ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು!

Ollada gandanige mosaralli kallu

14-02-2020

“ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಮುಖ ರಾಜಕೀಯ ಪಕ್ಷಗಳ ವತಿಯಿಂದ ಟಿಕೆಟ್‍ ಸಿಗೋದೇ ಕಷ್ಟ, ಸಿಕ್ರೂ ಹಣಾಹಣಿಗೆ ಹಣ ಹೊಂದಿಸೋದು ಬಲುಕಷ್ಟ, ಹೊಂದಿಸಿಕೊಂಡ್ರೂ ಗೆಲ್ಲೋದು ಕಡುಕಷ್ಟ, ಗೆದ್ರೂ ಮಂತ್ರಿಗಿರಿ ದಕ್ಕೋದು ಶ್ಯಾನೆ ಕಷ್ಟ...!”

-ಇದು ರಾಜಕೀಯ ಚದುರಂಗದಾಟವನ್ನು ಹತ್ತಿರದಿಂದ ಕಂಡೋರಿಂದ ಉದುರುವ ಆಣಿಮುತ್ತು. ಅಲ್ವೇ ಮತ್ತೆ?! ಜನಸೇವೆ ಅಂದ್ರೇನು ಹುಡುಗಾಟಿಕೆಯಾ ಸ್ವಾಮೀ? ಎಷ್ಟೋ ಜನ ಪುಢಾರಿಗಳಿಗೆ ಈ ಎಲ್ಲ ಹಂತಗಳನ್ನು ದಾಟಿಕೊಂಡು ಬಂದು ಮಂತ್ರಿಗಾದಿಯಲ್ಲಿ ಆಸೀನರಾಗುವಷ್ಟರ ಹೊತ್ತಿಗೆ ಹೃದಯ ಬಾಯಿಗೆ ಬಂದಂತಾಗಿರುತ್ತೆ. ಪಳಗಿದ ಹುಲಿಗಳಾದರೆ ಅದನ್ನು ಜೀರ್ಣಿಸಿಕೊಂಡು ಸಲೀಸಾಗಿ ಅಖಾಡಕ್ಕಿಳಿಯುತ್ತಾರೆ. ಏಗಲಾಗದವರಿಗೇ ರವಷ್ಟು ಕಷ್ಟ!

ಅದೇನಾದ್ರೂ ಇರಲಿ. ಜನರ ಆಶೀರ್ವಾದದಿಂದಲೋ, ಹಣದ ಥೈಲಿಯನ್ನು ಬಿಡುಬೀಸಾಗಿ ಸಡಿಲ ಮಾಡಿದ್ದರಿಂದಲೋ, ಬೆವರು-ರಕ್ತ ಬಸಿದ ಕಾರ್ಯಕರ್ತರ ರಣೋತ್ಸಾಹದಿಂದಲೋ ಒಟ್ನಲ್ಲಿ ಚುನಾವಣೆಯಲ್ಲಿ ಗೆಲುವು ಸಿಕ್ಕಿದರೂ, ನಮ್ಮ ಕೆಲ ಪುಢಾರಿಗಳು ತಮ್ಮ ವರಾತವನ್ನ ಬಿಟ್ರೆ ಕೇಳಿ!

ಅಲ್ಲ ಕಣ್ರೀ, ಶಾಸಕನಾಗೋದು, ಮಂತ್ರಿಯಾಗೋದು ಇವೆಲ್ಲದರ ನೇಪಥ್ಯದಲ್ಲಿರೋದು ಜನಸೇವೆಯ ಆಶಯವೇ ಆಗಿರೋವಾಗ, ಯಾವ ಖಾತೆ ಕೊಟ್ರೆ ಏನ್ರೀ? ಒಂದು ಖಾತೆಯ ತೂಕ ಹೆಚ್ಚು, ಮತ್ತೊಂದು ನಗಣ್ಯ; ಈ ಖಾತೆ ಲಕ್ಷ್ಮೀ ಪಟಾಕಿ, ಆ ಖಾತೆ ಟುಸ್‍ ಪಟಾಕಿ ಅಂತೇನಾದ್ರೂ ಇದೆಯಾ? ಯಾವ ಖಾತೆ ಕೊಟ್ರೂ ಅದರಲ್ಲಿ ಸಾಧನೆ ಮಾಡಿ ತೋರಿಸ್ಬೇಕಪ್ಪ. ಅದನ್ನ ಬಿಟ್ಟು, ‘ನಂಗೆ ಅರಣ್ಯ ಖಾತೆ ಬೇಡ, ಕೃಷೀನೇ ಕೊಡಿ’, ‘ಎಂಎಸ್‍ಐಎಲ್‍ ಬ್ಯಾಡ, ಲ್ಯಾಂಡ್‍ ಆರ್ಮಿ ಕೊಡಿ’ ಅಂತ ಹಠ ಮಾಡಿದ್ರೆ ಆ ಶಿವಾ ಮೆಚ್ತಾನೇನ್ರೀ?

ರಾಜ್ಯದಲ್ಲಿ ದಶಕಗಳ ಹಿಂದೆ ಜನತಾ ಸರ್ಕಾರವಿದ್ದಾಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್‍ ಖಾತೆಯಲ್ಲಿ ಜನಮೆಚ್ಚೋ ಸಾಧನೆ ಮಾಡ್ದೋರು ಅಬ್ದುಲ್‍ ನಜೀರ್‍ ಸಾಬ್‍. ಹಳ್ಳಿ ಹಳ್ಳಿಗಳಲ್ಲೂ ಬೋರ್‍ವೆಲ್‍ ತೋಡಿಸೋ ಮೂಲಕ ಅವರು ಮಾಡಿದ ಜಲಕ್ರಾಂತಿ ಕಂಡೋರು ಅವರನ್ನ ‘ನೀರ್‍ಸಾಬ್‍’ ಅಂತಲೇ ಕರೀತಿದ್ರು. ಇವೆಲ್ಲ ಗೊತ್ತಿದ್ದೂ, ‘ನಂಗೆ ಅದೇ ಬೇಕು, ಇದೇ ಬೇಕು’ ಅಂತ ಹಠ ಹಿಡಿದ್ರೆ ಅದು ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಅನ್ನೋ ಗಾದೆಮಾತನ್ನ ನೆನಪಿಸೋಲ್ವೇ?

ಖಾತೆ ಯಾವುದಾದ್ರೆ ಏನ್ರೀ? ಸಾಧನೆ ಮಾಡಬೇಕಷ್ಟೇ..


ಸಂಬಂಧಿತ ಟ್ಯಾಗ್ಗಳು

Minister Public representative achievement Nazeer sab


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ