ಕನ್ನಡ ಚಿತ್ರಗಳು ಅನಾಥಪ್ರಜ್ಞೆಯಿಂದ ಬಳಲಬೇಕೇ?

Kannada Chitragalu anaathaprajneyinda balalabeke?

14-02-2020

ಮ. ರಾಮಮೂರ್ತಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ.

ಇಂದಿನ ಪೀಳಿಗೆಯ ಅನೇಕರಿಗೆ ‘ಮ. ರಾಮಮೂರ್ತಿ’ ಎಂದರೆ ತಕ್ಷಣ ತಿಳಿಯಲಿಕ್ಕಿಲ್ಲ. 1950-60ರ ದಶಕದಲ್ಲಿ, ಪರಭಾಷಿಕರ ದಾಳಿಯಿಂದ ನಲುಗಿದ್ದ ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ಮೂಡಿಸಲು, ಕನ್ನಡ ರಾಜ್ಯೋತ್ಸವದಂಥ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಕಲಾವಿದರಿಗೆ ಮನ್ನಣೆ ದೊರಕಿಸಿಕೊಡಲು ಅವಿರತ ಶ್ರಮಿಸಿದವರು ಹೋರಾಟಗಾರ ರಾಮಮೂರ್ತಿ. ಅದರಲ್ಲೂ ನಿರ್ದಿಷ್ಟವಾಗಿ ಹೊಸ ಕನ್ನಡ ಚಲನಚಿತ್ರಗಳ ಬಿಡುಗಡೆಗೆ ರಾಜಧಾನಿ ಬೆಂಗಳೂರಿನಲ್ಲೇ ಚಿತ್ರಮಂದಿರಗಳು ದೊರೆಯದಂಥ ಪರಿಸ್ಥಿತಿ ಉದ್ಭವಿಸಿದಾಗ, ಈ ಸಮಸ್ಯೆಗೆ ಪರಿಣಾಮಕಾರಿಯಾಗಿ ಮದ್ದು ಅರೆದವರು ಇದೇ ಮ. ರಾಮಮೂರ್ತಿ. ಜತೆಗೆ, ಚಲನಚಿತ್ರಗಳ ನಿರ್ಮಾಣದಲ್ಲಿ ಹಾಗೂ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುವಂತೆ ಮಾಡುವಲ್ಲಿಯೂ ಅವರ ಶ್ರಮವಿತ್ತು.

ಇದಾಗಿ ದಶಕಗಳೇ ಸಂದಿದ್ದರೂ, ಮಹಾನಗರಿಯಲ್ಲಿ ಕನ್ನಡ ಚಲನಚಿತ್ರಗಳ ಬಿಡುಗಡೆಗೆ ಹರಸಾಹಸ ಪಡಬೇಕಾದ ಸ್ಥಿತಿ ಇನ್ನೂ ರಾರಾಜಿಸುತ್ತಿರುವುದಕ್ಕೆ ಏನನ್ನಬೇಕು? ಪ್ರಜ್ವಲ್‍ ದೇವರಾಜ್‍ ಮತ್ತು ಸಂಚಾರಿ ವಿಜಯ್‍ ಅಭಿನಯದ ‘ಜಂಟಲ್‍ಮನ್‍’ ಚಿತ್ರಕ್ಕೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಿರುವುದು ಈ ಮಾತಿಗೆ ಪುಷ್ಟಿನೀಡುತ್ತದೆ. ಈ ಚಿತ್ರದ ಕುರಿತಾಗಿ ಒಳ್ಳೆಯ ಅಭಿಪ್ರಾಯ ಮತ್ತು ವಿಮರ್ಶೆಗಳು ದೊರಕಿದ್ದರೂ, ಚಿತ್ರಮಂದಿರಗಳ ಸಮಸ್ಯೆಯಿಂದಾಗಿ ಅದು ಎತ್ತಂಗಡಿಯಾಗಿರುವುದನ್ನು ಕಂಡು ನಟ ಸಂಚಾರಿ ವಿಜಯ್‍ ನೊಂದು ನುಡಿದಿದ್ದಾರೆ.

‘ಜಂಟಲ್‍ಮನ್‍’ ಮಾತ್ರವಲ್ಲ, ಇತ್ತೀಚೆಗಷ್ಟೇ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದ್ದ ‘ದಿಯಾ’, ‘ಲವ್‍ ಮಾಕ್‍ಟೇಲ್‍’ ಚಿತ್ರಗಳನ್ನು ಕಾರಣವಿಲ್ಲದೆ ಚಿತ್ರಮಂದಿರಗಳಿಂದ ಕಿತ್ತುಹಾಕಲಾಗಿತ್ತು ಹಾಗೂ ಅನೇಕ ಸ್ಟಾರ್‍ ನಟರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದೂ ಆಯಿತು. ಆದರೂ ಹೆಚ್ಚೇನೂ ಸಕಾರಾತ್ಮಕ ಪರಿಣಾಮವಾದಂತಿಲ್ಲ. ಪರಭಾಷಾ ಚಿತ್ರಗಳಿಗೆ ಆಗದ ತೊಂದರೆ ಕನ್ನಡ ಚಿತ್ರಗಳಿಗೇಕೆ? ಅವು ಇನ್ನೂ ಅನಾಥಪ್ರಜ್ಞೆಯಿಂದ ಬಳಲಬೇಕೇ? ಎಂಬುದು ಸಹೃದಯಿ ಚಿತ್ರಪ್ರೇಮಿಗಳ ಪ್ರಶ್ನೆ.

ಪರಭಾಷಾ ಚಿತ್ರಗಳ ಹಾವಳಿಯ ಜತೆಜತೆಗೆ, ವಾರಕ್ಕೆ ಹತ್ತು-ಹನ್ನೆರಡು ಕನ್ನಡ ಚಿತ್ರಗಳು ಬಿಡುಗಡೆಯಾಗುವುದೂ ಇಂಥ ಸಮಸ್ಯೆ ಉದ್ಭವಿಸಲು ಕಾರಣವೆನ್ನಲಾಗುತ್ತದೆ. ಆದರೆ ಇದಕ್ಕೊಂದು ಪರಿಹಾರಮಾರ್ಗ ಕಂಡುಕೊಳ್ಳಲು ಚಿತ್ರೋದ್ಯಮಿಗಳೇಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಅಚ್ಚರಿಯ ಸಂಗತಿ.

ಚಲನಚಿತ್ರ ನಿರ್ಮಾಣ ಎಂಬುದೊಂದು ತಪಸ್ಸು. ಪರಿಶ್ರಮ-ಪರಿಕಲ್ಪನೆಗಳ ಹದವಾದ ಸಂಯೋಜನೆಯೊಂದಿಗೆ ತಾವು ರೂಪಿಸಿದ ಚಿತ್ರ ಜನರ ಹೃದಯ-ಮನಸ್ಸುಗಳಿಗೆ ತಟ್ಟಲಿ, ಅದರಿಂದ ತಮ್ಮ ಮತ್ತು ಒಟ್ಟಾರೆಯಾಗಿ ಚಿತ್ರೋದ್ಯಮದ ಆರ್ಥಿಕತೆ ಸುಧಾರಿಸಲಿ ಎಂಬುದು ಸಂಬಂಧಪಟ್ಟವರ ಸಹಜ ನಿರೀಕ್ಷೆಯಾಗಿರುತ್ತದೆ. ಆದರೆ ಆ ನಿರೀಕ್ಷೆಯ ಮೊಗ್ಗು ಅರಳುವ ಮುನ್ನವೇ ಹೀಗೆ ಬಾಡುವುದು ಒಳ್ಳೆಯ ಬೆಳವಣಿಗೆಯಲ್ಲ.

ಹಾಗಾದರೆ ಇಂಥ ಸಮಸ್ಯೆಗಳಿಗೆ ಪರಿಹಾರವೇನು?

ಪ್ರಾಯಶಃ ಮ. ರಾಮಮೂರ್ತಿಯವರೇ ಮತ್ತೊಮ್ಮೆ ಹುಟ್ಟಿಬರಬೇಕೇನೋ?!


ಸಂಬಂಧಿತ ಟ್ಯಾಗ್ಗಳು

Kannada Movies Theatre Problem Gentleman Sanchari Vijay


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ