಣ ಏಷ್ಯಾ ಮೂಲದ್ದು ಎನ್ನಲಾಗುವ ಸೌತೆಕಾಯಿ ಈಗ ವಿಶ್ವವ್ಯಾಪಿಯಾಗಿದೆ. ಸಾವಯವ ಕೃಷಿಯಲ್ಲಿ ಬೆಳೆದ ಅಥವಾ ಯಾವುದೇ ಕ್ರಿಮಿನಾಶಕ/ರಾಸಾಯನಿಕ ಬಳಸದೆ ಮನೆಯ ಹಿತ್ತಿಲಲ್ಲೋ ಟೆರೇಸ್ ಮೇಲೋ ನೀವೇ ಸ್ವತಃ ಬೆಳೆಸಿದ ಸೌತೆಕಾಯಿಯನ್ನು ದೈನಂದಿನ ಆಹಾರದ ಒಂದು ಭಾಗವಾಗಿ ಮಾಡಿಕೊಳ್ಳುವುದನ್ನು ಮರೆಯದಿರಿ.


ಸಂಬಂಧಿತ ಟ್ಯಾಗ್ಗಳು

Cucumber Soutekaayi For Weight Loss Dhanvantari


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ