ಅಮೃತಬಳ್ಳಿ ಎಂಬ ಅಮೃತವರ್ಷಿಣಿ

Amrutaballi emba Amrutavarshini

14-02-2020

‘ಅಮೃತಬಳ್ಳಿ’. ಹೆಸರೇ ಸೂಚಿಸುವಂತೆ ಇದು ನಿಜಕ್ಕೂ ಅಮೃತಸಮಾನವಾದಂಥ ಔಷಧೀಯ ಸಸ್ಯವೇ. ಕಾರಣ ಈ ಗಿಡಮೂಲಿಕೆಯಲ್ಲಿ ಅಡಕವಾಗಿರುವ ಅನುಪಮ ಉಪಶಾಮಕ ಅಂಶಗಳು.

‘ಮೆನಿಸ್ಪರ್ಮೇಶಿಯೆ (Menispermaceae) ಎಂಬ ಸಸ್ಯಶಾಸ್ತ್ರೀಯ ಕುಟುಂಬಕ್ಕೆ ಸೇರಿದ ಈ ಸಸ್ಯವು ಬಳ್ಳಿಯ ರೂಪದಲ್ಲಿದ್ದು ಯಾವುದೇ ಮರಕ್ಕೆ ಹಬ್ಬಿಕೊಂಡು ಬೆಳೆಯುತ್ತದೆ. ನೋಡಲಿಕ್ಕೆ ವೀಳ್ಯದೆಲೆಯಂತೆ ಕಾಣುವ ಹೃದಯಾಕಾರದ ಎಲೆಗಳು, ಹಳದಿ ಬಣ್ಣದ ಗುಚ್ಛಗಳ ರೂಪದಲ್ಲಿರುವ ಸಣ್ಣ ಹೂವುಗಳು, ಕೆಂಪು ಬಣ್ಣದ ಹಣ್ಣುಗಳು ಈ ಗಿಡದ ವಿಳಾಸ-ವೈಶಿಷ್ಟ್ಯ. ಇದರ ಕಾಂಡಗಳನ್ನು ಕತ್ತರಿಸಿ ನೆಟ್ಟರೂ ಬಳ್ಳಿಗಳು ಹುಟ್ಟಿಕೊಳ್ಳುತ್ತವೆ. ಈ ಕಾರಣದಿಂದಲೇ ಅಮೃತಬಳ್ಳಿಯನ್ನು ‘ಛಿನ್ನರೂಹಾ’ ಎಂದೂ ಕರೆಯಲಾಗುತ್ತದೆ. ಮಾತ್ರವಲ್ಲದೆ, ವತ್ಸಾದನಿ, ಗುಡೂಚಿ, ತಂತ್ರಿಕಾ, ಮಧುಪರ್ಣಿ (ಎಲೆಗಳು ಸಿಹಿಯಾಗಿರುವುದರಿಂದ ಈ ಹೆಸರು), ಅಮೃತಾ (ಎಲೆಯ ಸೇವನೆಯಿಂದ ಮರಣವನ್ನು ದೂರವಿರಿಸಬಹುದು ಎಂಬ ಗ್ರಹಿಕೆಯಿಂದ ಈ ಹೆಸರು) ಎಂಬ ವಿಶಿಷ್ಟ ಹೆಸರುಗಳಿಂದಲೂ ಇದನ್ನು ಕರೆಯಲಾಗುತ್ತದೆ. ಕಾಂಡ ಮತ್ತು ಎಲೆಗಳು ಅಮೃತಬಳ್ಳಿಯ ಉಪಯುಕ್ತ ಭಾಗಗಳಾಗಿವೆ.

ಒಗರು, ಕಹಿ ರಸಗಳನ್ನು ಒಳಗೊಂಡಿರುವ ಅಮೃತಬಳ್ಳಿಯು ಕಫ ಮತ್ತು ವಾತ ದೋಷಗಳನ್ನು ನಿವಾರಿಸುವುದರ ಜತೆಗೆ ದೇಹಕ್ಕೆ ಶಕ್ತಿನೀಡುತ್ತದೆ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವೊಂದು ಸಂಧಿರೋಗಗಳು, ಚರ್ಮವ್ಯಾಧಿ, ಮಧುಮೇಹ, ಜ್ವರ, ಕೆಮ್ಮು ಇವುಗಳಿಗೆ ಇದು ರಾಮಬಾಣ. ಅಮೃತಬಳ್ಳಿಯ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಶರೀರದ ಧಾತುಗಳ ವೃದ್ಧಿಯಾಗುತ್ತದೆ ಎನ್ನುತ್ತಾರೆ ಬಲ್ಲವರು. ಸುದೀರ್ಘ ಜ್ವರದಿಂದ ಬಳಲುತ್ತಿರುವವರಿಗೆ, ಅಮೃತಬಳ್ಳಿ ಮತ್ತು ಹಿಪ್ಪಲಿ  ಸೇರಿಸಿ ಕಷಾಯ ತಯಾರಿಸಿ ಜೇನುತುಪ್ಪ ಬೆರೆಸಿ ನೀಡುವ ಪರಿಪಾಠ ಗ್ರಾಮೀಣ ಭಾಗಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಅಮೃತಬಳ್ಳಿ ಮತ್ತು ಶುಂಠಿಯ ಹದವಾದ ಮಿಶ್ರಣದೊಂದಿಗೆ ತಯಾರಿಸಿದ ಕಷಾಯ ಸೇವಿಸುವುದರಿಂದ ತಾಯಂದಿರ ಎದೆಹಾಲು ಶುದ್ಧಿಯಾಗುತ್ತದೆ.

ಕುಷ್ಟ, ಕಾಮಾಲೆ, ದಮ್ಮು, ರಕ್ತಹೀನತೆ, ರಕ್ತದೊತ್ತಡ, ಅಗ್ನಿಮಾಂದ್ಯ, ಆಮವಾತ, ರಕ್ತಪಿತ್ತ ಹೀಗೆ ಹಲವು ರೋಗಗಳಿಗೆ ರಾಮಬಾಣ ಅಮೃತಬಳ್ಳಿ: ಆದರೆ ಸ್ವಯಂವೈದ್ಯ ಮಾಡಿಕೊಳ್ಳುವುದಕ್ಕಿಂತ ಸೂಕ್ತ ವೈದ್ಯಕೀಯ ಮಾರ್ಗದರ್ಶನ ಪಡೆದು ಮುಂದುವರಿಯುವುದು ಸೂಕ್ತ.


ಸಂಬಂಧಿತ ಟ್ಯಾಗ್ಗಳು

Amrutaballi Destroyer of Diabetes Medicinal Plant Chinnarooha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ